ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 80 ಸ್ಥಳಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ

| Updated By: ಆಯೇಷಾ ಬಾನು

Updated on: Jun 17, 2022 | 8:15 AM

ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಮೇಲೆ ದಾಳಿ ನಡೆಸಿದ್ದು, 80 ಸ್ಥಳಗಳಲ್ಲಿ ಶೋಧ ನಡೆಸಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ದಾಖಲೆಗಳ ಪರಿಶೀಲನೆ ಆರಂಭಿಸಲಾಗಿದೆ.

ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; 80 ಸ್ಥಳಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ
ಎಸಿಬಿ ದಾಳಿ
Follow us on

ಬೆಂಗಳೂರು: ಇಂದು ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು(ACB Raid) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎಸಿಬಿ 21 ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಮೇಲೆ ದಾಳಿ ನಡೆಸಿದ್ದು, 80 ಸ್ಥಳಗಳಲ್ಲಿ ಶೋಧ ನಡೆಸಿ 300 ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡದಿಂದ ದಾಖಲೆಗಳ ಪರಿಶೀಲನೆ ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ 4 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ನಾಲ್ವರು ಅಧಿಕಾರಿಗಳಿಗೆ ಸಂಬಂಧಿಸಿದ 10 ಕಡೆಗಳಲ್ಲಿ ದಾಳಿ ನಡೆದಿದೆ. ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ಟಿ.ಸಿದ್ದಪ್ಪ ನಿವಾಸ, PWD ನಿವೃತ್ತ ಇಇ ಮಂಜುನಾಥ್ ನಿವಾಸ, ಬಿಡಿಎ ಗ್ರೂಪ್ ಸಿ ನೌಕರ ಶಿವಲಿಂಗಯ್ಯ ಮನೆ, ನಿವೃತ್ತ ಅಧಿಕಾರಿ ಜನಾರ್ದನ್ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ.

21 ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
1.ಭೀಮಾ ರಾವ್ ವೈ ಪವಾರ್, ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್. ಬೆಳಗಾವಿ.
2.ಹರೀಶ್.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ.ಉಡುಪಿ.
3.ರಾಮಕೃಷ್ಣ ಎಚ್ .ವಿ. ,AEE.ಮೈನರ್ ನೀರಾವರಿ.ಹಾಸನ.
4.ರಾಜೀವ್ ಪುರಸಯ್ಯ ನಾಯಕ್,ಸಹಾಯಕ ಇಂಜಿನಿಯರ್.PWD.ಕಾರವಾರ.
5.ಬಿ ಆರ್ ಬೋಪಯ್ಯ,ಜೂನಿಯರ್ ಇಂಜಿನಿಯರ್.ಪೊನ್ನಂಪೇಟೆ ಜಿಲ್ಲಾ ಪಂಚಾಯತ್.
6 .ಮಧುಸೂಧನ್.ಜಿಲ್ಲಾ ನೋಂದಣಾಧಿಕಾರಿ.IGR ಕಛೇರಿ. ಬೆಳಗಾವಿ.
7.ಪರಮೇಶ್ವರಪ್ಪ.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ.ಹೂವಿನಹಡಗಲಿ.
8.ಯಲ್ಲಪ್ಪ ಎನ್ ಪಡಸಾಲಿ .RTO.ಬಾಗಲಕೋಟೆ.
9.ಶಂಕರಪ್ಪ ನಾಗಪ್ಪ ಗೋಗಿ.ಯೋಜನಾ ನಿರ್ದೇಶಕರು .ನಿರ್ಮಿತಿ ಕೇಂದ್ರ .ಬಾಗಲಕೋಟೆ.
10 .ಪ್ರದೀಪ್ ಎಸ್ ಆಲೂರ್.ಪಂಚಾಯತ್ ಗ್ರೇಡ್ ಎರಡು ಕಾರ್ಯದರ್ಶಿ.RDPR .ಗದಗ.
11.ಸಿದ್ದಪ್ಪ ಟಿ .ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು.
12.ತಿಪ್ಪಣ್ಣ ಪಿ ಸಿರಸಗಿ.ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್.
13.ಮುರುತುಂಜಯ ಚೆನ್ನಬಸಯ್ಯ ತಿರಾಣಿ.ಸಹಾಯಕ ಕಂಟ್ರೋಲರ್.ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. ಬೀದರ್.
14.ಮೋಹನ್ ಕುಮಾರ್.ಕಾರ್ಯನಿರ್ವಾಹಕ ಇಂಜಿನಿಯರ್. ನೀರಾವರಿ .ಚಿಕ್ಕಬಳ್ಳಾಪುರ ಜಿಲ್ಲೆ.
15. ಶ್ರೀಧರ್. ಜಿಲ್ಲಾ ನೋಂದಣಾಧಿಕಾರಿ ಕಾರವಾರ .
16. ಮಂಜುನಾಥ್ ಜಿ.ನಿವೃತ್ತ ಇಇ. PWD.
17.ಶಿವಲಿಂಗಯ್ಯ. ಗುಂಪು C. ಬಿಡಿಎ.
18. ಉದಯ ರವಿ .ಪೊಲೀಸ್ ಇನ್ಸ್‌ಪೆಕ್ಟರ್.ಕೊಪ್ಪಳ.
19.ಬಿ. ಜಿ.ತಿಮ್ಮಯ್ಯ.ಕೇಸ್ ವರ್ಕರ್.ಕಡೂರು ಪುರಸಭೆ.
20.ಚಂದ್ರಪ್ಪ ಸಿ ಹೋಳೇಕರ್.UTP ಕಛೇರಿ. ರಾಣೆಬೆನ್ನೂರು.
21. ಜನಾರ್ದನ್.ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ).

ಕಲಬುರಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಅವರ ಕಲಬುರಗಿ ಕೆಹೆಚ್ಬಿ ಕಾಲೋನಿಯ ಮನೆ ಮೇಲೆ ಮತ್ತು ಕಲಬುರಗಿ, ಬೀದರ್ ನಗರದಲ್ಲಿನ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ತಿಪ್ಪಣ್ಣ ಸಿರಸಗಿ ಬೀದರ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರಿಗೆ ಉದ್ಯೋಗ ಕೊಡಿಸೋದಾಗಿ ಹೇಳಿ ಮಹಿಳೆಯರಿಂದ ಲಕ್ಷಾಂತರ ಹಣ ಪಡೆದಿದ್ದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ದಾಳಿ ನಡೆದಿದೆ. ಇದನ್ನೂ ಓದಿ: ದೇವನಹಳ್ಳಿಯಲ್ಲಿ ಭುಗಿಲೆದ್ದ ಆಕ್ರೋಶ; ಅಂಗಡಿ ಮುಚ್ಚಿಸಿ, ವಾಹನ ತಡೆದು ರೈತರ ಪಂಚಿನ ಮೆರವಣಿಗೆ

ಬಾಗಲಕೋಟೆಯಲ್ಲೂ ಅಧಿಕಾರಿ ಮನೆ ಮೇಲೆ ಎಸಿಬಿ ರೇಡ್
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರ್ ಗೋಗಿ ಅವರ ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 55ರಲ್ಲಿನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕರ್ ಗೋಗಿ ಹಾಗೂ ಆಪ್ತರ ಮನೆ ಸೇರಿ 5 ಕಡೆ ದಾಳಿ ನಡೆಸಲಾಗುತ್ತಿದೆ. ಎಸಿಬಿ DySP ಸುರೇಶ್ ರೆಡ್ಡಿ ನೇತೃತ್ವದಲ್ಲಿ ದಾಳಿ, ಪರಿಶೀಲನೆ ನಡೆಯುತ್ತಿದೆ.

ಧಾರವಾಡದಲ್ಲಿ ಆರ್ಟಿಒ ಅಧಿಕಾರಿ ಮನೆ ಮೇಲೆ ಎಸಿಬಿ ರೇಡ್
ಬಾಗಲಕೋಟೆ ಆರ್‌ಟಿಒ ಯಲ್ಲಪ್ಪ ಪಡಸಾಲಿ ಅವರ ಧಾರವಾಡದ ಲಕಮನಹಳ್ಳಿ ಕೆಎಚ್‌ಬಿ ಕಾಲೋನಿಯ ಮನೆ ಮೇಲೆ ಎಸಿಬಿ DySP ಮಹಾಂತೇಶ ಜಿದ್ದಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಹಾಸನದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ
ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ರಾಮಕೃಷ್ಣ ಮನೆ, ಕಚೇರಿ ಸೇರಿ ಎಸಿಬಿ ಡಿವೈ‌ಎಸ್‌ಪಿ ಸತೀಶ್ ನೇತೃತ್ವದಲ್ಲಿ 3 ಕಡೆ ಎಸಿಬಿ ದಾಳಿ ನಡೆಸಿದೆ. ವಿದ್ಯಾನಗರದಲ್ಲಿರುವ ನಿವಾಸ, ಹಿರಿಸಾವೆ ನಿವಾಸ ಹಾಗೂ ಕುವೆಂಪುನಗರದಲ್ಲಿರುವ ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದ್ಯ ದಾಖಲೆ‌ ಪರಿಶೀಲನೆ ಮಾಡಲಾಗುತ್ತಿದೆ.

ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ರೇಡ್
ಗಂಗಾವತಿ ಗ್ರಾಮೀಣ ಠಾಣೆ CPI ಆಗಿದ್ದ ಪೊಲೀಸ್ ಅಧಿಕಾರಿ ಉದಯರವಿ ಮನೆ ಮೇಲೆ ಎಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. 1 ತಿಂಗಳ ಹಿಂದೆ ಉದಯರವಿ ರಾಜ್ಯ ಗುಪ್ತದಳ ಇಲಾಖೆಗೆ ವರ್ಗಾವಣೆಯಾಗಿದ್ದರು. ಗಂಗಾವತಿಯ ವಡ್ಡಹರಟ್ಟಿಯಲ್ಲಿರೋ‌ ಮನೆ ಹಾಗೂ ಉದಯರವಿ ಸ್ನೇಹಿತನ ಮನೆ ಮೇಲೆ ದಾಳಿ ಮಾಡಲಾಗಿದೆ. ಇವರು ಚುನಾವಣೆಗೆ ಸ್ಪರ್ಧಿಸ್ತಾರೆಂಬ ಮಾತು ಕೇಳಿ ಬಂದಿತ್ತು. ಸದ್ಯ ರಾಯಚೂರು ಜಿಲ್ಲೆ ಮುದಗಲ್ನಲ್ಲಿ ಎರಡು ಕಡೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: IND vs SA: ನಾಲ್ಕನೇ ಟಿ20 ಪಂದ್ಯಕ್ಕೆ ಹೊಸ ಪ್ರಯೋಗ ಮಾಡಲು ಮುಂದಾದ ಪಂತ್-ದ್ರಾವಿಡ್

ಬೆಳಗಾವಿಯಲ್ಲಿ PWD ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ
ನಿವೃತ್ತಿ ಹಂತದಲ್ಲಿದ್ದ PWD ಇಲಾಖೆ ಅಧೀಕ್ಷಕ ಬಿ.ವೈ.ಪವಾರ್ ಮನೆ ಮೇಲೆ ದಾಳಿ ನಡೆದಿದೆ. ಬಿ.ವೈ.ಪವಾರ್‌ಗೆ ಸೇರಿದ ಮನೆ, ಕಚೇರಿ ಸೇರಿ 6 ಕಡೆ ದಾಳಿ ಮಾಡಲಾಗಿದೆ.

ಹಾವೇರಿಯಲ್ಲಿ ಎಇ ಚಂದ್ರಪ್ಪ ಓಲೇಕಾರ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ
ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಅಭಿಯಂತರ ಚಂದ್ರಪ್ಪ ಓಲೇಕಾರ ಮನೆ, ಕಚೇರಿ ಸೇರಿ 3 ಕಡೆ ದಾಳಿ ನಡೆದಿದೆ. ರಾಣೆಬೆನ್ನೂರು ನಗರದ ಸಿದ್ಧಾರೂಢನಗರದಲ್ಲಿರುವ ನಿವಾಸ, ಮಾಗೋಡ ರಸ್ತೆಯಲ್ಲಿರುವ ಯುಟಿಪಿ ಕಚೇರಿ ಹಾಗೂ ಬ್ಯಾಡಗಿ ತಾಲೂಕಿನ ಆಣೂರು ಗ್ರಾಮದ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:47 am, Fri, 17 June 22