ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!

Ali Khamenei Death: ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಚಿಕ್ಕಬಳ್ಳಾಪುರದ ಅಲೀಪುರದ ಮಸೀದಿಗೂ ಬಂದಿದ್ದರು. ಅಲೀಪುರದ ಸುಮಾರು 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು ಎನ್ನಲಾಗಿದ್ದು, ಇದೀಗ ಖಮೇನಿ ಹತ್ಯೆಯಿಂದ ಅಲೀಪುರದ ಶಿಯಾ ಮುಸ್ಲಿಮರು ದುಃಖತಪ್ತರಾಗಿದ್ದಾರೆ.

ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!
ಅಯತೊಲ್ಲಾ ಅಲಿ ಖಮೇನಿ
Image Credit source: TV9 Network
Edited By:

Updated on: Mar 01, 2026 | 10:25 AM

ಚಿಕ್ಕಬಳ್ಳಾಪುರ, ಮಾರ್ಚ್​ 1: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ( Ali Khamenei) ಹತ್ಯೆ ಸುದ್ದಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲಿ ಆಳವಾದ ಶೋಕ ಮಡುಗಟ್ಟಿದೆ. ಹತ್ಯೆ ವಿಚಾರ ಹೊರಬಂದ ಬಳಿಕ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ನಡೆಸಲು ತೀರ್ಮಾನಿಸಿದ್ದಾರೆ. ಅಲಿಪುರ ಗ್ರಾಮವನ್ನು ‘ಮಿನಿ ಇರಾನ್’ ಎಂದೇ ಕರೆಯಲಾಗುತ್ತದೆ. 1986ರಲ್ಲಿ ಅಯತೊಲ್ಲಾ ಅಲಿ ಖಮೇನಿ ಅವರು ಅಲಿಪುರ ಗ್ರಾಮಕ್ಕೆ ಆಗಮಿಸಿದ್ದರು. ಈ ಬಗ್ಗೆ ಸ್ಥಳೀಯರಲ್ಲಿ ನೆನಪು ಇನ್ನೂ ಹಸಿರಾಗಿದೆ. ಗ್ರಾಮದಲ್ಲಿರುವ ಮಸೀದಿಯಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದನ್ನು ಹಿರಿಯರು ಸ್ಮರಿಸುತ್ತಿದ್ದಾರೆ. ಅಲಿಪುರದ ಸುಮಾರು 20 ಸಾವಿರ ಜನರು ಖಮೇನಿ ಅವರನ್ನು ಧರ್ಮಗುರುವೆಂದು ಗೌರವಿಸುತ್ತಾರೆ.

ಅವರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯೂ ಅಲಿಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹತ್ಯೆ ಸುದ್ದಿಯಿಂದ ದುಃಖಿತರಾದ ಶಿಯಾ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಕಂಡುಬಂದವು.

ವಿಡಿಯೋ ನೋಡಿ

ಇಂದು ಮಧ್ಯಾಹ್ನ 3 ಗಂಟೆಗೆ ಅಲಿಪುರ ಗ್ರಾಮದಲ್ಲಿ ಬೃಹತ್ ಶೋಕಾಚರಣೆ ಮೆರವಣಿಗೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್ ಜಾರಿಯಲ್ಲಿದ್ದು, ಜನರು ಶಾಂತಿಯುತವಾಗಿ ಶೋಕಾಚರಣೆ ಮಾಡುತ್ತಿದ್ದಾರೆ.

ಇದಲ್ಲದೆ, ಇರಾನ್‌ನಲ್ಲಿ ಸಿಲುಕಿರುವ ತಮ್ಮ ಬಂಧು ಬಳಗ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು. ಅಯತೊಲ್ಲಾ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಮುದಾಯದವರು ಕಂಬನಿ ಮಿಡಿದರು.

ಅಲಿ ಖಮೇನಿ ಅಲೀಪುರ ಮಸೀದಿಗೆ ಭೇಟಿ ನೀಡಿದ್ದ ಸಂದರ್ಭದ ಸಂಗ್ರಹ ಚಿತ್ರ

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಇರಾನ್‌ನ ಸರ್ವೋಚ್ಚ ನಾಯಕರಾಗಿ ಸತತ ಅಧಿಕಾರ ಚಲಾಯಿಸಿದ್ದ ಖಮೇನಿ, ಶಿಯಾ ಮುಸ್ಲಿಂ ಸಮುದಾಯದ ಅತ್ಯಂತ ಪ್ರಭಾವಿ ಧರ್ಮಗುರುಗಳಲ್ಲಿ ಒಬ್ಬರಾಗಿದ್ದರು. ಸದ್ಯ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಸೇನಾ ದಾಳಿಯಲ್ಲಿ ಹತರಾಗಿದ್ದಾರೆ. ಖಮೇನಿ ಸಾವಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲಿಗೆ ಸಂದೇಶ ಪ್ರಕಟಿಸಿದ್ದಾರೆ. ನಂತರ ಇರಾನ್ ಮಾಧ್ಯಮಗಳೂ ಖಮೇನಿ ಸಾವನ್ನು ದೃಢಪಡಿಸಿದ್ದವು. ಅಂತಿಮವಾಗಿ ಇರಾನ್ ಸರ್ಕಾರ ಕೂಡ ಸಾವನ್ನು ದೃಢಪಡಿಸಿದ್ದು, ಪ್ರತೀಕಾರ ಕೈಗೊಳ್ಳುವುದಾಗಿ ಶಪಥ ಮಾಡಿದೆ.

ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆ, ಮುಂದಿನ ನಾಯಕ ಯಾರಾಗಬಹುದು?

ಏತನ್ಮಧ್ಯೆ, ಇರಾನ್ ಮುಂದಿನ ನಾಯಕನ ಆಯ್ಕೆ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಸಂಭಾವ್ಯ ಉತ್ತರಾಧಿಕಾರಿಗಳಲ್ಲಿ, ಖಮೇನಿ ಎರಡನೇ ಮಗ ಮೊಜ್ತಬಾ ಖಮೇನಿ ಅತ್ಯಂತ ಸಂಭಾವ್ಯ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಹೇಳಿಕೆಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Sun, 1 March 26

Follow Us