
ಮಂಗಳೂರು, (ನವೆಂಬರ್ 23) : 2023ರ ವಿಧಾನಸಭೆ ಚುನಾವಣೆ ವೇಳೆ ಪುತ್ತರೂರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ಬಿಜೆಪಿಯೊಳಗಿನ ಎರಡು ಗುಂಪುಗಳ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದೆ. ಹೌದು…ಅರುಣ್ ಪುತ್ತಿಲ ಅವರು ಬಿಜೆಪಿ ವಿರುದ್ಧ ಮತ್ತೆ ಮುನಿಸಿಕೊಂಡಿದ್ದಾರೆ. ಹೀಗಾಗಿ ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿಯಾಗಿದ್ದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಅರುಣ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ಪ್ರಮುಖರು ಗೈರಾಗಿದ್ದರು. ಈ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಕಾರಣ ಬಿಜೆಪಿ ನಾಯಕರು ಈ ಹಿಂದೆ ಅರುಣ್ ಪುತ್ತಿಲ ಅವರಿಗೆ ನೀಡಿದ್ದ ಮಾತು ಉಳಿಸಿಕೊಂಡಿಲ್ಲ.
ಹೌದು.. ಪುತ್ತಿಲರನ್ನು ಬಿಜೆಪಿಗೆ ಕರೆತರುವಾಗ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ಕೊಡಲಾಗಿತ್ತಂತೆ. ಆದ್ರೆ ಬಳಿಕ ಯಾವುದೇ ಸ್ಥಾನಮಾನಗಳನ್ನು ಕೊಡದಿರುವುದಕ್ಕೆ ಮತ್ತೆ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಳೆದ ಮೂರ್ನಾಲ್ಕು ದಿನದ ಹಿಂದೆ ಪುತ್ತೂರನಲ್ಲಿ ಅಟಲ್ ಜನ್ಮ ಶತಾಭ್ಧಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಾಧ್ಯಕ್ಷ ವಿವೈ ವಿಜಯೇಂದ್ರ ಭಾಗವಹಿಸಿದ್ದರು. ಆದ್ರೆ, ಅರುಣ್ ಕುಮಾರ್ ಪುತ್ತಿಲ ಗೈರಾಗಿದ್ರು. ಮಾತ್ರವಲ್ಲ ಕಾರ್ಯಕ್ರಮದಲ್ಲಿ ಪುತ್ತೂರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿರಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಿಂದುತ್ವದ ಭದ್ರಕೋಟೆ. ಬಿಜೆಪಿಗೆ ಇಲ್ಲಿಂದ ಬಂದ ಬಲಕ್ಕೆ ಲೆಕ್ಕವಿಲ್ಲ. ಅಟಲ್ ಬಿಹಾರಿ ವಾಜಪೇಯಿ ಬಹಳ ವರ್ಷಗಳ ಹಿಂದೆ ಭೇಟಿ ನೀಡಿದ್ದ ಕ್ಷೇತ್ರ. ಆದ್ರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲಗೆ ಟಿಕೇಟ್ ಕೊಡಲಿಲ್ಲ. ಇದರಿಂದ ಅರಣ್ ಕುಮಾರ್ ಪುತ್ತಿಲ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿ ಕಾಂಗ್ರೆಸ್ ಸೇರಿದ್ದ ಬಿಜೆಪಿ ಮುಖಂಡ ಅಶೋಕ್ ರೈ ಗೆಲುವಿಗೆ ಕಾರಣರಾಗಿದ್ದರು. ಇದರೊಂದಿಗೆ ಬಿಜೆಪಿ ಹಾಗೂ ಅರುಣ್ ಪುತ್ತಲ ನಡುವಿನ ಜಗಳ ಮೂರನೇಯವರಿಗೆ ಲಾಭವಾಗಿತ್ತು. ಈ ವಿಚಾರ ಎಲ್ಲರಿಗೂ ಅರಿವಿಗೆ ಬಂತು. ಇದು ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯಬಾರದು ಎಂದು ಅರುಣ್ ಕುಮಾರ್ ಪುತ್ತಿಲರನ್ನು ಮತ್ತೆ ಬಿಜೆಪಿಗೆ ಕರೆ ತರಲಾಗಿದ್ದು, ಎಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿದ್ದರು. ಎಲ್ಲಾ ಸರಿ ಹೋಯ್ತ ಅಂದುಕೊಂಡಾಗಲೇ ಮತ್ತೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಎದ್ದಿರೋ ಬಗ್ಗೆ ಸದ್ದಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಕೂಡ ಅರುಣ್ ಕುಮಾರ್ ಪುತ್ತಿಲ ಬಂಡಾಯವಾಗಿ ಸ್ಪರ್ಧೆ ಮಾಡುವ ಬಗ್ಗೆ ಪುತ್ತಿಲ ಪರಿವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡುತ್ತಿವೆ. ಚುನಾವಣೆಗೆ ಇನ್ನು ಎರಡೂವರೆ ವರ್ಷ ಇರೋವಾಗಲೇ ಈ ರೀತಿ ಬೆಳವಣಿಗೆ ಆರಂಭವಾಗಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದುನೋಡಬೇಕಿದೆ.