ಶಿವಮೊಗ್ಗ: ವಿಶ್ವವಿದ್ಯಾಲಯದ ಬಾಡಿಗೆ ವಾಹನದ ಬಿಲ್ ಮಂಜೂರು ಮಾಡಲು ಲಂಚ ಕೇಳಿದ ಹಣಕಾಸು ವಿಭಾಗದ ಅಧಿಕಾರಿ ಗಣೇಶಪ್ಪ ಭ್ರಷ್ಟಾಚಾರ ನಿಗ್ರಹ ದಳದ (Anti Corruption Bureau – ACB) ಬಲೆಗೆ ಬಿದ್ದಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಗಣೇಶಪ್ಪ ಎಸಿಬಿ ಬಲೆಗೆ ಬಿದ್ದವರು. ವಿಶ್ವವಿದ್ಯಾಲಯದ ಬಾಡಿಗೆ ವಾಹನದ ₹ 1 ಲಕ್ಷ ಬಿಲ್ ಮಂಜೂರು ಮಾಡಲು ₹ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ವಾಹನ ಮಾಲೀಕನಿಂದ ಲಂಚ ಪಡೆಯುವಾಗ ಎಸಿಬಿ ಅದಿಕಾರಿಗಳು ದಾಳಿ ನಡೆಸಿ, ಗಣೇಶಪ್ಪನನ್ನು ಬಂಧಿಸಿದರು.
ವಾಣಿಜ್ಯ ತೆರಿಗೆ ಆಯುಕ್ತ ಬಂಧನ
ಚಾಮರಾಜನಗರ: ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು ಇನ್ಸ್ಪೆಕ್ಟರ್ಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಚಾಮರಾಜನಗರದ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ, ಲಂಚ ಪಡೆಯುತ್ತಿದ್ದ ರವಿಕುಮಾರ್, ಅವಿನಾಶ್ ಅವರನ್ನು ಬಂಧಿಸಿತು. ಚಾಮರಾಜನಗರ ತಾಲ್ಲೂಕು ನಾಗವಳ್ಳಿ ಗ್ರಾಮದ ಅಂಗಡಿ ಮಾಲೀಕ ತೌಸಿಫ್ ಎಂಬುವವರಿಂದ ಇವರು ₹ 7 ಸಾವಿರ ಲಂಚ ಪಡೆಯುವಾಗ ಅಧಿಕಾರಿಗಳು ವಶಕ್ಕೆ ಪಡೆದರು. ಜಿಎಸ್ಟಿ ಕಟ್ಟುವ ಬದಲು ನಮಗೆ ಹಣ ಕೊಡು ಎಂದು ಅಧಿಕಾರಿಗಳು ಹೇಳಿದ್ದರು. ಈ ಪೈಕಿ ರವಿಕುಮಾರ್ ₹ 2 ಸಾವಿರ ಮತ್ತು ಅವಿನಾಶ್ ₹ 5 ಸಾವಿರ ಹಂಚಿಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ವಿಚಾರಣೆ ಪ್ರಗತಿಯಲ್ಲಿದೆ.
ರುದ್ರೇಶಪ್ಪ ಜಾಮೀನು ಅರ್ಜಿ ತಿರಸ್ಕಾರ
ಶಿವಮೊಗ್ಗ: ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆ ಮೇಲೆ ಎಸಿಬಿ ದಾಳಿ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಶನಿವಾರ ಶಿವಮೊಗ್ಗದ 1ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಗದಗದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ರುದ್ರೇಶಪ್ಪ ಮನೆ ಮೇಲೆ ಎಸಿಬಿ ದಾಳಿ ವೇಳೆ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು ಮತ್ತು ಆಸ್ತಿ ವಿವರಗಳು ಪತ್ತೆಯಾಗಿದ್ದವು. ರುದ್ರೇಶಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ.25ರಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿಯು ಜಾಮೀನಿಗಾಗಿ ಆರೋಪಿಯು ಹೈಕೋರ್ಟ್ಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.
ರೈತ ಆತ್ಮಹತ್ಯೆ
ರಾಯಚೂರು: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆ.ಬಸಾಪುರ ಗ್ರಾಮದ ರೈತ ಶರಣಪ್ಪ (31) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಳೆಯಿಂದಾಗಿ ಭತ್ತದ ಬೆಳೆ ಹಾನಿಯಾಗಿತ್ತು. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:38 pm, Sat, 4 December 21