ಬೆಂಗಳೂರು: ಭ್ರಷ್ಟ ಅಧಿಕಾರಿ, BBMP ನಗರ ಯೋಜನೆ ಪ್ರಭಾರ ಸಹಾಯಕ ನಿರ್ದೇಶಕ S.N.ದೇವೇಂದ್ರಪ್ಪಗೆ ಮತ್ತೆ ಎಸಿಬಿ ಶಾಕ್ ಕೊಟ್ಟಿದೆ. ದೇವೇಂದ್ರಪ್ಪ ಅವರ ಅಮೃತನಗರದ ಮನೆ, ಹಲಸೂರಿನ ಗುಪ್ತ ಲೇಔಟ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫೆಬ್ರವರಿ 5ರಂದು ₹20 ಲಕ್ಷ ಲಂಚ ಸ್ವೀಕರಿಸುವಾಗ S.N.ದೇವೇಂದ್ರಪ್ಪ ಎಸಿಬಿ ಬಲೆಗೆ ಬಿದ್ದಿದ್ದರು. ಸದ್ಯ ದೇವೇಂದ್ರಪ್ಪ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೇವೇಂದ್ರಪ್ಪನ ಆಪ್ತ ಶ್ರೀನಿವಾಸ ಮೂರ್ತಿ ಎಸಿಬಿ ವಶಕ್ಕೆ
ಇನ್ನು ದೇವೇಂದ್ರಪ್ಪನ ಆಪ್ತನಾಗಿರುವ ಶ್ರೀನಿವಾಸ ಮೂರ್ತಿ ಮನೆ ಮೇಲೂ ದಾಳಿ ನಡೆದಿದೆ. ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ದೇವೇಂದ್ರಪ್ಪನ ಆಪ್ತ ಶ್ರೀನಿವಾಸ ಮೂರ್ತಿ ಹಾಗೂ ಅವರ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಎಸಿಬಿ ವಶಕ್ಕೆ ಪಡೆದಿದ್ದಾರೆ. ಎಸಿಬಿ ವಾಹನದಲ್ಲೇ ಶ್ರೀನಿವಾಸ್ ಮೂರ್ತಿಗೆ ಸೇರಿದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆದಿದೆ.
ಕಳೆದ ತಿಂಗಳ 8ರಂದು ಸಹ ದೇವೇಂದ್ರಪ್ಪನ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿಗೂ ಮುನ್ನ ಲೆಕ್ಕಕ್ಕೆ ಸಿಗದ ಲಕ್ಷ ಲಕ್ಷ ನಗದು ಸಿಕ್ಕಿತ್ತು. ಪತ್ತೆಯಾದ ಹಣ ಮೂಲಕ ಅಂದು ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ಆಸ್ತಿ, ನೂರುಗಟ್ಟಲೇ ಲೀಟರ್ ಮದ್ಯದ ಬಾಟಲ್ಗಳು ಪತ್ತೆಯಾಗಿದ್ದವು. ದೇವೇಂದ್ರಪ್ಪ ಕಾರಿನಲ್ಲಿ 50ಕ್ಕೂ ಹೆಚ್ಚು ಬಿಬಿಎಂಪಿ ಕಡತಗಳು, ಮೇಲಾಧಿಕಾರಿಗಳ ಹೆಸರಿನ ಸೀಲುಗಳು, ಸೂಕ್ತ ಲೆಕ್ಕವಿಲ್ಲದ 7.40 ಲಕ್ಷ ನಗದು ಸೇರಿ ಒಟ್ಟಾರೆ 27 ಲಕ್ಷದ 40 ಸಾವಿರ ರೂ ಹಣ ವಶಕ್ಕೆ ಪಡೆಯಲಾಗಿತ್ತು.
ದೇವೇಂದ್ರಪ್ಪಗೆ ಸೇರಿದ ಬ್ಯಾಂಕ್ ಲಾಕರ್ ಪತ್ತೆ
ಅಮೃತನಗರದ ನಿವಾಸದ ಮೇಲೆ ದಾಳಿ ವೇಳೆ ದೇವೇಂದ್ರಪ್ಪನಿಗೆ ಸೇರಿದ ಬ್ಯಾಂಕ್ ಲಾಕರ್ ಪತ್ತೆಯಾಗಿದೆ. ಎಸಿಬಿ ತಂಡ ಬ್ಯಾಂಕ್ ಲಾಕರ್ ಓಪನ್ಗೆ ಮುಂದಾಗಿದೆ. ಸದ್ಯ ಲಾಕರ್ ನಲ್ಲಿ ಮಹತ್ವದ ದಾಖಲೆ ಹಾಗೂ ವಸ್ತುಗಳು ಸಿಗುವ ನಿರೀಕ್ಷೆ ಇದೆ.