ಫ್ರೆಶ್ ಫಿಶ್ ತಿಂತಾ ಇದ್ದ ಜನರಿಗೆ ಆತಂಕ.. ಮೀನುಗಳ ಸಂರಕ್ಷಣೆಗೆ ಫಾರ್ಮಾಲಿನ್ ಬಳಕೆ?
ಫ್ರೆಶ್ ಫಿಶ್ ತಿಂತಾ ಇದೀವಿ ಅನ್ನೋ ಜನರಿಗೆ ಆತಂಕ ಎದುರಾಗಿದೆ. ಮೀನು ಕೆಡದಂತೆ ಫಾರ್ಮಾಲಿನ್ ಹಾಕ್ತಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಶವ ಕೆಡದಂತೆ ಹಾಕುವ ಈ ಕೆಮಿಕಲ್ ಮಿಶ್ರಿತ ಮೀನು ತಿಂದ್ರೆ ದೇಹಕ್ಕೆ ಹಾನಿಯಾಗುತ್ತೆ ಅನ್ನೋ ಭಯ ಜನರಲ್ಲಿ ಉಂಟಾಗಿದೆ.
ಉಡುಪಿ: ಬಂಗುಡೆ ತವಾ ಫ್ರೈ.. ಬೂತಾಯ್ ರವಾ ಫ್ರೈ.. ಫಿಶ್ ಮಸಾಲಾ.. ಕೆಂಪ್ ಕೆಂಪ್ ಆಗಿ ಮಸಾಲ ಹಚ್ಚಿ, ಅದಕ್ಕೊಂದ್ ಸ್ವಲ್ಪ ನಿಂಬೆ ಹುಳಿ ಹಾಕಿ ಹಸಿ ಹಸಿ ಮೀನನ್ನ ಬಾಣಲೆಯಲ್ಲಿ ಹಾಕಿ ಫ್ರೈ ಮಾಡಿದ್ರೆ ಎಂಥಾ ಟೇಸ್ಟ್ ಮಾರಾಯ್ರೇ..
ಕರಾವಳಿಯ ಮೀನಿನ ಟೆಸ್ಟ್ ಮುಂದೆ ಯಾವ್ ಟೆಸ್ಟ್ ಇಲ್ಲ ಬಿಡಿ. ರುಚಿ ರುಚಿಯಾದ ಮೀನು ಸಿಕ್ರೆ ಯಾರ್ ಬಿಡ್ತಾರೆ ಹೇಳಿ. ಇಂತಹ ಮೀನುಗಳನ್ನ ಆರ್ಭಟಿಸೋ ಸಮುದ್ರದಲ್ಲಿ ಕಡಲ ಮಕ್ಕಳು ಹಿಡ್ಕೊಂಡು ಬರ್ತಾರೆ. ಆದ್ರೆ ಈ ಕರಾವಳಿಯ ಮೀನಿಗೆ ಕಳಂಕ ಮೆತ್ತಿಕೊಂಡಿದೆ.
ಫ್ರೆಶ್ ಫಿಶ್ ತಿಂತಾ ಇದೀವಿ ಅನ್ನೋ ಜನರಿಗೆ ಆತಂಕ ಎದುರಾಗಿದೆ. ಮೀನು ಕೆಡದಂತೆ ಫಾರ್ಮಾಲಿನ್ ಹಾಕ್ತಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಶವ ಕೆಡದಂತೆ ಹಾಕುವ ಈ ಕೆಮಿಕಲ್ ಮಿಶ್ರಿತ ಮೀನು ತಿಂದ್ರೆ ದೇಹಕ್ಕೆ ಹಾನಿಯಾಗುತ್ತೆ ಅನ್ನೋ ಭಯ ಜನರಲ್ಲಿ ಉಂಟಾಗಿದೆ. ಅಪಾಯಕಾರಿ ಕೆಮಿಕಲ್ ಅನ್ನ ಕರಾವಳಿಯ ಮೀನುಗಾರರು ಬಳಸುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದು, ಡಿಸಿಗೆ ದೂರು ನೀಡಲಾಗಿದೆ.
ಆರೋಪಗಳನ್ನು ತಳ್ಳಿ ಹಾಕಿದ ಮೀನುಗಾರರ ಮುಖಂಡರು: ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ಬೋಟುಗಳು ಎರಡು ವಾರ ಕಡಲಿನಲ್ಲೇ ಇರುತ್ತವೆ. ಈ ಸಂದರ್ಭದಲ್ಲಿ ಹಿಡಿದ ಮೀನು ಹಾಳಾಗಬಾರದು ಅಂತಾ ಅದಕ್ಕೆ ಮಂಜುಗಡ್ಡೆ ಹಾಕುತ್ತಾರೆ. ಆದರೆ ಮಲ್ಪೆಯಲ್ಲಿ ಫಾರ್ಮಾಲಿನ್ ಬಳಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಹೊರ ಜಿಲ್ಲೆಗಳಿಂದ ಅನೇಕ ಬೋಟುಗಳು ಮಲ್ಪೆ, ಮಂಗಳೂರು, ಕಾರವಾರ ಬಂದರುಗಳಿಗೆ ಬಂದು ಮೀನು ಮಾರಾಟ ಮಾಡುತ್ತಿದ್ದು, ಇವರಲ್ಲಿ ಕೆಲವರು ಕೆಮಿಕಲ್ ಬಳಸಿ ಸಂಸ್ಕರಣೆ ಮಾಡುತ್ತಾರೆ ಅನ್ನೋ ಆರೋಪ ಕೇಳಿಬಂದಿದೆ. ಆದ್ರೆ ಮೀನುಗಾರರ ಮುಖಂಡರು ಆರೋಪವನ್ನ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸರಿಯಾದ ತನಿಖೆ ನಡೆಸದೆ ಸುಖಾಸುಮ್ಮನೆ ಆರೋಪ ಮಾಡಬಾರದು ಅಂತಾ ಮೀನುಗಾರ ಮುಖಂಡರು ಹೇಳಿದ್ದಾರೆ.
ತಪ್ಪು ಕಂಡು ಬಂದ್ರೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮೊದಲೇ ಮೀನುಗಾರ ಸಮುದಾಯದ್ದು ಹಗ್ಗದ ಮೇಲಿನ ನಡುಗೆ, ಸ್ವಲ್ಪ ಆಯ ತಪ್ಪಿದರೂ ಬೀಳೋದು ಖಚಿತ. ಸದ್ಯ ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ನಡೆಸಿ ಮೀನುಗಾರರ ಜೊತೆಗೆ ಗ್ರಾಹಕರ ಹಿತವನ್ನೂ ಕಾಯಬೇಕಿದೆ.