ಸದನ ಇರೋದು ಯಾರಿಗಾದರೂ ಶಿಕ್ಷೆ ಕೊಡಿಸಲು ಅಲ್ಲ ಎಂದು ಸಚಿವ ಮಾಧುಸ್ವಾಮಿ ಕಾಂಗ್ರೆಸ್ ಶಾಸಕರನ್ನು  ತರಾಟೆಗೆ ತೆಗೆದುಕೊಂಡರು!

ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ನಿಲುವಳಿ ಸೂಚನೆ ತಿರಸ್ಕಾರವಾಗಿದೆ, ಆದರೂ ಧರಣಿ ಮಾಡುತ್ತೇವೆ ಅಂತ ಕಾಂಗ್ರೆಸ್ ಸದಸ್ಯರು ಹಟ ಮಾಡುತ್ತಿರುವುದು ಸಭಾಪತಿ ಅವರ ರೂಲಿಂಗ್ ಅನ್ನು ಧಿಕ್ಕರಿಸಿದ ಹಾಗೆ, ಇದು ಸರಿಯಲ್ಲ ಎಂದು ಹೇಳಿದರು.

ಸದನ ಇರೋದು ಯಾರಿಗಾದರೂ ಶಿಕ್ಷೆ ಕೊಡಿಸಲು ಅಲ್ಲ ಎಂದು ಸಚಿವ ಮಾಧುಸ್ವಾಮಿ ಕಾಂಗ್ರೆಸ್ ಶಾಸಕರನ್ನು  ತರಾಟೆಗೆ ತೆಗೆದುಕೊಂಡರು!
ಕಾನೂನು ಸಚಿವ ಜೆಸಿ ಮಾಧುಸ್ವಾಮಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Feb 21, 2022 | 5:47 PM

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪ (KS Eshwrappa) ಅವರು ರಾಷ್ಟ್ರಧ್ವಜಕ್ಕೆ (National Flag) ಅವಮಾನ ಮಾಡಿದ್ದಾರೆ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ವಿಧಾನ ಸೌಧದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಶನ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ (JC Madhuswamy) ಅವರು ವಿಧಾನಪರಿಷತ್ ನಲ್ಲಿ ಕಿಡಿ ಕಾರಿದರು. ನಿಲುವಳಿ ಸೂಚನೆ ತಿರಸ್ಕಾರವಾಗಿದೆ, ಆದರೂ ಧರಣಿ ಮಾಡುತ್ತೇವೆ ಅಂತ ಕಾಂಗ್ರೆಸ್ ಸದಸ್ಯರು ಹಟ ಮಾಡುತ್ತಿರುವುದು ಸಭಾಪತಿ ಅವರ ರೂಲಿಂಗ್ ಅನ್ನು ಧಿಕ್ಕರಿಸಿದ ಹಾಗೆ, ಇದು ಸರಿಯಲ್ಲ ಎಂದು ಹೇಳಿದರು.

‘ಸರ್ಕಾರ, ಕಾಂಗ್ರೆಸ್ ಮಾಡುತ್ತಿರುವ ಅಸಂಬದ್ಧ ಮನವಿಯನ್ನು ಯಾವ ಕಾರಣಕ್ಕೂ ಪುರಸ್ಕಾರ ಮಾಡಲ್ಲ, ಸಚಿವ ಕೆ ಎಸ್ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವುದೇ ಸಾಧ್ಯವೇ ಇಲ್ಲ. ನಮ್ಮ ನಿಲುವಿನಲ್ಲಿ ನಾವು ಕೂಡ ಸ್ಪಷ್ಟವಾಗಿದ್ದೇವೆ; ನಾವಂತೂ ರಾಜೀನಾಮೆ ನೀಡಿ ಅಂತ ಅವರಿಗೆ ಹೇಳಲ್ಲ, ಕೊಡಿಸುವ ಮಾತಂತೂ ದೂರ ಉಳಿಯಿತು. ನೀವು ಏನು ಬೇಕಾದರೂ ಮಾಡಿ, ರಾಜ್ಯಮಟ್ಟದಲ್ಲಿ ಯಾಕೆ ರಾಷ್ಟ್ರಮಟ್ಟದಲ್ಲಿ ನೀವು ಪ್ರತಿಭಟನೆ ನಡೆಸಿದರೂ ಅವರಿಂದ ರಾಜೀನಾಮೆ ಕೊಡಿಸುವುದಿಲ್ಲ,’ ಎಂದು ಮಾಧುಸ್ವಾಮಿ ಖಡಾಖಂಡಿತವಾಗಿ ಹೇಳಿದರು.

‘ನೀವು ಹೊರಗಡೆ ಎಲ್ಲಿ ಬೇಕಾದರೂ ಪ್ರತಿಭಟನೆ ಮಾಡಿ, ಸದನದಲ್ಲಿ ನಿರಶನ ನಡೆಸಿ ಇದರ ಪಾವಿತ್ರ್ಯವನ್ನು ಹಾಳು ಮಾಡಬೇಡಿ. ಪ್ರತಿಭಟನೆ ನಡೆಸಲು ನಿಮಗೆ ಬೇಕಾದಷ್ಟು ಜಾಗವಿದೆ. ನೀವು ಸದನದಲ್ಲೇ ಮುಷ್ಕರ ನಡೆಸುತ್ತೇವೆ ಅನ್ನೋದು ಸರ್ವಥಾ ಸರಿಯಲ್ಲ,’ ಎಂದು ಮಾಧುಸ್ವಾಮಿ ಅಸಮಾಧಾನ ಭಾವ ಮತ್ತು ಸಿಡುಕಿನಿಂದ ಹೇಳಿದರು.

‘ಸಚಿವ ಈಶ್ವರಪ್ಪ ಹೇಳಿಕೆಯಿಂದ ರಾಷ್ಟ್ರಧ್ವಜಕ್ಕೆ ಅಪಮಾನವಾಗುವಂತಹ ಘಟನೆ ನಡೆದಿಲ್ಲ; ನೀವು ಬೇಕಿದ್ದರೆ ಕೋರ್ಟ್‌ಗೆ ಹೋಗಿ ಅದನ್ನು ಸಾಬೀತು ಮಾಡಿ ಎಂದು ಕಾಂಗ್ರೆಸ್ ಸದಸ್ಯರಿಗೆ ಹೇಳಿದ ಮಾಧುಸ್ವಾಮಿ, ‘ಈ ಸದನ ಇರೋದು ಯಾರಿಗಾದರೂ ಶಿಕ್ಷೆ ಕೊಡಿಸಲು ಅಲ್ಲ,’ ಎಂದು ಕಾಂಗ್ರೆಸ್ ನಾಯಕರಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಉಪ ಸಭಾಪತಿ ಪ್ರಾಣೇಶ್, ವಿರೋಧ ಪಕ್ಷದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆ ಸರಿಯಲ್ಲ; ವೈಯಕ್ತಿಕ ಟೀಕೆ, ಪದ ಬಳಕೆ ಆಕ್ಷೇಪಾರ್ಹವಾಗಿವೆ ಎಂದು ಹೇಳಿದರು.

ನಿಲುವಳಿ ಸೂಚನೆ ತಿರಸ್ಕಾರ ಆದ ಮೇಲೂ ಮತ್ತೆ ಅದನ್ನೇ ಪ್ರಶ್ನೆ ಮಾಡುವುದು ಸರಿಯಲ್ಲವೆಂದು ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

‘ನನ್ನನ್ನು ಯಾರೂ ವೀಕ್‌ ಎಂದು ತಿಳಿದುಕೊಳ್ಳಬೇಡಿ, ಸದನ ಹೇಗೆ ನಡೆಸಬೇಕೆಂದು ನನಗೆ ಗೊತ್ತಿದೆ ಎಂದು ಬಸವರಾಜ ಹೊರಟ್ಟಿ ಕೋಪದಿಂದ ಹೇಳಿದರು

ಪರಿಷತ್ ಕಾರ್ಯ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.

ಇದನ್ನೂ ಓದಿ:   ಸಚಿವ ಈಶ್ವರಪ್ಪ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಪ್ಲ್ಯಾನ್; ಬಿಜೆಪಿಯಿಂದಲೂ ಕೌಂಟರ್ ಪ್ಲ್ಯಾನ್! ಏನದು?

Published On - 5:46 pm, Mon, 21 February 22