ದೆಹಲಿಯಲ್ಲೇ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿಎಂ ಬಣ: ಸಿದ್ದರಾಮಯ್ಯ ತಂತ್ರವೇನು?
ನವೆಂಬರ್ ಕ್ರಾಂತಿ ಚರ್ಚೆಗಳ ನಡುವೆ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ನ.16ರಂದು ಸಂಸದ ಹಿಟ್ನಾಳ್ ಮನೆಯಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಇದು ಹೈಕಮಾಂಡ್‌ಗೆ ಪ್ರಮುಖ ಸಂದೇಶ ರವಾನಿಸುವ ಪ್ರಯತ್ನ ಎನ್ನಲಾಗಿದ್ದು, ರಾಜ್ಯ ರಾಜಕೀಯದ ಹಲವು ವಿಚಾರಗಳು ಔತಣಕೂಟದಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

ಕೊಪ್ಪಳ, ನವೆಂಬರ್ 09: ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ವಿಚಾರ ಭಾರಿ ಸದ್ದು ಮಾಡುತ್ತಿರುವ ನಡುವೆ ದೆಹಲಿಯಲ್ಲೇ ಶಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ನ.16ರಂದು ದೆಹಲಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ್ ಮನೆಯಲ್ಲಿ ಡಿನ್ನರ್ ಪಾರ್ಟಿ ನಿಗದಿಯಾಗಿದ್ದು, ಔತಣಕೂಟದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ. ಸಿಎಂ ಬಣದ ಸಚಿವರು, ಶಾಸಕರು ಮತ್ತು ಸಂಸದರು ಕೂಡ ಈ ವೇಳೆ ಉಪಸ್ಥಿತರಿರಲಿದ್ದು, ಡಿನ್ನರ್ ಪಾರ್ಟಿ ಬಗ್ಗೆ ಹಿಟ್ನಾಳ್ ಸೋದರರು ಈಗಾಗಲೇ ಖಚಿತಪಡಿಸಿದ್ದಾರೆ.
ಔತಣಕೂಟ ಯಾಕೆ?
ದೆಹಲಿಯಲ್ಲಿ ಮನೆ ಸಿಕ್ಕಿರುವ ಕಾರಣಕ್ಕೆ ಔತಣಕೂಟ ಏರ್ಪಡಿಸಿದ್ದೇನೆ ಎಂದು ಡಿನ್ನರ್ ಪಾರ್ಟಿಗೆ ಸಂಸದ ರಾಜಶೇಖರ ಹಿಟ್ನಾಳ್ ಕಾರಣ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮೂರು ದಿನ ದೆಹಲಿಯಲ್ಲಿ ಇರುತ್ತಾರೆ. ಹೀಗಾಗಿ ಸಿಎಂ ಹಾಗೂ ಅವರ ಜೊತೆಗೆ ಬಂದವರಿಗೆ ಔತಣಕೂಟಕ್ಕೆ ಕರೆಯುತ್ತೇನೆ ಎಂದು ಅವರು ತಿಳಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಂದರೂ ಅವರನ್ನು ಔತಣಕೂಟಕ್ಕೆ ಕರೆಯುತ್ತೇನೆ ಎಂದು ಹಿಟ್ನಾಳ್ ಹೇಳಿದ್ದು, ಡಿನ್ನರ್ ಪಾರ್ಟಿ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ 15ರಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಆದಷ್ಟು ಬೇಗ ಸಿಎಂ ಆಗ್ತಾರೆಂದು ದೈವ ಭವಿಷ್ಯ
ಹೈಕಮಾಂಡ್‌ಗೆ ಸಂದೇಶ ರವಾನಿಸಲು ಪ್ಲ್ಯಾನ್?
ನವೆಂಬರ್ ಕ್ರಾಂತಿ ವಿಚಾರ ರಾಜ್ಯದಲ್ಲಿ ಚರ್ಚೆಯಲ್ಲಿದ್ದು, ಡಿಸಿಎಂ ಡಿಕೆಶಿ ಸಿಎಂ ಆಗಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಈ ನಡುವೆ ದೆಹಲಿಯಲ್ಲೇ ಈ ರೀತಿಯ ಔತಣ ಕೂಡದ ಆಯೋಜನೆ ಹತ್ತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಡಿನ್ನರ್ ಪಾರ್ಟಿ ವೇಳೆ ರಾಜ್ಯ ರಾಜಕೀಯ ವಿಚಾರದ ಚರ್ಚೆಯೂ ಆಗುವ ಸಾಧ್ಯತೆ ಇದ್ದು, ಆ ಮೂಲಕ ಹೈಕಮಾಂಡ್‌ಗೆ ತಮ್ಮ ಶಕ್ತಿ ತೋರಿಸಲು ಸಿದ್ದರಾಮಯ್ಯ ಮುಂದಾಗ್ತಿದ್ದಾರಾ ಎಂಬ ಬಗ್ಗೆ ಅನುಮಾನ ರಾಜಕೀಯ ವಲಯದಿಂದ ವ್ಯಕ್ತವಾಗಿದೆ.
‘ಔತಣಕೂಟಕ್ಕೆ ನನ್ನ ಕರೆದಿಲ್ಲ’
ದೆಹಲಿಯಲ್ಲಿ ಸಂಸದ ಹಿಟ್ನಾಳ್ ಔತಣಕೂಟ ಆಯೋಜನೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಡಿನ್ನರ್ ಪಾರ್ಟಿಗೆ ನನ್ನ ಅವರೇನು ಕರೆದಿಲ್ಲ, ಹಾಗಾಗಿ ನಾನು ಹೋಗಲ್ಲ. ಸಿಎಂ ದೆಹಲಿಗೆ ಹೋಗ್ತಿರೋದು ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



