ಬೆಂಗಳೂರು: ಕೊರೊನಾ ಲಸಿಕೆ ಪಡೆದಿದ್ದ ಆಶಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ. ಕೊರೊನಾ ಲಸಿಕೆ ಪಡೆದ ನಂತರ ಆಶಾ ಕಾರ್ಯಕರ್ತೆ ಪ್ರಜ್ಞಾಹೀನರಾದರು ಎಂದು ತಿಳಿದುಬಂದಿದೆ. ಸದ್ಯ, ಅಸ್ವಸ್ಥಗೊಂಡ ಆಶಾ ಕಾರ್ಯಕರ್ತೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆ ಚಿಕ್ಕಬಳ್ಳಾಪುರದ ಗ್ರಾಮವೊಂದರ ನಿವಾಸಿ.
ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರ್.ಅಶೋಕ್ ಸೂಚನೆ
ಇತ್ತ, ಮಹಾರಾಷ್ಟ್ರ, ಕೇರಳದಲ್ಲಿ ಕೊವಿಡ್ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಅಶೋಕ್ ಕೊಡಗು, ಮೈಸೂರು, ಬೆಳಗಾವಿ, ಮಂಗಳೂರು ಮೂಲಕ ರಾಜ್ಯ ಪ್ರವೇಶಿಸುವವರಿಗೆ ಕೊವಿಡ್ ರಿಪೋರ್ಟ್ ಕಡ್ಡಾಯ ಎಂದು ಸೂಚಿಸಿದ್ದಾರೆ.
ಜೊತೆಗೆ, ಕೊವಿಡ್ ಟೆಸ್ಟ್ ರಿಪೋರ್ಟ್ ಇದ್ದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುವಂತೆ R.ಅಶೋಕ್ ಸೂಚನೆ ಕೊಟ್ಟಿದ್ದಾರೆ. ಇದಲ್ಲದೆ, 4 ಜಿಲ್ಲೆಗಳ ಗಡಿಗಳಲ್ಲಿ ಈ ಕುರಿತು ತಪಾಸಣೆ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದು ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ಇತ್ತ, ರಾಜ್ಯದಲ್ಲಿಂದು ಹೊಸದಾಗಿ 386 ಜನರಿಗೆ ಕೊರೊನಾ ದೃಢವಾಗಿದೆ. ಹಾಗಾಗಿ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,47,246ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಐವರು ಸಾವನ್ನಪ್ಪಿದ್ದು ಈವರೆಗೆ ಕೊರೊನಾದಿಂದ 12,287 ಜನರು ಮೃತಪಟ್ಟಿದ್ದಾರೆ. ಇದಲ್ಲದೆ, ಸೋಂಕಿತರ ಪೈಕಿ 9,29,058. ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ, 5,882 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಈ ನಡುವೆ, ಬೆಂಗಳೂರಿನಲ್ಲಿ ಇಂದು ಒಂದೇ ದಿನ 209 ಜನರಲ್ಲಿ ಸೋಂಕು ಪತ್ತೆಯಾಗಿದೆ. ನಗರದಲ್ಲಿ ಇದೀಗ ಕೊರೊನಾ ಪೀಡಿತರ ಸಂಖ್ಯೆ 4,03,236ಕ್ಕೇರಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಕೊರೊನಾದಿಂದ ಈವರೆಗೆ 4,445 ಜನ ಸಾವನ್ನಪ್ಪಿದ್ದಾರೆ. ಜೊತೆಗೆ, 4,03,236 ಸೋಂಕಿತರ ಪೈಕಿ 3,94,583 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 4,207 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಶ್ರೀರಾಮ ಮಂದಿರದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ PFI ನಾಯಕರ ವಿರುದ್ಧ ಕಾನೂನು ಕ್ರಮ: ಬಸವರಾಜ ಬೊಮ್ಮಾಯಿ