Amul vs Nandini: ಬೆಂಗಳೂರಿಗೆ ಅಮುಲ್, ವಿವಾದ ಹಾಗೂ ವಾಸ್ತವ; ಸಮಗ್ರ ಮಾಹಿತಿ ಇಲ್ಲಿದೆ

ಅಮುಲ್ ಬೆಂಗಳೂರಿನಲ್ಲಿ ಅಥವಾ ದೇಶದ ಬೇರೆಡೆಗಳಲ್ಲಿ ಮಾರಾಟ ಮಾಡುವಂತಿಲ್ಲವೇ? ನಮ್ಮದೇ ರೈತರಿಂದ ಹಾಲು ಖರೀದಿಸುವ ಕೆಎಂಎಫ್​ ಕೂಡ ನಂದಿನಿ ಬ್ರ್ಯಾಂಡ್​ ಉತ್ಪನ್ನಗಳನ್ನು ದೇಶದ ಬೇರೆ ಕಡೆಗಳಿಗೆ ಪೂರೈಕೆ, ಮಾರಾಟ ಮಾಡುತ್ತದೆಯಲ್ಲವೇ? ಇದಕ್ಕೂ ಏನಾದರೂ ತೊಡಕು ಇದೆಯೇ?

Amul vs Nandini: ಬೆಂಗಳೂರಿಗೆ ಅಮುಲ್, ವಿವಾದ ಹಾಗೂ ವಾಸ್ತವ; ಸಮಗ್ರ ಮಾಹಿತಿ ಇಲ್ಲಿದೆ
ನಂದಿನಿ ಹಾಗೂ ಅಮುಲ್
Follow us
Ganapathi Sharma
|

Updated on:Apr 08, 2023 | 4:54 PM

ಬೆಂಗಳೂರಿನಲ್ಲಿ ಹಾಲು, ಮೊಸರು ಪೊಟ್ಟಣಗಳ ಮಾರಾಟಕ್ಕೆ ಗುಜರಾತ್ (Gujrat) ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮುಲ್ (Amul) ಮುಂದಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಅಮುಲ್ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಹೊರಟಿರುವುದು ರಾಜಕೀಯ ಆಯಾಮ ಪಡೆದುಕೊಂಡಿದೆ. ಕೆಎಂಎಫ್(KMF) ಹಾಗೂ ​ ಅಮುಲ್ ವಿಲೀನಕ್ಕೆ ಸಂಬಂಧಿಸಿದ ವದಂತಿ ಮತ್ತು ಆ ಕುರಿತ ವಿವಾದ ತಣ್ಣಗಾದ ಬೆನ್ನಲ್ಲೇ ಇದೀಗ ಅಮುಲ್ ಬಹಿಷ್ಕಾರದ ಕಿಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ.

ಹಾಗಿದ್ದರೆ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಅಮುಲ್ ಬೆಂಗಳೂರಿನಲ್ಲಿ ಅಥವಾ ದೇಶದ ಬೇರೆಡೆಗಳಲ್ಲಿ ಮಾರಾಟ ಮಾಡುವಂತಿಲ್ಲವೇ? ನಮ್ಮದೇ ರೈತರಿಂದ ಹಾಲು ಖರೀದಿಸುವ ಕೆಎಂಎಫ್​ ಕೂಡ ನಂದಿನಿ ಬ್ರ್ಯಾಂಡ್​ ಉತ್ಪನ್ನಗಳನ್ನು ದೇಶದ ಬೇರೆ ಕಡೆಗಳಿಗೆ ಪೂರೈಕೆ, ಮಾರಾಟ ಮಾಡುತ್ತದೆಯಲ್ಲವೇ? ಇದಕ್ಕೂ ಏನಾದರೂ ತೊಡಕು ಇದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ದೇಶದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಉತ್ಪನ್ನಗಳನ್ನು ಮಾರಾಟ ಮಾಡಲು ಕಂಪನಿಗಳು ಅಥವಾ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಸರ್ವಸ್ವತಂತ್ರವಾಗಿವೆ. ಭಾರತೀಯ ಸ್ಪರ್ಧಾ ಆಯೋಗದ ನಿಯಮಗಳನ್ನು, ಮಾರ್ಗಸೂಚಿಯನ್ನು ಉಲ್ಲಂಘಿಸದೇ ದೇಶದ ಯಾವ ಭಾಗದಲ್ಲಿ ಕೂಡ ವಹಿವಾಟು ನಡೆಸಬಹುದು ಎಂದಿದ್ದಾರೆ ಕಾನೂನು ತಜ್ಞರು.

ರಾಜಕೀಯಕ್ಕಷ್ಟೇ ವಿರೋಧ

ಬೆಂಗಳೂರಿನಲ್ಲಿ ಅಮುಲ್ ಹಾಲು ಮಾರಾಟ ಮಾಡುವುದಕ್ಕೆ ವ್ಯಕ್ತವಾಗಿರುವ ವಿರೋಧ ರಾಜಕೀಯ ಆಯಾಮದ್ದಷ್ಟೇ ವಿನಃ ಇದನ್ನು ಸಮರ್ಥಿಸಿಕೊಳ್ಳುವಂಥ ಅಂಶಗಳು ದೇಶದ ಕಾನೂನಿನಲ್ಲಿ ಅಥವಾ ಭಾರತೀಯ ಸ್ಪರ್ಧಾ ಆಯೋಗದ ಮಾರ್ಗಸೂಚಿಯಲ್ಲಿ ಕಂಡುಬರುವುದಿಲ್ಲ ಎಂದು ಕಾನೂನು ತಜ್ಞರು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಅಮುಲ್ ದೇಶದ ಹಲವು ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ, ರಾಜ್ಯದ ಕೆಎಂಎಫ್​ನ ನಂದಿನಿ ಉತ್ಪನ್ನಗಳು ಕೂಡ ಅನೇಕ ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮಾರುಕಟ್ಟೆಗೆ ಅಡಿ ಇಡಬೇಡಿ ಎಂದು ಕೋರಿ ಅಮುಲ್ ಸಂಸ್ಥೆಗೆ ಕೆಎಂಎಫ್ ಪತ್ರ ಬರೆಯಲು ಆಲೋಚಿಸಿದೆ. ಹಾಗೆಯೇ, ಎರಡು ದೊಡ್ಡ ಹಾಲಿನ ಒಕ್ಕೂಟಗಳು ಒಂದೇ ಸ್ಥಳದಲ್ಲಿ ಸ್ಪರ್ಧೆ ನಡೆಸುವ ವಿಚಾರದ ಬಗ್ಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಗಮನಕ್ಕೆ ತರಲೂ ಕೆಎಂಎಫ್ ಮುಂದಾಗಿದೆ ಎಂದು ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ಆದರೆ, ಕರ್ನಾಟಕ ಹಾಲು ಉತ್ಪಾದಕರ ಜತೆ ಪೈಪೋಟಿ ನಡೆಸುವುದು ನಮ್ಮ ಉದ್ದೇಶವಲ್ಲ. ಹಾಗೆ ಮಾಡುವುದೂ ಇಲ್ಲ ಎಂದು ಅಮುಲ್ ಎಂಡಿ ಜಯನ್ ಮೆಹ್ತಾ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದಾರೆ. ಮುಂದುವರಿದು, ಅಮುಲ್​​ ಹಾಗೂ ಕೆಎಂಎಫ್ ಸಂಬಂಧ ಚೆನ್ನಾಗಿದೆ. ನಂದಿನಿ ಹಾಲಿನ ಮಳಿಗೆ ರೀತಿ ನಾವು ಸ್ಟಾಲ್, ಬೂತ್​ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮುಲ್ ಜತೆ ಒಪ್ಪಂದವಿಲ್ಲ; ಕೆಎಂಎಫ್​ ಸ್ಪಷ್ಟನೆ

ಹಾಲು ಮಾರಾಟ ಅಥವಾ ಹಾಲಿನ ಉತ್ಪನಗಳ ಮಾರುಕಟ್ಟೆ ವಿಚಾರದಲ್ಲಿ ಅಮುಲ್ ಜತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಆ ಕುರಿತ ಪ್ರಸ್ತಾವವೂ ನಮ್ಮ ಮುಂದಿಲ್ಲ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್ ‘ಟಿವಿ9 ಕನ್ನಡ ಡಿಜಿಟಲ್​’ಗೆ ತಿಳಿಸಿದ್ದಾರೆ.

ಎಲ್ಲೆಲ್ಲಿ ಮಾರಾಟವಾಗುತ್ತಿದೆ ಅಮುಲ್ ಉತ್ಪನ್ನ?

ಪ್ರಸ್ತುತ ರಾಜಸ್ಥಾನ, ಗುಜರಾತ್, ಬಿಹಾರ, ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಅಮುಲ್ ಹಾಲು, ಮೊಸರು ಹಾಗೂ ಇತರ ಡೈರಿ ಉತ್ಪನ್ನಗಳು ಮಾರಾಟವಾಗುತ್ತಿವೆ. ಅಮುಲ್ ಉತ್ಪನ್ನಗಳು ವಿದೇಶಗಳಿಗೂ ರಫ್ತಾಗುತ್ತಿವೆ.

ಯಾವ ರಾಜ್ಯಗಳಲ್ಲೆಲ್ಲ ಸಿಗುತ್ತೆ ನಂದಿನಿ ಹಾಲು?

ಕೆಎಂಎಫ್​​ನ ನಂದಿನ ಹಾಲು ಹಾಗೂ ಡೈರಿ ಉತ್ಪನ್ನಗಳು ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾಗಳಲ್ಲಿ ಮಾರಾಟವಾಗುತ್ತಿದೆ. ಕೆಎಂಎಫ್​ ಪ್ರತಿನಿತ್ಯ 75-80 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದೆ. ವಾರ್ಷಿಕ 20,000 ಕೋಟಿ ರೂ. ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ: KMF vs Amul: ಕೆಎಂಎಫ್ ಎದುರು ಸೆಣಸಿ ಗೆಲ್ಲಲು ಅಮುಲ್​ಗೆ ಆಗುತ್ತಾ? ಎರಡು ದೈತ್ಯ ಹಾಲು ಉತ್ಪಾದಕರ ಮಧ್ಯೆ ಒಂದು ಹೋಲಿಕೆ

ಅಮುಲ್ ಹಾಲು ಮಾತ್ರವೇ ರಾಜ್ಯಕ್ಕೆ ಬರುತ್ತಿದೆಯೇ?

ಬೆಂಗಳೂರು ಹಾಗೂ ರಾಜ್ಯದ ವಿವಿಧ ಕಡೆಗಳಿಗೆ ಈಗಾಗಲೇ ಬೇರೆ ರಾಜ್ಯಗಳಿಂದ ಹಾಲು ಹಾಗೂ ಡೈರಿ ಉತ್ಪನ್ನಗಳು ಪೂರೈಕೆಯಾಗುತ್ತಿವೆ. ಆದರೆ, ಅವುಗಳ ಪ್ರಮಾಣ ತುಂಬಾ ಕಡಿಮೆ ಇದೆ. ಸದ್ಯ ಆಂಧ್ರ ಪ್ರದೇಶದಿಂದ ತಿರುಮಲ, ದೊಡ್ಲಾ, ಹೆರಿಟೇಜ್, ಮಹಾರಾಷ್ಟ್ರದಿಂದ ದೂದ್ ಪಂಡ್ರಿ ಹಾಗೂ ತಮಿಳುನಾಡಿನಿಂದ ಆರೋಗ್ಯ ಬ್ರ್ಯಾಂಡ್​ನ ಹಾಲು ಬೆಂಗಳೂರಿಗೆ ಹಾಗೂ ರಾಜ್ಯದ ಇತರ ಕಡೆಗಳಿಗೆ ಪೂರೈಕೆಯಾಗುತ್ತಿವೆ.

ಬೇರೆ ಬ್ರ್ಯಾಂಡ್​​ಗಿಲ್ಲದ ವಿರೋಧ ಅಮುಲ್​ಗೇಕೆ?

ರಾಜ್ಯಕ್ಕೆ ಇತರ ರಾಜ್ಯಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳು ಈಗಾಗಲೇ ಪೂರೈಕೆಯಾಗುತ್ತಿದ್ದರೂ ಅಮುಲ್ ವಿರುದ್ಧ ದೊಡ್ಡ ಮಟ್ಟದ ವಿರೋಧ, ಪ್ರತಿಭಟನೆ ಭುಗಿಲೆದ್ದಿರವುದೇಕೆ? ರಾಜಕೀಯ ಅಂಶವೇ ಈ ವಿರೋಧದ ಹಿಂದಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಅಮುಲ್ ವಿಚಾರ ರಾಜಕೀಯ ಆಯಾಮ ಪಡೆದಿದ್ದು ಹೇಗೆ?

ಕಳೆದ ಡಿಸೆಂಬರ್​​ನಲ್ಲಿ ಮಂಡ್ಯದ ಗೆಜ್ಜಲಗೆರೆ ಮೆಗಾ ಡೇರಿ ಉದ್ಘಾಟನೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೆಎಂಎಫ್ ಮತ್ತು ಅಮುಲ್ ಜತೆಯಾಗಿ ಸಾಗಿದರೆ ಸಹಕಾರಿ ಕ್ಷೇತ್ರದಲ್ಲಿ ಅದ್ಭುತವಾದದ್ದನ್ನು ಸಾಧಿಸಬಹುದು ಎಂದು ಹೇಳಿದ್ದು ಕೂಡ ರಾಜಕೀಯ ಆಯಾಮ ಪಡೆದುಕೊಂಡಿತ್ತು. ಅಮುಲ್ ಜತೆ ಕೆಎಂಎಫ್​ ಅನ್ನು ವಿಲೀನಗೊಳಿಸುವ ಹುನ್ನಾರವಿದು ಎಂದೇ ಹೇಳಲಾಗಿತ್ತು. ನಂತರ ಕೆಎಂಎಫ್ ವಿಲೀನ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಆಗಿನ ಮಟ್ಟಿಗೆ ವಿವಾದ ತಣ್ಣಗಾಗಿದ್ದರೂ, ಗುಜರಾತ್​ನ ಅಮುಲ್ ಮೂಲಕ ರಾಜ್ಯದ ಕೆಎಂಎಫ್​ ಅನ್ನು ಮುಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಬಹುದು ಎಂಬ ಭೀತಿ ರಾಜ್ಯದ ಹಲವರಲ್ಲಿದೆ. ಇತ್ತೀಚೆಗೆ ನಂದಿನಿ ಮೊಸರಿನ ಪೊಟ್ಟಣಗಳ ಮೇಲೆ ‘ದಹಿ’ ಎಂಬ ಪದ ಮುದ್ರಿಸಿದ್ದು, ಮತ್ತು ಆ ಕುರಿತು ಉದ್ಭವಿಸಿದ ವಿವಾದವೂ ಈ ನಿಟ್ಟಿನಲ್ಲಿ ಗಮನಾರ್ಹ.

ಕೆಎಂಎಫ್​ ಜತೆ ಪೈಪೋಟಿ ಅಮುಲ್​ಗೆ ಸಾಧ್ಯವೇ?

ಪ್ರಸ್ತುತ, ದೇಶದ ಹೈನೋದ್ಯಮ ಮಾರುಕಟ್ಟೆಯನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ಅಮುಲ್​ ಮುಂದಿರುವುದೇನೋ ನಿಜ. ಆದರೆ, ಕರ್ನಾಟಕದ ವಿಚಾರಕ್ಕೆ ಬಂದರೆ ಕೆಎಂಎಫ್​ ಜತೆ ಪೈಪೋಟಿ ನೀಡುವುದು ಅಮುಲ್​​ಗೆ ಅಷ್ಟು ಸುಲಭವಲ್ಲ ಎಂಬುದನ್ನು ಅಂಕಿಅಂಶಗಳೇ ನಿರೂಪಿಸುತ್ತವೆ. ಪ್ರತಿನಿತ್ಯ ದೇಶದಾದ್ಯಂತ 2.63 ಕೋಟಿ ಲೀಟರ್ ಹಾಲು ಮಾರಾಟ ಮಾಡುವ ಅಮುಲ್ ವಾರ್ಷಿಕ 60,000 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ಪ್ರತಿ ದಿನ 75-80 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಕೆಎಂಎಫ್​, ವಾರ್ಷಿಕ 20,000 ಕೋಟಿ ರೂ. ವಹಿವಾಟು ಹೊಂದಿದೆ. ಅಮುಲ್ 10,000 ಡೀಲರ್ಸ್, 10 ಲಕ್ಷ ರೀಟೇಲ್ ಮಾರಾಟಗಾರರ ನೆಟ್​ವರ್ಕ್ ಹೊಂದಿದ್ದರೆ, ಕೆಎಂಎಫ್​ 1,800 ನಂದಿನಿ ಪಾರ್ಲರ್​ಗಳು, 14,000 ಸೇಲ್ಸ್ ಏಜೆಂಟ್​​ಗಳನ್ನು ಹೊಂದಿವೆ. ಆದರೆ, ಕೆಎಂಎಫ್​​ ವಹಿವಾಟಿನ ಬಹುಪಾಲು ಕರ್ನಾಟಕದಲ್ಲೇ ಇದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಬೆಂಗಳೂರಿನಲ್ಲಿ ಮುಂದಿನ ವಾರ ಆರಂಭ; ನಂದಿನಿ ಜತೆ ಪೈಪೋಟಿ ಇಲ್ಲವೆಂದ ಕಂಪನಿ

ನಂದಿನಿ ಹಾಲಿನ ಮಳಿಗೆ ರೀತಿ ನಾವು ಸ್ಟಾಲ್, ಬೂತ್​ ಹಾಕುವುದಿಲ್ಲ ಎಂದು ಅಮುಲ್ ಎಂಡಿ ಜಯನ್ ಮೆಹ್ತಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೇವಲ ಇ-ಕಾಮರ್ಸ್​ ತಾಣದ ಮೂಲಕ ಆಂಧ್ರ ಪ್ರದೇಶದ ಮದನಪಲ್ಲಿಯಿಂದ ಬೆಂಗಳೂರಿಗೆ ಹಾಲು, ಮೊಸರು ಸರಬರಾಜು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಕೇವಲ ಆನ್​ಲೈನ್ ಮೂಲಕ ಮಾರಾಟ ಮಾಡಿ ರಾಜ್ಯದ ನಂದಿನಿ ಮಳಿಗೆಗಳ ಜತೆ ಪೈಪೋಟಿ ನೀಡುವುದು ಅಮುಲ್​ಗೆ ಸುಲಭ ಸಾಧ್ಯವಲ್ಲ ಎಂಬುದು ವಾಸ್ತವ.

ಬೆಲೆ ಪೈಪೋಟಿಯಲ್ಲೂ ಕೆಎಂಎಫ್ ಮೇಲುಗೈ

ಬೆಂಗಳೂರಿಗೆ ಪೂರೈಕೆ ಮಾಡುವ ಹಾಲು, ಮೊಸರಿನ ದರವನ್ನು ಅಮುಲ್ ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಅಮುಲ್​ನ ಅರ್ಧ ಲೀಟರ್ ಹಾಲಿನ ಕನಿಷ್ಠ ಬೆಲೆಯೇ 27 ರೂಪಾಯಿ ಇದೆ. ಇದಕ್ಕಿಂತ ಕಡಿಮೆ ಬೆಲೆಗೆ ನಂದಿನಿ ಮೊಸರು ಅರ್ಧ ಲೀಟರ್​ಗೆ 24 ರೂ. ಇದ್ದರೆ, ಅಮುಲ್ ಮೊಸರು ಅರ್ಧ ಲೀಟರ್​ಗೆ 30 ರೂ. ಇದೆ. ಬೇರೆಲ್ಲಾ ಪ್ರಮುಖ ಹಾಲು ಒಕ್ಕೂಟಗಳಿಗೆ ಹೋಲಿಸಿದರೆ ಕೆಎಂಎಫ್​ನ ಹಾಲಿನ ಬೆಲೆ ಕಡಿಮೆ ಇದೆ. ಹೀಗಾಗಿ ದರ ಸಮರದಲ್ಲಿಯೂ ರಾಜ್ಯದಲ್ಲಿ ಕೆಎಂಎಫ್​ ಮೇಲುಗೈ ಸಾಧಿಸುವುದು ಬಹುತೇಕ ಖಚಿತ ಎನ್ನಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Sat, 8 April 23