Sign In

By signing in or creating an account, you agree with Associated Broadcasting Company's Terms & Conditions and Privacy Policy.

21 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಅಧಿಕಾರಿಗಳ ಆಸ್ತಿ ವಿವರ ಇಲ್ಲಿದೆ

ಇಂದು (ಜೂನ್​​ 17)  ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು 21 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಮೇಲೆ ದಾಳಿ ನಡೆಸಿದ್ದಾರೆ.  80 ಸ್ಥಳಗಳಲ್ಲಿ ಶೋಧ ನಡೆಸಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ದಾಖಲೆಗಳ ಪರಿಶೀಲನೆ ಆರಂಭವಾಗಿದೆ.

21 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ; ಅಧಿಕಾರಿಗಳ ಆಸ್ತಿ ವಿವರ ಇಲ್ಲಿದೆ
ಎಸಿಬಿ ದಾಳಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 17, 2022 | 8:40 PM

ಬೆಂಗಳೂರು: ಇಂದು (ಜೂನ್​​ 17)  ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು (ACB Raid)  21 ಸರ್ಕಾರಿ ಅಧಿಕಾರಿಗಳ (Government Employee) ವಿರುದ್ಧ ಅಕ್ರಮ ಆಸ್ತಿ (Corruption) ಗಳಿಕೆ ಆರೋಪದ ಮೇಲೆ ದಾಳಿ ನಡೆಸಿದ್ದಾರೆ.  80 ಸ್ಥಳಗಳಲ್ಲಿ ಶೋಧ ನಡೆಸಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ದಾಖಲೆಗಳ ಪರಿಶೀಲನೆ ಆರಂಭವಾಗಿದೆ.

ಹಾವೇರಿಯ ಸಹಾಯಕ ಅಭಿಯಂತರ ಚಂದ್ರಪ್ಪ ಓಲೇಕಾರ ಮೇಲೆ ಎಸಿಬಿ ದಾಳಿ

ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ರಾಣೆಬೆನ್ನೂರು ತುಂಗಾ ಮೇಲ್ದಂಡೆ ಯೋಜನೆ ಇಲಾಖೆಯ ಸಹಾಯಕ ಅಭಿಯಂತರ ಚಂದ್ರಪ್ಪ ಓಲೇಕಾರ ಅವರ  ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯಲ್ಲಿರಾಣೆಬೆನ್ನೂರು ನಗರದ ಎರಡು ಮನೆಗಳು,  ಐದು ಸೈಟ್ ಗಳು  ಪತ್ನಿ ಹಾಗೂ ಸಂಬಂಧಿಕರ ಹೆಸರಲ್ಲಿರುವ ಸೈಟ್ ಗಳ ಮೇಲೆ ದಾಳಿ ಮಾಡಿದ್ದಾರೆ. ಬ್ಯಾಡಗಿ ತಾಲೂಕಿನ ಆಣೂರು ಮತ್ತು ರಾಣೆಬೆನ್ನೂರು ಸೇರಿದಂತೆ ಒಟ್ಟು 26 ಎಕರೆ ಜಮೀನು, ತಂದೆ, ಮಾವ ಹಾಗೂ ಸಂಬಂಧಿಕರ ಹೆಸರಿನಲ್ಲಿ ಜಮೀನು ಇದೆ. ಮತ್ತು 403 ಗ್ರಾಂ ಬಂಗಾರದ ಆಭರಣಗಳು ಪತ್ತೆಯಾಗಿವೆ. 1 ಕೆ.ಜಿ 600 ಗ್ರಾಂ ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ. 13.30 ಲಕ್ಷ ನಗದು ಹಣ ಪತ್ತೆಯಾಗಿದೆ. 3 ಮೊಟಾರ್ ಬೈಕ್ ಗಳು ಮತ್ತು 1 ಬಾಲೆನೋ ಕಾರ್, ತಂದೆಯ ಹೆಸರಿನಲ್ಲಿರುವ ಒಂದು ಟ್ರ್ಯಾಕ್ಟರ್, ಎರಡು ಹಸುಗಳು ಪತ್ತೆಯಾಗಿವೆ. ಹಾವೇರಿ ಎಸಿಬಿ ಡಿವೈಎಸ್ಪಿ ಗೋಪಿ, ಇನ್ಸ್ ಪೆಕ್ಟರ್ ಬಸವರಾಜ ಬುದ್ನಿ ಹಾಗೂ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನು ಓದಿ: ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 80 ಸ್ಥಳಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ

ಶಿವಮೊಗ್ಗದಲ್ಲಿ ಸಿದ್ದಪ್ಪ ಬಳಿ ಅಪಾರ ಪ್ರಮಾಣದ ಆಸ್ತಿ ಪತ್ತೆ

ಡೆಪ್ಯೂಟಿ ಚೀಫ್​ ಎಲೆಕ್ಟ್ರಿಕಲ್​ ಆಫೀಸರ್​ ಆಗಿರುವ ಸಿದ್ದಪ್ಪ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ 2 ಮನೆ, ಹೊನ್ನಹಳ್ಳಿಯಲ್ಲಿ 7 ನಿವೇಶನ, ಹುಟ್ಟೂರು ಗೋಪದೊಂಡನಹಳ್ಳಿಯಲ್ಲಿ 8 ಎಕರೆ ಜಮೀನು, ತಾವರೆಚಟ್ಟನಹಳ್ಳಿಯಲ್ಲಿ 1 ಎಕರೆ 7 ಗುಂಟೆ ಜಮೀನು ಪತ್ತೆ ಮಾಡಿದ್ದಾರೆ. ಮತ್ತು ಒಂದು ಕಾರು, ಒಂದು ಬೈಕ್ ಸಿದ್ದಪ್ಪ ಹೊಂದಿದ್ದು, ಎಸಿಬಿ ಪರಿಶೀಲನೆ ವೇಳೆ 1 ಕೆಜಿ ಚಿನ್ನ, 7 ಲಕ್ಷ ನಗದು ಪತ್ತೆಯಾಗಿದೆ.

ಗಾರ್ಡನರ್ ಶಿವಲಿಂಗಯ್ಯ  ಮನೆ ಮೇಲೆ ಎಸಿಬಿ ದಾಳಿ

ಶಿವಲಿಂಗಯ್ಯ ಚನ್ನಪಟ್ಟಣದವರಾಗಿದ್ದು ಇದೀಗ ಬನಂಶಂಕರಿಯ ಬಿಡಿಎ ಕಚೇರಿಯಲ್ಲಿ ಗಾರ್ಡನರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.  ಶಿವಲಿಂಗಯ್ಯನ ತಿಂಗಳ ಸಂಬಳ 48,000 ರೂ ಇದೆ.  ಇವರಿಗೆ ಬೆಂಗಳೂರಿನಲ್ಲಿ 3 ಮನೆಗಳಿವೆ, 5 ಖಾಲಿ ಸೈಟ್, ಮೈಸೂರು ಬೆಂಗಳೂರು ಕಾರಿಡಾರ್ ನಲ್ಲಿ (ಚನ್ನಪಟ್ಟಣ) ದಲ್ಲಿ 1 ಎಕರೆ 10 ಗುಂಟೆ ಕಮರ್ಷಿಯಲ್ ಜಾಗ, ಅದೇ ಭಾಗದಲ್ಲಿ 10 ಗುಂಟೆ ಕಮರ್ಷಿಯಲ್ ಜಾಗ ಮತ್ತು 1.10 ಎಕರೆ ಕಮರ್ಷಿಯಲ್ ಲ್ಯಾಂಡ್ ಇದೆ. ಶಿವಲಿಂಗಯ್ಯ ಕಾರ್ನರ್ ಸೈಟ್ ಗಳಿಗೆ ಡೀಲರ್ ಆಗಿದ್ದನು. ಖಾತಾ,ಕಂದಾಯ ಮಾಡಿಸುವವರ ಬಳಿ ಕಮಿಷನ್ ಪಡಿತಿದ್ದ ಆರೋಪವಿದೆ. ಲೇಔಟ್ ನಲ್ಲಿ ಅಕ್ರಮ ಸೈಟ್ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದವರಲ್ಲಿ ಈತನ ಕೈವಾಡವಿದೆ ಎಂದು ಆರೋಪ ಕೇಳಿಬರುತ್ತಿದೆ. ದಾಖಲೆಗಳನ್ನು ಬೇಕಾದವರಿಗೆ ಬಹು ಸರಳವಾಗಿ ನೀಡುತ್ತಿದ್ದ ಆರೋಪವಿದೆ.

ಜನಾರ್ದನ್​​​ ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ) ಆಸ್ತಿ ವಿವರ ಜನಾರ್ದನ್ ಪತ್ನಿ ಬೆಂಗಳೂರು ವಿವಿಯಲ್ಲಿ ತೆಲುಗು ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ  ಮೂಲತಃ ಆಂಧ್ರಪ್ರದೇಶದವರು. ದಾಳಿ ವೇಳೆ ಮನೆಯಲ್ಲಿ 4 ಲಕ್ಷ ನಗದು ಅಂದಾಜು 1 ಕೆಜಿ ಚಿನ್ನ,3 ಕೆಜಿ ಬೆಳ್ಳಿ ಆಭರಣಗಳು, ಕಸ್ತೂರ್​​ಬಾ ರಸ್ತೆಯಲ್ಲಿ ಮಗನ ಹೆಸರಿನಲ್ಲಿ ರೆಸ್ಟೋರೆಂಟ್ ನಿರ್ಮಾಣ ಹಂತದಲ್ಲಿದೆ. ನಾಗದೇವನಹಳ್ಳಿ ಮತ್ತು ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 2 ಸೈಟ್​​ಗಳಿವೆ. ಬನ್ನೇರುಘಟ್ಟ ರಸ್ತೆಯಲ್ಲಿ 3 ಪ್ರತ್ಯೇಕ ಅಪಾರ್ಟ್ಮೆಂಟ್ ನಲ್ಲಿ 3 ಫ್ಲಾಟ್ ಖರೀದಿಗೆ ಅಡ್ವಾನ್ಸ್ ಪಾವತಿ ಮಾಡಲಾಗಿದೆ. ತಲಾ 35 ಲಕ್ಷ ಅಡ್ವಾನ್ಸ್ ನೀಡಿರೋದಿಕ್ಕೆ ದಾಖಲೆ ಪತ್ತೆಯಾಗಿದೆ.  ಜನಾರ್ಧನಮ್ ಒಡೆತನದಲ್ಲಿ ನಡೀತಿರುವ ವೆಂಕಟೇಶ್ವರ ಚಾರಿಟೆಬಲ್ ಟ್ರಸ್ಟ್ ಮತ್ತು ಈ ಟ್ರಸ್ಟ್ ಅಡಿಯಲ್ಲಿ ಚಿತ್ತೂರಿನಲ್ಲಿ ಜ್ಞಾನಜ್ಯೋತಿ ಇಂಟರ್ ನ್ಯಾಷನಲ್ ಸ್ಕೂಲ್ ಇದೆ.

PWD ನಿವೃತ್ತ ಇಂಜಿನೀಯರ್​​ ಮಂಜುನಾಥ್  ಆಸ್ತಿ ವಿವರ

2018,ಮೇ ರಲ್ಲಿ ನಿವೃತ್ತಿ ಹೊಂದಿರುವ ಮಂಜುನಾಥ್ ತಿಂಗಳಿಗೆ 1 ಲಕ್ಷ ಸಂಬಳ ಪಡೆಯುತ್ತಿದ್ದರು. ಬಸವೇಶ್ವರ ನಗರ ಶಾರದಾ ಕಾಲೋನಿಯಲ್ಲಿ ಒಂದು ಮನೆ, ಜಯನಗರ 4th ಬ್ಲಾಕ್​​​ನಲ್ಲಿ ಚೈತನ್ಯ ಗೋಲ್ಡ್ ಕಾಂಪ್ಲೆಕ್ಸ್, ಮಗಳು ಕೆ.ಆರ್ ಪುರ‌ಂನಲ್ಲಿ ವರ್ಷಾ ಹೆಸರಲ್ಲಿ ಕಾರ್ಬನ್ ಕಾರ್ನರ್ ಸ್ಟೋನ್ ಅಪಾರ್ಟ್ಮೆಂಟ್ ಇದೆ. 4 ಎಕರೆ ಜಮೀನು ತಾಯಿಯ ಹೆಸರಲ್ಲಿ ತಾವರೆಕೆರೆ ಸರ್ವೆ ನಂಬರ್ 50/1 ಚುಂಚಘಟ್ಟ ಬೆಂಗಳೂರು. ಬ್ಯಾಟರಾಯನಪುರದಲ್ಲಿ 30*40 ಸೈಟ್​ನಲ್ಲಿ 60 ಲಕ್ಷ ಮೌಲ್ಯದ ಮನೆ. ನಾಗವಾರಪಾಳ್ಯದಲ್ಲಿ 50 ಲಕ್ಷ ಮೌಲ್ಯದ  3 ಅಂಗಡಿಗಳು, ಹಲಗೆವಾಡರಹಳ್ಳಿಯಲ್ಲಿ 40 ಲಕ್ಷ ಅಂದಾಜು ಮೌಲ್ಯದ 1000 ಸ್ಕ್ವೇರ್ ಫೀಟ್ ನ ಸೈಟ್ ಇದೆ. ರಾಜಾಜಿನಗರದಲ್ಲಿ ಅಂದಾಜು 1 ಕೋಟಿಯ 3 ಮಹಡಿಯ ಕಟ್ಟಡ ಇದೆ. ಅಂದಾಜು  10 ಲಕ್ಷ ರೂಪಾಯಿಯ ಒಂದು ಕಿಯಾ ಸೆಲ್ಟಾಸ್ ಕಾರು,  ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮೋಹನ್ ಕುಮಾರ್ ಮನೆಯಲ್ಲೆ ಬಂಗಾರದ ಖಜಾನೆ ಪತ್ತೆ

ಎ.ಮೋಹನ್ ಕುಮಾರ್ ಮನೆಯಲ್ಲಿ 2 ಕೆ.ಜಿ ಬಂಗಾರ, 6 ಕೆ.ಜಿ ಬೆಳ್ಳಿ. 10 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಬ್ಯಾಂಕ್ ಅಕೌಂಟ್ ಗಳು, ಜಮೀನು, ನಿವೇಶನ, ಕಟ್ಟಡಗಳ ದಾಖಲೆಗಳಿಗಾಗಿ ಶೋಧ ಕಾರ್ಯ ನಡೆದಿದೆ. 5 ಜನ ಎ.ಸಿ.ಬಿ ಅಧಿಕಾರಿಗಳು ಹಾಗೂ 25 ಜನ ಸಿಬ್ಬಂದಿಯಿಂದ ತನಿಖೆ ಮುಂದುವರೆದಿದೆ.ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಚಿಕ್ಕಬಳ್ಳಾಪುರದ ಎ.ಸಿ.ಬಿ ಡಿ.ವೈ.ಎಸ್ಪಿ ಪ್ರವೀಣ್ ನೇತೃತ್ವದಲ್ಲಿ ಮನೆಗಳಲ್ಲಿ ಇನ್ನೂ ಲಾಕರ್ ಗಳನ್ನು ತೆರೆಯಬೇಕಿದೆ  ತನಿಖೆ ನಡೆಯುತ್ತಿದೆ.  ಮೋಹನ್ ಕುಮಾರ್ 7 ತಿಂಗಳ ಹಿಂದೆ ಅಷ್ಟೆ ಪ್ರಮೋಷನ್ ಪಡೆದು ಕಾರ್ಯಪಾಲಕ ಇಂಜಿನಿಯರ್ ಆಗಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:20 pm, Fri, 17 June 22