ಪೂರ್ಣಾವಧಿ ಸಿಎಂ ಎಂದ ಬಳಿಕ ಡಿಕೆ ಶಿವಕುಮಾರ್ ಮುಖ ನೋಡುತ್ತಲೇ ವರಸೆ ಬದಲಿಸಿದ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಕುರಿತು ಕೂಡ್ಲಿಗಿಯಲ್ಲಿ ನೀಡಿದ ಹೇಳಿಕೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ ನೋಡಿದ ನಂತರ ಸಿದ್ದರಾಮಯ್ಯ ಹೇಳಿಕೆಯನ್ನು ತುಸು ಬದಲಾಯಿಸಿದ್ದೇ ಇದಕ್ಕೆ ಕಾರಣ. ಹಾಗಾದರೆ ಮೊದಲಿಗೆ ಸಿಎಂ ಹೇಳಿದ್ದೇನು? ಡಿಕೆಶಿ ಮುಖ ನೋಡಿದ ನಂತರ ಆಡಿದ ಮಾತೇನು? ಇಲ್ಲಿದೆ ಮಾಹಿತಿ.

ಪೂರ್ಣಾವಧಿ ಸಿಎಂ ಎಂದ ಬಳಿಕ ಡಿಕೆ ಶಿವಕುಮಾರ್ ಮುಖ ನೋಡುತ್ತಲೇ ವರಸೆ ಬದಲಿಸಿದ ಸಿದ್ದರಾಮಯ್ಯ!
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ

Updated on: Nov 10, 2025 | 9:15 AM

ಬೆಂಗಳೂರು, ನವೆಂಬರ್ 10: ಕರ್ನಾಟಕ ಕಾಂಗ್ರೆಸ್ (Congress) ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಚರ್ಚೆ ಕಳೆದ ಕೆಲವು ತಿಂಗಳುಗಳಿಂದ ಜೋರಾಗಿದೆ. ಜತೆಗೆ, ನವಂಬರ್ ಕ್ರಾಂತಿ ಕೂಡ ಸದ್ದು ಮಾಡುತ್ತಿದೆ. ಹಲವು ಬಾರಿ, ತಾವೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಹೇಳುತ್ತಾ ಬರುತ್ತಿದ್ದ ಸಿದ್ದರಾಮಯ್ಯ (Siddaramaiah) ಕೆಲವು ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ‘‘ಹೈಕಮಾಂಡ್ ತೀರ್ಮಾನಿಸಿದರೆ’’ ಎಂದು ಹೇಳಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿಗಳ ಮತ್ತೊಂದು ಹೇಳಿಕೆ, ಊಹಾಪೋಹಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ವಿಜಯಪುರ ಜಿಲ್ಲೆಯ ಕೂಡ್ಲಿಗಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಆರಂಭದಲ್ಲಿ, ‘ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದೇನೆ’ ಎಂದು ಹೇಳಿದ್ದಾರೆ. ಇದಾದ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ ನೋಡಿ ಮಾತನ್ನು ತುಸು ಬದಲಿಸಿದರು. ‘ನಮ್ಮ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಲಿದೆ’ ಎಂದರು.

ಮುಖ್ಯಮಂತ್ರಿ ಆಗಿ ಪೂರ್ಣಾವಧಿ ಮುಂದುವರೆಯಲಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ ನಂತರ ಡಿಕೆಶಿ ಮುಖ ನೋಡಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸಂಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಿ ಮುಂದುವರೆಯುವ ಬಗ್ಗೆ ಖುದ್ದು ಸಿದ್ದರಾಮಯ್ಯಗೇ ಅನುಮಾನವಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಹಿಂದೆ ಮೈಸೂರಿನಲ್ಲಿ ನೀಡಿದ್ದ, ‘‘ಹೈಕಮಾಂಡ್ ನಿರ್ಧರಿಸಿದರೆ’’ ಎಂಬ ಹೇಳಿಕೆ ಚರ್ಚೆಗೀಡಾದ ರೀತಿಯಲ್ಲೇ ಕೂಡ್ಲಿಗಿಯಲ್ಲಿ ನೀಡಿರುವ ಹೇಳಿಕೆ ಬಗ್ಗೆಯೂ ಗುಸುಗುಸು ಆರಂಭವಾಗಿದೆ.

ಕೂಡ್ಲಿಗಿಯ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಚಾಲನೆ

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ತುಂಗಭದ್ರಾ ನದಿಯ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಈ ಯೋಜನೆ ಕೊನೆಗೂ ಇದೀಗ ಸಾಕಾರಗೊಂಡಿದೆ. ಇಷ್ಟೇ ಅಲ್ಲದೆ, ಕೋಟ್ಯಂತರ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಯೋಜನೆಗಳಿಗೆ ಚಾಲನೆಯನ್ನೂ ಮುಖ್ಯಮಂತ್ರಿಗಳು ನೀಡಿದರು.

ಇದನ್ನೂ ಓದಿ: ದೆಹಲಿಯಲ್ಲೇ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿಎಂ ಬಣ: ಸಿದ್ದರಾಮಯ್ಯ ತಂತ್ರವೇನು?

ನಂತರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎರಡು ವರ್ಷಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಕಬ್ಬಿಗೆ ದರ ನಿಗದಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ