‘ಮುಖ ಮುಚ್ಕೊಂಡು ಬಾ..ಮುಖ ಮುಚ್ಕೊಂಡು ಹೋಗೋಲ್ಲೆ..’ ಹೀಗೊಂದು ವಿಡಿಯೋ ಸಾಂಗ್ ಇದೀಗ ಸಖತ್ ವೈರಲ್ ಆಗುತ್ತಿದೆ. ನಿರ್ವಾಣ ಫಿಲ್ಮ್ಸ್ ಕ್ರಿಯೇಶನ್ನ ಈ ವಿಡಿಯೋ ಸಾಂಗ್ನಲ್ಲಿ ನಟ ಸಾಯಿಕುಮಾರ್, ಅಯ್ಯೋ ಶ್ರದ್ಧಾ, ಅದ್ವಿತಿ ಶೆಟ್ಟಿ, ಅಶ್ವಿಥಿ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ಹಾಗಂತ ಇದು ಸಿನಿಮಾಕ್ಕೆ ಸಂಬಂಧಪಟ್ಟ ಹಾಡಂತೂ ಖಂಡಿತ ಅಲ್ಲ. ಬದಲಿಗೆ ಕೊರೊನಾ ವಿರುದ್ಧ ಮಾಸ್ಕ್ ಉಪಯೋಗವನ್ನು ಸಾರುವ ಒಂದು ಪ್ರಯತ್ನ. ಇದು ಬೆಂಗಳೂರು ಫೋರ್ಟೀಸ್ ಆಸ್ಪತ್ರೆಯ ಎದೆ ರೋಗ ವಿಭಾಗದ ನಿರ್ದೇಶಕ ಡಾ. ವಿವೇಕ್ ಪಾಡೇಗಲ್ ಅವರ ಪರಿಕಲ್ಪನೆ..ಯೋಜನೆ.
ಕೊರೊನಾ ಮೊದಲ ಅಲೆ ತುಸು ಕಡಿಮೆಯಾಗುತ್ತಿದ್ದಂತೆ ಜನರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಎರಡನೇ ಅಲೆ ಜೋರಾಗಿಯೇ ಅಬ್ಬರಿಸಿತು. ಲಾಕ್ಡೌನ್, ಕರ್ಫ್ಯೂ ನಿಯಮಗಳು ಸ್ವಲ್ಪವೇ ಸಡಿಲವಾದರೂ ಸಾಕು ಜನರು ಒಮ್ಮೆಲೇ, ಕೊರೊನಾ ಸೋಂಕು ಹೋರಟೇಹೋಯ್ತೇನೋ ಎಂಬಂತೆ ರಸ್ತೆಗೆ ಇಳಿಯುತ್ತಾರೆ. ಪಾರ್ಟಿ, ಟ್ರಿಪ್ ಅನ್ಕೊಂಡು ಹೊರಟೇ ಬಿಡ್ತಾರೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ, ದೈಹಿಕ ಅಂತರದಂತಹ ಮುನ್ನೆಚ್ಚರಿಕಾ ನಿಯಮಗಳನ್ನು ಮರೆಯುತ್ತಾರೆ. ಆದರೆ ಅದು ತೀರ ಅಪಾಯಕಾರಿ ಎಂಬುದು ಡಾ. ವಿವೇಕ್ ಪಾಡೇಗಲ್ ಸೇರಿ ಅದೆಷ್ಟೋ ವೈದ್ಯರ ಅಭಿಪ್ರಾಯ ಮತ್ತು ಎಚ್ಚರಿಕೆ. ಕೊವಿಡ್ 19 ಎರಡನೇ ಅಲೆಯಲ್ಲಂತೂ ಅದೆಷ್ಟು ಸಮಸ್ಯೆಗಳು ಎದುರಾದವು. ಆಕ್ಸಿಜನ್ ಅಭಾವ, ಬೆಡ್ಗಳ ಕೊರತೆಯಿಂದ ಸಾವಿನ ಸಂಖ್ಯೆಯೂ ಹೆಚ್ಚಾಯಿತು. ಇದನ್ನೆಲ್ಲ ನೋಡಿದ ಡಾ. ವಿವೇಕ್ ಪಾಡೇಗಲ್ ಹೇಗಾದರೂ ಸರಿ ಜನರಲ್ಲಿ ಕೊರೊನಾ ನಿಯಂತ್ರಣದ ಅರಿವು ಮೂಡಿಸಬೇಕು. ಅದರಲ್ಲೂ ಮುಖ್ಯವಾಗಿ ಮಾಸ್ಕ್ನ ಮಹತ್ವವನ್ನು ತಿಳಿಸಬೇಕು ಎಂದು ಯೋಚಿಸಿ ಇಂಥದ್ದೊಂದು ಯೋಜನೆಗೆ ಮುಂದಾದರು. ವೈದ್ಯಕೀಯ ಕ್ಷೇತ್ರದ ತಜ್ಞರು ಸೂಚಿಸಿದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದರೆ, ಅದರಲ್ಲೂ ಮಾಸ್ಕ್ ತಪ್ಪದೆ ಧರಿಸಿದರೆ ಕೊವಿಡ್ 19 ಪ್ರಸರಣವನ್ನು ಶೇ.70ರಷ್ಟು ತಪ್ಪಿಸಬಹುದು. ಅದೇ ಕಾರಣಕ್ಕೆ ಈಗ ಮಾಸ್ಕ್ನ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲು ‘ಏಯ್ ಸಿಗೋಣ ಗುರು’ ಎಂಬ ಒಂದು ಅರ್ಥ ಪೂರ್ಣ ವಿಡಿಯೋ ಸಾಂಗ್ನ್ನು ಹೊರತರಲಾಗಿದೆ. ವ್ಯಾಕ್ಸಿನ್ ಪಡೆಯಿರಿ ಎಂದೂ ಇದರಲ್ಲಿ ಹೇಳಲಾಗಿದೆ.
ಕೊರೊನಾ ನಿಯಂತ್ರಣದ ಬಗ್ಗೆ ಜನರಲ್ಲಿ ಹೇಗಾದರೂ ಅರಿವು ಮೂಡಿಸಬೇಕು ಎಂದು ಡಾ. ವಿವೇಕ್ ಹಲವು ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಸಫಲತೆ ಕಾಣಲಿಲ್ಲ. ಕೊನೆಗೆ ಹೀಗೊಂದು ಪರಿಕಲ್ಪನೆ ಇಟ್ಟುಕೊಂಡು, ಹಲವು ಗೊಂದಲಗಳೊಂದಿಗೆ Nirvana Films ನ ನಿರ್ಮಾಪಕಿ ಸ್ನೇಹಾ ಐಪ್ ವರ್ಮಾರನ್ನು ಭೇಟಿಯಾದರು. ಅವರೂ ಸಹ ತುಂಬ ಖುಷಿಯಿಂದ ಒಪ್ಪಿಕೊಂಡರು. ನಂತರ ಸಾಹಿತ್ಯವನ್ನು ಸ್ಕ್ರಿಪ್ಟ್ರೂಂನ ರಾಜೇಶ್ ರಾಮಸ್ವಾಮಿ(ರಾಮ್ಸಾಮ್) ಬರೆದರು. ದೀಪಕ್ ಅಲೆಕ್ಸಾಂಡರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೇ, ಇವರಿಬ್ಬರೂ ಸೇರಿ ಹಾಡನ್ನು ಸಖತ್ ಆಗಿ ಹಾಡಿದ್ದಾರೆ. ರ್ಯಾಪರ್ ಸುಮುಖ್ ಸಾಥ್ ನೀಡಿದ್ದಾರೆ. ಇಡೀ ನಿರ್ವಾಣ ತಂಡದ ಶ್ರಮ ಇದರಲ್ಲಿ ಎದ್ದು ಕಾಣುತ್ತದೆ. ಇನ್ನು ವಿಡಿಯೋದಲ್ಲಿರುವ ಕಲಾವಿದರೆಲ್ಲ ಉಚಿತವಾಗಿಯೇ ಅಭಿನಯಿಸಿದ್ದಾರೆ. ನೀವು ಈ ಹಾಡಿನಲ್ಲಿ ತಮಾಷೆಯುಕ್ತ ಪದಪ್ರಯೋಗವನ್ನು ನೋಡಬಹುದು. ಆದರೆ ತುಂಬ ಅರ್ಥಪೂರ್ಣವಾಗಿ, ಅರಿವು ಮೂಡಿಸುವಂತಿದೆ.
ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ. ವಿಡಿಯೋ ವೈರಲ್ ಆಗಬೇಕು..ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಈ ವಿಡಿಯೋವನ್ನೊಮ್ಮೆ ನೀವೂ ನೋಡ್ಕೊಂಡು ಬಿಡಿ..
Published On - 12:00 pm, Tue, 22 June 21