ಕೋಲಾರ: ಜಿಲ್ಲೆಯಲ್ಲಿರುವ ಅಂತರಗಂಗೆ ಬೆಟ್ಟವು ಸ್ಥಳೀಯರನ್ನು ಮಾತ್ರವಲ್ಲದೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದಕ್ಷಿಣ ಕಾಶಿ ಕ್ಷೇತ್ರವೆಂದೇ ಹೇಳಲಾಗುವ ಅಂತರಗಂಗೆ ಬೆಟ್ಟದಲ್ಲಿನ ದೇವಾಲಯದ ಬಳಿ ನಿರಂತರವಾಗಿ ನೀರು ಚಿಮ್ಮುತ್ತಿರುತ್ತದೆ. ಹಚ್ಚ ಹಸಿರು ಬಣ್ಣದಿಂದ ಕೂಡಿರುವ ಈ ಪ್ರದೇಶ ಪೈರು ಪಚ್ಚೆಗಳು, ಮರ ಗಿಡಗಳು ಹಾಗೂ ಸಣ್ಣ-ದೊಡ್ಡ ಗಾತ್ರದ ಬಂಡೆಗಲ್ಲಿನಿಂದ ಕೂಡಿ ಕಂಗೊಳಿಸುತ್ತಿದೆ. ಅನೇಕ ನಿಗೂಢಗಳನ್ನು ಹೊಂದಿರುವ ಪುಣ್ಯ ಕ್ಷೇತ್ರವೂ ಹೌದು. ಸದ್ಯ ಈ ಕ್ಷೇತ್ರಕ್ಕೆ ನಿತ್ಯ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿರಂತರ ಮಳೆಯಿಂದ ಅಲ್ಲಿರುವ ಕಿರು ಜಲಪಾತಗಳು ಹರಿಯುತ್ತಿರುವುದೇ ಇದಕ್ಕೆ ಕಾರಣ.
ಅಂತರಗಂಗೆಯ ವಿಶೇಷತೆ
ಅಂತರಗಂಗೆಯು ವಿಶಿಷ್ಟವಾದ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಬೆಟ್ಟ ಶ್ರೇಣಿಯಾಗಿದೆ. ಬೆಂಗಳೂರಿನಿಂದ ಸರಿಸುಮಾರು 70 ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 1226 ಮೀಟರ್ ಎತ್ತರದಲ್ಲಿ ಇದೆ. ಅಂತರಗಂಗೆಯ ಪ್ರಮುಖ ಆಕರ್ಷಣೆಗಳೆಂದರೆ ಬಂಡೆಗಳಿಂದ ರೂಪುಗೊಂಡ ನೈಸರ್ಗಿಕ ಗುಹೆಗಳ ಸರಣಿ. ಅಂತರಗಂಗೆ ಎಂಬ ಹೆಸರು ಗುಡ್ಡಗಾಡು ಪ್ರದೇಶದ ಕಾಶಿ ವಿಶ್ವೇಶ್ವರ ದೇವಸ್ಥಾನದ ಬಳಿ ಕಂಡುಬರುವ ದೀರ್ಘಕಾಲಿಕ ಚಿಲುಮೆಯನ್ನು ಸೂಚಿಸುತ್ತದೆ. ಗುಡ್ಡಗಾಡು ಪ್ರದೇಶವು ಚಾರಣಿಗರು ಮತ್ತು ಸಾಹಸ ಪ್ರಿಯರಿಗೆ ಆಶ್ರಯ ತಾಣವಾಗಿದೆ. ಕೆಲವು ಹಳೆಯ ದೇವಾಲಯಗಳು ಕಾಣಸಿಗುವುದು ಅಂತರಗಂಗೆಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
ಚಿಲುಮೆಯು ಬಂಡೆಯ ಸಣ್ಣ ಸಂದಿಯಿಂದ ಹೊರಬಂದು ವರ್ಷವಿಡೀ ಹರಿಯುತ್ತದೆ. ಇದರ ಮೂಲವು ಎಲ್ಲರಿಗೂ ತಿಳಿದಿಲ್ಲ. ಅದಾಗ್ಯೂ ಚಿಲುಮೆಯಿಂದ ಹೊರಡುವ ನೀರು ದೇಶದ ಪೂರ್ವ ಭಾಗದಲ್ಲಿ ಹರಿಯುವ ಪವಿತ್ರ ಗಂಗಾ ನದಿಯ ಮೂಲವಾಗಿದೆ ಎಂದು ನಂಬಲಾಗಿದೆ. ಅಂತರಗಂಗೆ ಎಂದರೆ ಒಳ ಹೊಳೆ ಅಥವಾ ಆಳದಿಂದ ಬಂದ ಗಂಗೆ ಎಂಬೂದಾಗಿದೆ. ನೀರಿನ ಹರಿವು ಹತ್ತಿರದ ಕೊಳಕ್ಕೆ ಹರಿಯುತ್ತದೆ. ಈ ಅಂತರಗಂಗೆಯ ಚಿಲುಮೆಯ ನೀರನ್ನು ಸ್ಥಳೀಯ ಜನರು ಮತ್ತು ಪ್ರವಾಸಿಗರು ಆಧ್ಯಾತ್ಮಿಕ ಮನಸ್ಸಿನಿಂದ ಪವಿತ್ರವೆಂದು ಪರಿಗಣಿಸುತ್ತಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Wed, 14 September 22