ಹುಲಿ ಉಗುರಿನ ಲಾಕೆಟ್ ಧರಿಸಿರುವ ಆರೋಪ: ಪುತ್ರ ನಿಖಿಲ್ ಪರವಾಗಿ ನೋಟಿಸ್ ಸ್ವೀಕರಿಸಿದ ಕುಮಾರಸ್ವಾಮಿ ಹೇಳಿದ್ದೇನು?
ಈ ಪೆಂಡೆಂಟ್ ಸಿಂಥೆಟಿಕ್, ಸಾಕಷ್ಟು ಜನರ ಬಳಿ ಈ ರೀತಿಯ ಪೆಂಡೆಂಟ್ ಇದೆ. ವನ್ಯ ಜೀವಿಗಳ ವಸ್ತುಗಳನ್ನು ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಂತಾ ಗೊತ್ತಿದ್ದು ನಾವು ಅಂಥಾ ಕೆಲಸ ಮಾಡೋದಿಲ್ಲ ಎಂದು ನಿಖಿಲ್ ಪರವಾಗಿ ಅರಣ್ಯಾಧಿಕಾರಿಗಳಿಂದ ನೋಟಿಸ್ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 25: ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹುಲಿ ಉಗುರಿನ ಲಾಕೆಟ್ ಧರಿಸಿರುವ ಆರೋಪದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ. ನಿಖಿಲ್ ಪರವಾಗಿ ಕುಮಾರಸ್ವಾಮಿ ಅವರೇ ಅರಣ್ಯಾಧಿಕಾರಿಗಳಿಂದ ನೋಟಿಸ್ ಸ್ವೀಕರಿಸಿದರು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ಪುತ್ರ ನಿಖಿಲ್ ಧರಿಸಿದ್ದು ಹುಲಿ ಉಗುರು ಎಂದು ತನಿಖೆಗೆ ಬಂದಿದ್ದರು. ಈ ಪೆಂಡೆಂಟ್ ಹುಲಿ ಉಗುರಿನದ್ದಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ. ನಾನೇ ಇಂದು ಬೆಳಗ್ಗೆ 11 ಗಂಟೆಗೆ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿದ್ದೆ. ನಿಮ್ಮ ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ಹೇಳಿದ್ದೆ ಎಂದರು.
ನಿಖಿಲ್ ಯಾವಾಗಲೂ ಬಂಗಾರ ಹಾಕುವುದಿಲ್ಲ. ಕಾನೂನು ರಚನೆ ಮಾಡುವವರು ನಾವು, ನಮಗೆ ಪರಿಜ್ಞಾನ ಇಲ್ಲವೇ? ನನ್ನ ಪುತ್ರ ನಿಖಿಲ್ ಮದುವೆ ಸಂದರ್ಭದಲ್ಲಿ ಧರಿಸಿದ್ದು ಇದೇ ಪೆಂಡೆಂಟ್. ನಾನೇ ಅಧಿಕಾರಿಗಳ ಜೊತೆಯಲ್ಲಿ ಚಿನ್ನದ ಅಂಗಡಿಗೆ ಕಳಿಸ್ತೇನೆ. ಎಫ್ಎಸ್ಎಲ್ಗೆ ಕಳಿಸಿ ವಾಸ್ತವಾಂಶ ಪತ್ತೆ ಹಚ್ಚಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ನಿಖಿಲ್ ಕುಮಾರಸ್ವಾಮಿ ಮನೆಗೆ ಅರಣ್ಯಾಧಿಕಾರಿಗಳ ಭೇಟಿ
ನಿಖಿಲ್ ಬಳಿ ಇರುವುದು ಹುಲಿ ಉಗುರಲ್ಲ: ಕುಮಾರಸ್ವಾಮಿ
ಈ ಪೆಂಡೆಂಟ್ ಸಿಂಥೆಟಿಕ್, ಸಾಕಷ್ಟು ಜನರ ಬಳಿ ಈ ರೀತಿಯ ಪೆಂಡೆಂಟ್ ಇದೆ. ವನ್ಯ ಜೀವಿಗಳ ವಸ್ತುಗಳನ್ನು ಇಟ್ಟುಕೊಳ್ಳುವುದು ಕಾನೂನು ಬಾಹಿರ ಅಂತಾ ಗೊತ್ತಿದ್ದು ನಾವು ಅಂಥಾ ಕೆಲಸ ಮಾಡೋದಿಲ್ಲ. ಇದು ಮದುವೆ ಸಂದರ್ಭದಲ್ಲಿ ನಿಖಿಲ್ಗೆ ಗಿಫ್ಟ್ ಬಂದಿರೋದು. ಸಂಬಂಧಿಕರು ಕೊಟ್ಟಿರೋದು. ಬೆಳಗ್ಗೆ ನನ್ನ ಸೊಸೆಯನ್ನು ಕರೆಸಿ ಎಲ್ಲಿಟ್ಟಿದ್ದೀಯ ಅಂತಾ ತರಿಸಿದ್ದೆ. ನಾನೆ ಬೆಳಗ್ಗೆ 11 ಗಂಟೆಗೆ ಅಧಿಕಾರಿಗಳಿಗೆ ಫೋನ್ ಮಾಡಿ ಕರೆಸಿದ್ದೆ. ಎಷ್ಟು ಮನೆಯಲ್ಲಿ ಇಲ್ಲ ಇದು. ಚೆನ್ನಾಗಿ ಕಾಣುತ್ತೆ ಅಂತಾ ಹಾಕೊತಾರೆ. ಇದು ಹುಲಿ ಉಗುರು ಅಲ್ಲ. ಅಷ್ಟು ಪರಿಜ್ಞಾನ ಇಲ್ವಾ ನನಗೆ? ಹುಲಿ ಉಗುರು ಇದ್ರೆ ಅವತ್ತೇ ರಿಜೆಕ್ಟ್ ಮಾಡ್ತಿದ್ದೆ ಎಂದ ಕುಮಾರಸ್ವಾಮಿ, ಮಾಧ್ಯಮ ಪ್ರತಿನಿಧಿಗಳ ಮುಂದೆಯೇ ಅರಣ್ಯಾಧಿಕಾರಿಗಳಿಗೆ ಪೆಂಡೆಂಟ್ ಹಸ್ತಾಂತರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Wed, 25 October 23