ಮಂಗಳೂರು, ಸೆಪ್ಟೆಂಬರ್ 26: ಕಾಸ್ಮೆಟಿಕ್ ಸರ್ಜರಿ (cosmetic surgery) ವೇಳೆ ಮಂಗಳೂರಿನ ಯುವಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕಿತ್ಸೆ ನೀಡಿದ್ದ ಕ್ಲಿನಿಕ್‌ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಬೀಗ ಜಡಿದಿದೆ. ಮುಂದಿನ ಆದೇಶದವರೆಗೆ ಪರವಾನಿಗೆ ತಡೆ ಹಿಡಿದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಕೆಪಿಎಂಇ (KPME) ಪ್ರಾಧಿಕಾರದ ಅಧ್ಯಕ್ಷ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಬೆಂದೂರ್ ವೆಲ್ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪ್ಲಾಂಟ್ ಕ್ಲಿನಿಕ್‌ಗೆ ಸದ್ಯ ಬೀಗ ಜಡಿಯಲಾಗಿದೆ. ಆರೋಗ್ಯ ಇಲಾಖೆ ತಂಡ ಸ್ಥಳ ತನಿಖೆ ಸಂದರ್ಭ ಕ್ಲಿನಿಕ್ನಲ್ಲಿ ಹಲವು ಲೋಪದೋಷಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಕೆಪಿಎಂಇ ಕಾಯ್ದೆ ಸೆಕ್ಷನ್ 15ರ ಪ್ರಕಾರ ಆದೇಶ ಹೊರಡಿಸಲಾಗಿದೆ. ಪ್ರಕರಣದ ವಿವರವಾದ ತನಿಖೆಗೆ ತಜ್ಞರುಗಳ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ನೀಡುವ ಅಂತಿಮ ವರದಿ ಆಧಾರದಲ್ಲಿ ನಿಯಮಾನುಸಾರ ಕ್ರಮಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಸಾವು
ಮಂಗಳೂರು ಹೊರವಲಯದ ಉಳ್ಳಾಲದ ಅಕ್ಕರಕೆರೆಯ ನಿವಾಸಿ ಮಹಮ್ಮದ್ ಮಾಝೀನ್ (32) ಎಂಬ ಯುವಕ ಆರೋಗ್ಯವಂತನಾಗಿದ್ದ. ಆದರೆ ತನ್ನ ಎದೆಯ ಗಾತ್ರ ದೊಡ್ಡದಿರುವುದೇ ಬಹಳ ಸಮಸ್ಯೆಯನ್ನುಂಟು ಮಾಡಿತ್ತು. ಹೊರಗೆ ತಿರುಗಾಡುವುದಕ್ಕೂ ಅಂಜಿಕೆ ಪಡುವಂತಾಗಿತ್ತು. ಇದಕ್ಕೊಂದು ಸಂಪೂರ್ಣ ಪರಿಹಾರ ಕಂಡುಕೊಳ್ಳಬೇಕೆಂದು ಮಾಝೀನ್ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಫ್ಲಾಂಟ್ ಮತ್ತು ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್‌ಗೆ ಭೇಟಿ ನೀಡಿದ್ದರು.
ವೈದ್ಯರು ಮಾಝೀನ್‌ಗೆ ಗೈನೋಕೋಮಾಸ್ಟಿಯಾ ಎಂಬ ಡಿಸೀಸ್ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಸಮಸ್ಯೆಯನ್ನು ಸಣ್ಣ ಸರ್ಜರಿಯಿಂದ ಸರಿ ಮಾಡಬಹುದೆಂದು ಭರವಸೆಯನ್ನೂ ನೀಡಿದ್ದರು. ವೈದ್ಯರ ಸೂಚನೆಯ ಪ್ರಕಾರ ಮಾಝೀನ್ ಸೆಪ್ಟೆಂಬರ್ 21ರಂದು ತನ್ನ ತಾಯಿ ಮತ್ತು ಮಡದಿಯ ಜೊತೆಗೆ ಕ್ಲಿನಿಕ್‌ಗೆ ಬಂದಿದ್ದ.
ವೈದ್ಯರು ಇದು ಕೇವಲ ಅರ್ಧ ಗಂಟೆಯ ಸರ್ಜರಿ ಅಂತಾ ಹೇಳಿದ್ದರಿಂದ ಈ ಸಮಸ್ಯೆಯಿಂದ ಬೇಗ ಮುಕ್ತಿಹೊಂದುವ ಭರವಸೆಯನ್ನೂ ಕುಟುಂಬ ಹೊಂದಿತ್ತು. ಆದರೆ ವೈದ್ಯರ ಎಡವಟ್ಟಿನಿಂದ ಮಾಝೀನ್ ಮೃತಪಟ್ಟಿದ್ದ.
ಇದನ್ನೂ ಓದಿ: ಮಂಗಳೂರು ವೈದ್ಯರ ಎಡವಟ್ಟು: ಸರ್ಜರಿ ವೇಳೆ ಯುವಕ ಸಾವು, ಪೋಷಕರ ಆಕ್ರೋಶ
ಸರ್ಜರಿ ಮಾಡುವ ಮುನ್ನ ವೈದ್ಯರು ಅರಿವಳಿಕೆ ಚುಚ್ಚು ಮದ್ದು ನೀಡಿದ್ದು, ಮಾಝೀನ್ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಅರ್ಧ ಗಂಟೆಯಲ್ಲಿ ಮುಗಿಯಬೇಕಾದ ಸರ್ಜರಿ ನಾಲ್ಕೂವರೆ ಗಂಟೆ ನಡೆದಿತ್ತು. ಕ್ಲಿನಿಕ್‌ನ ವೈದ್ಯ ಸತೀಶ್ಚಂದ್ರ ಮತ್ತು ಸಿಬ್ಬಂದಿ ಮಾಝೀನ್‌ಗೆ ಪ್ರಜ್ಞೆ ತರಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಕೊನೆಗೆ ಸ್ಥಳೀಯ ಆಸ್ಪತ್ರೆಗೆ ಮಾಝೀನ್‌ನ್ನು ಕೊಂಡುಹೋದರೂ ಅಷ್ಟರಲ್ಲಿ ಮಾಝೀನ್ ಕೊನೆಯುಸಿರೆಳೆದಿದ್ದ.
ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈಗಾಗಲೇ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ತಂಡ ಸ್ಥಳ ತನಿಖೆ ನಡೆಸಿ ಪರಿಶೀಲನೆ ನಡೆಸಿದೆ. ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.