ಹುಬ್ಬಳ್ಳಿ: ಪ್ರೀತಿಗೆ ಅಡ್ಡ ಬಂದ ಯುವತಿಯ ಸಹೋದರನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆಗೆ ಹೊಸ ಟ್ವಿಸ್ಟ್ ಸಿಗುತ್ತಿದೆ. ಏ.12ರಂದು ಹುಬ್ಬಳ್ಳಿಯಲ್ಲಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೊಲೆಯಾದ ವ್ಯಕ್ತಿಯ ಸಹೋದರಿಯೇ ಈಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಆ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆ ಹಿಂದಿನ ರಹಸ್ಯಗಳೆಲ್ಲ ಹೊರಬರುತ್ತಿವೆ.
ಮಾಡೆಲ್ ಆಗಿ ಗುರುತಿಸಿಕೊಂಡಿರುವುದೂ ಅಲ್ಲದೆ, ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಶನಾಯ ಕಾಟವೆ ಈಗ ಪೊಲೀಸರ ಅತಿಥಿ ಆಗಿರುವ ಯುವತಿ. ಶನಾಯ ಮತ್ತು ನಿಯಾಜ್ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಶನಾಯ ಸಹೋದರ ರಾಕೇಶ್ ಅಡ್ಡಿಪಡಿಸಿದ್ದ. ಹಾಗಾಗಿ ನಿಯಾಜ್ ತನ್ನ ಸಹಚರರೊಂದಿಗೆ ಸೇರಿ ರಾಕೇಶ್ನನ್ನು ಹತ್ಯೆ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಶನಾಯ ಕೂಡ ಭಾಗಿ ಆಗಿರುವ ಬಗ್ಗೆ ಶಂಕೆ ವ್ಯಕ್ತಿವಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರಿಂದ ಶನಾಯ ಬಂಧನವಾಗಿದೆ. ರಾಕೇಶ್ ಕೊಲೆಯಲ್ಲಿ ಶನಾಯ ಕೈವಾಡ ಕೂಡ ಇದೆ ಎನ್ನಲಾಗುತ್ತಿದೆ. ನಿಯಾಜ್, ಶನಾಯ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ. ಯಾವುದೇ ಸುಳಿವು ನೀಡಬಾರದು ಎಂಬ ಕಾರಣಕ್ಕೆ ರಾಕೇಶ್ ಮೃತದೇಹದ ರುಂಡ-ಮುಂಡ ಕತ್ತರಿಸಲಾಗಿತ್ತು. ಕೊಲೆ ನಂತರ ಶನಾಯ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಆದರೆ ಈಗ ಈ ನಟಿ ಕಮ್ ಮಾಡೆಲ್ ಖಾಕಿ ಬೆಲೆಗೆ ಬಿದ್ದಿದ್ದಾಳೆ.
ಭೀಕರವಾಗಿ ನಡೆದ ಈ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸಲು 5 ತಂಡಗಳನ್ನು ಪೊಲೀಸರು ರಚಿಸಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಈ ವಿವರಗಳು ಸಿಕ್ಕಿವೆ. ಕೇಸ್ಗೆ ಸಂಬಂಧಿಸಿದಂತೆ ನಿಯಾಜ್, ಶನಾಯ, ಮಲ್ಲಿಕ್, ಫಿರೋಜ್, ಸೈಫುದ್ದೀನ್ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸ್ ತನಿಖೆ ಜಾರಿಯಲ್ಲಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರುಂಡ, ಮುಂಡ ಬೇರ್ಪಡಿಸಿ ಯುವಕನ ಕೊಲೆ ಪ್ರಕರಣ; ನಾಲ್ವರ ಬಂಧನ
(Actress Shanaya Katwe arrested in brother murder case in Hubballi)
Published On - 10:30 am, Fri, 23 April 21