ಜಾತಿ ಗಣತಿ ಕೂಡ ಸ್ಪಷ್ಟವಾದ ಗುರಿ, ನಿರ್ದಿಷ್ಟ ಉದ್ದೇಶ ಇಲ್ಲದ ರಾಹುಲ್ ಗಾಂಧಿಯಂತೆ: ಆರ್ ಅಶೋಕ್ ವ್ಯಂಗ್ಯ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜಾತಿಗಣತಿ ಗೊಂದಲಮಯವಾಗಿದ್ದು, ಶಾಲಾ ರಜೆ ವಿಸ್ತರಣೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ಅವರಂತೆ ಜಾತಿ ಗಣತಿ ಕೂಡ ಗೊಂದಲದಿಂದ ಕೂಡಿದೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಜಾತಿ ಗಣತಿ ಕೂಡ ಸ್ಪಷ್ಟವಾದ ಗುರಿ, ನಿರ್ದಿಷ್ಟ ಉದ್ದೇಶ ಇಲ್ಲದ ರಾಹುಲ್ ಗಾಂಧಿಯಂತೆ: ಆರ್ ಅಶೋಕ್ ವ್ಯಂಗ್ಯ
ಆರ್ ಅಶೋಕ್ & ರಾಹುಲ್ ಗಾಂಧಿ

Updated on: Oct 09, 2025 | 10:32 AM

ಬೆಂಗಳೂರು, ಅಕ್ಟೋಬರ್ 9: ಕರ್ನಾಟಕ ಕಾಂಗ್ರೆಸ್ ಸರಕಾರದ ಜಾತಿಗಣತಿ (Caste Census) ಸಂಸದ ರಾಹುಲ್ ಗಾಂಧಿ (Rahul Gandhi) ಅವರಂತೆ ಗೊಂದಲ, ಅಯೋಮಯ ಮತ್ತು ಅಜ್ಞಾನದಿಂದ ಕೂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಟೀಕಿಸಿದ್ದಾರೆ. ಜಾತಿಗಣತಿಗೆ ಸರ್ಕಾರ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ. ಸ್ಪಷ್ಟವಾದ ಉದ್ದೇಶ ಕೂಡ ಇಲ್ಲ. ಅದು ಕೂಡ ರಾಹುಲ್ ಗಾಂಧಿಯಂತೆಯೇ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.

ಈಗ ಕಾಂಗ್ರೆಸ್ ಸರ್ಕಾರವು ದಸರಾ ಜಾತಿ ಗಣತಿಗಾಗಿ ಶಾಲೆಗಳ ರಜೆಯನ್ನು ವಿಸ್ತರಿಸಿದೆ. ಇದರಿಂದಾಗಿ ಶಿಕ್ಷಕರು ಗೊಂದಲಮಯ ಜಾತಿ ಗಣತಿಯನ್ನು ನಿಭಾಯಿಸಬಹುದು. ಆದರೆ, ಜನರ ಬಳಿ ಏನು ಕೇಳಬೇಕೆಂಬುದೇ ಗಣತಿದಾರರಿಗೆ ತಿಳಿಯುತ್ತಿಲ್ಲ. ಶಿಕ್ಷಕರನ್ನು ತರಗತಿಗಳಿಂದ ಹೊರಗೆಳೆದು ವಿದ್ಯಾರ್ಥಿಗಳ ಬಾಳಿನಲ್ಲಿ ಕತ್ತಲೆ ಆವರಿಸುವಂತೆ ಮಾಡಲಾಗುತ್ತಿದೆ. ಕಾಂಗ್ರೆಸ್ಸಿನ ವಿಭಜನೆಯ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವುಗಳನ್ನೆಲ್ಲ ಮಾಡಲಾಗುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.

ಇದು ಸಮೀಕ್ಷೆ ಅಲ್ಲ, ಇದು ದೋಷಗಳಿಂದ ಕೂಡಿದ ಸರ್ಕಸ್. ಅಧಿಕಾರಕ್ಕೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಗೆ ಕರ್ನಾಟಕದ ಮಕ್ಕಳು ಬೆಲೆ ತೆರುವಂತಾಗಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಆರ್ ಅಶೋಕ್ ಟ್ವೀಟ್


ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿತ ಅವಧಿಯೊಳಗೆ ಮುಗಿಯದ ಕಾರಣ ಸರ್ಕಾರ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ, ಗಣತಿ ನಡೆಸುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ನೆರವಾಗುವುದಕ್ಕಾಗಿ ಅಕ್ಟೋಬರ್​ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ನೀಡಲು ನಿರ್ಧರಿಸಿದೆ.

ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ಸರ್ಕಾರ ಅಕ್ಟೋಬರ್ 8 ರಿಂದ ಅಕ್ಟೋಬರ್ 18 ರವರೆಗೆ ವಿಸ್ತರಣೆ ಮಾಡಿದೆ. ರಾಜ್ಯದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೆಲವು ಕಡೆ ಪೂರ್ಣಗೊಂಡಿಲ್ಲ. ಹೀಗಾಗಿ ಶಿಕ್ಷಕರನ್ನು ಸಮೀಕ್ಷೆ ಕಾರ್ಯದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅಕ್ಟೋಬರ್ 7 ರಂದು ಘೋಷಣೆ ಮಾಡಿದ್ದರು.

ಇದನ್ನೂ ಓದಿ: ದಸರಾ ರಜೆ 10 ದಿನ ವಿಸ್ತರಣೆ: ಅ.18ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಸಿಎಂ

ಸರ್ಕಾರದ ಈ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿದೆ. ಕಾಂಗ್ರೆಸ್​ ಸರ್ಕಾರವು ಗೊಂದಲಮಯ ಜಾತಿ ಗಣತಿಗಾಗಿ ವಿಧ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿದೆ ಎಂದು ಬಿಜೆಪಿ ನಾಯರು ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ