ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ: ಕರ್ನಾಟಕದಾದ್ಯಂತ ಸಂಭ್ರಮ, ಎಲ್ಲೆಲ್ಲಿ ಹೇಗಿದೆ ಆಚರಣೆ? ಇಲ್ಲಿದೆ ವಿವರ
ಯೋಧ್ಯೆಯಲ್ಲಿ ನಿರ್ಮಾಣಗೊಂಡಿರೋ ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆಗೆ ಶುರುವಾಗಿದೆ. ಇತ್ತ ಕರ್ನಾಟಕ ರಾಜ್ಯದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯಾದ್ಯಂತ ಭಕ್ತರು ನಾನಾ ರೀತಿಯಲ್ಲಿ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಬನ್ನಿ ಕರ್ನಾಟಕದಾದ್ಯಂತ ಸಂಭ್ರಮ ಹೇಗಿದೆ? ಎಂಬ ವಿವರ ಇಲ್ಲಿದೆ.
ಬೆಂಗಳೂರು, ಜ.22: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರೋ ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆಗೆ ಶುರುವಾಗಿದೆ (Ayodhya Ram Mandir). ಈ ಅದ್ಧೂರಿ ಕಾರ್ಯಕ್ರಮಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇತ್ತ ಕರ್ನಾಟಕ ರಾಜ್ಯದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯಲಿದೆ. ರಾಜ್ಯಾದ್ಯಂತ ಭಕ್ತರು ನಾನಾ ರೀತಿಯಲ್ಲಿ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಬನ್ನಿ ಕರ್ನಾಟಕದಾದ್ಯಂತ ಸಂಭ್ರಮ ಹೇಗಿದೆ? ಎಂಬ ವಿವರ ಇಲ್ಲಿದೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಬೆಳಕಿನ ಅಲಂಕಾರ
ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ ಕಚೇರಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಬಿಜೆಪಿ ಕಚೇರಿ ಕಂಗೊಳಿಸುತ್ತಿದೆ.
ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇಗುಲ ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ
ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ಸೀತಾ ರಾಮ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿಯಲ್ಲಿರುವ ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮ ಟ್ರಸ್ಟ್ನಿಂದ ನಿರ್ಮಿಸಲಾಗಿರುವ 32 ಅಡಿ ಎತ್ತರದ ಹನುಮನಮೂರ್ತಿ ಸೇರಿದಂತೆ ದೇವಸ್ಥಾನ ಲೋಕಾರ್ಪಣೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ 12ರಿಂದ 2 ಗಂಟೆವರೆಗೆ ಮಹಾ ಕುಂಬಾಭಿಷೇಕದಲ್ಲಿ ಭಾಗಿಯಾಗಲಿದ್ದಾರೆ.
ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಮನೆಯಲ್ಲಿ ಹಬ್ಬ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮೈಸೂರಿನ ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ. ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇನ್ನು ರಾಮಲಲ್ಲಾ ವಿಗ್ರಹದ ಶಿಲೆ ಸಿಕ್ಕಿದ ಮೈಸೂರು ತಾಲ್ಲೂಕು ಹಾರೋಹಳ್ಳಿ ಗ್ರಾಮದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಶಾಸಕ ಜಿ ಟಿ ದೇವೇಗೌಡ ಜಮೀನು ಮಾಲೀಕ ರಾಮದಾಸ್ ಶಿಲೆ ತೆಗೆದ ಶ್ರೀನಿವಾಸ್ ಭಾಗಿಯಾಗಲಿದ್ದಾರೆ. ವಾಸವಿ ಬಳಗದಿಂದ ಶ್ರೀರಾಮನಿಗೆ ಸಪ್ತ ನದಿಗಳ ನೀರಿನ ಅಭಿಷೇಕ ಮಾಡಲಾಗುತ್ತೆ. ಶ್ರೀರಾಮ ಭಕ್ತರು 1 ಲಕ್ಷದ 8 ಸಾವಿರ ಲಾಡು ವಿತರಣೆ ಮಾಡಲಿದ್ದಾರೆ. ಸೈಕಲ್ ಬ್ರ್ಯಾಂಡ್ ಅಗರಬತ್ತಿ ಕಡೆಯಿಂದ 111 ಅಡಿ ಅಗರಬತ್ತಿ ಹಚ್ಚಿ ಸಂಭ್ರಮಿಸಲಾಗುತ್ತೆ. ಬೆ 9 ಗಂಟೆಗೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟಿ ನರಸೀಪುರದಲ್ಲಿ ಮರಳಿನಲ್ಲಿ ಅಯೋಧ್ಯಾ ರಾಮಮಂದಿರ ನಿರ್ಮಾಣವಾಗಿದೆ. ಇಂದು ಅಶೋಕರಸ್ತೆಯ ಪ್ರತಿ ಅಂಗಡಿಯಲ್ಲಿ ದೀಪೋತ್ಸವ ನಡೆಯುತ್ತಿದೆ. ದೇವರಾಜ ಮೊಹಲ್ಲಾದ ಲೋಕಾಭಿರಾಮ ಕಲ್ಯಾಣಮಂಟಪದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಶ್ರೀ ಜಾನಕಿ ರಾಮಮಂದಿರದಲ್ಲಿ ವಿಶೇಷ ಪೂಜೆ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ ವಿ ರಾಜೀವ್ ಬಳಗದಿಂದ 150 ರಾಮಮಂದಿರದಲ್ಲಿ ಮಹಾಪ್ರಸಾದ ವಿತರಣಾ ಕಾರ್ಯಕ್ರಮ ಜರುಗಲಿದೆ.
ಅಂಜನಾದ್ರಿ ಬೆಟ್ಟದಲ್ಲಿ ಇಂದು ಪ್ರತಿಷ್ಠಾಪನೆಯಾಗಲಿರುವ ರಾಮನ ಮೂರ್ತಿ
ರಾಮನ ಬಂಟ ಆಂಜನೇಯ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ 500 ಕೆಜಿ ತೂಕ, 9 ಅಡಿ ಎತ್ತರದ ಪಂಚಲೋಹದ ರಾಮನ ಮೂರ್ತಿಯನ್ನು ಇಂದು ಕೊಪ್ಪಳದ ಅಂಜನಾದ್ರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತೆ.
ಇದನ್ನೂ ಓದಿ: ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ..’; ಅಯೋಧ್ಯೆಯಿಂದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ
ಹುಬ್ಬಳ್ಳಿಗೆ ಬಂತು 12 ಅಡಿ ಉದ್ಧದ ರಾಮನ ಮೂರ್ತಿ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಹುಬ್ಬಳ್ಳಿಗೆ ಬಂತು 12 ಅಡಿ ಉದ್ಧದ ರಾಮನ ಮೂರ್ತಿ. ಹುಬ್ಬಳ್ಳಿಯ ಗವಳಿ ಗಲ್ಲಿಯ ರಾಮ ಭಕ್ತರು 12 ಅಡಿ ಉದ್ಧದ ರಾಮನ ಮೂರ್ತಿ ನಿರ್ಮಾಣ ಮಾಡಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿದ್ದಾರೆ. ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಿ ರಾಮನ ಮೂರ್ತಿ ಮಾಡಲಾಗಿದೆ. ಬೆಳಗಾವಿಯ ಕಲಾವಿದರಿಂದ ರಾಮನ ಮೂರ್ತಿ ನಿರ್ಮಾಣವಾಗಿದೆ. ಗವಳಿ ಗಲ್ಲಿಯ ಭಕ್ತರೆಲ್ಲ ಸೇರಿ ಹಣ ಕೂಡಿಸಿ ರಾಮನ ಮೂರ್ತಿ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮೊಳಗಿದ ರಾಮಜಪ .. ದೀಪಾಲಂಕಾರದಿಂದ ಝಗಮಗ
ವಿಜಯಪುರ ನಗರವೂ ಕೇಸರಿಮಯವಾಗಿದೆ. ಶಿವಾಜಿ ವೃತ್ತ, ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಕೇಸರಿ ಬಾವುಟ ಕಟ್ಟಿ, ಝಗಮಗಿಸೋ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಮಮಂದಿರ ಮಾದರಿ ಬಳಿ ನೂರಾರು ರಾಮಭಕ್ತರು ದೀಪ ಹಚ್ಚಿ ಸಂಭ್ರಮಿಸಿದ್ದಾರೆ. ಕಲಬುರಗಿಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಶಹಾಬಜಾರ ಬಡಾವಣೆಯನ್ನೇ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದ್ದು, ಮನೆ ಮನೆಗಳ ಮುಂದೆ ದೀಪ ಹಚ್ಚಿ ಸಂಭ್ರಮಿಸಲಾಗುತ್ತಿದೆ.
ಟ್ರೆಂಡ್ ಆಯ್ತು ರಾಮಮಂದಿರ ಟ್ಯಾಟೋ!
ಕೋಟೆನಾಡು ಚಿತ್ರದುರ್ಗದಲ್ಲಿ ರಾಮಮಂದಿರ ಟ್ಯಾಟೊ ಟ್ರೆಂಡ್ ಆಗಿದೆ. ಯುವಕರು ರಾಮಮಂದಿರ, ರಾಮ-ಹನುಮ ಚಿತ್ರದ ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಯುವಕರು ರಾಮಜಪ ಮಾಡ್ತಿದ್ದಾರೆ. ಮೈಸೂರಿನಲ್ಲಿ ಶ್ರೀರಾಮನಿಗಾಗಿ 111 ಅಡಿ ಉದ್ದದ ಅಗರಬತ್ತಿ ಸಿದ್ಧಗೊಂಡಿದೆ. ರಂಗರಾವ್ ಅಂಡ ಸನ್ಸ್‌ನಿಂದ 111 ಅಡಿ ಉದ್ದದ ಅಗರಬತ್ತಿ ತಯಾರಿಸಿದ್ದು, ಪರಂಪರಾ, ಬ್ರಹ್ಮ ವಿಷ್ಣು ಮಹೇಶ್ವರ ಹೆಸರಿನಲ್ಲಿ 111 ಅಡಿ ಅಗರಬತ್ತಿ ತಯಾರಿಸಲಾಗಿದೆ.
1 ಕೋಟಿ 20 ಲಕ್ಷ ಸಲ ರಾಮನಾಮ ಜಪ!
ಚಿಕ್ಕಮಗಳೂರಿನ ಕಡೂರು ಪಟ್ಟಣದ ಅಯ್ಯಪ್ಪ ಸ್ವಾಮಿ ದೇಗುಲದ ಅರ್ಚಕ 1 ಕೋಟಿ 20 ಲಕ್ಷ ಸಲ ರಾಮನಾಮ ಜಪ ಬರೆದಿದ್ದಾರೆ. 89 ವರ್ಷದ ಆರ್ಚಕ ಪರಮೇಶ್ವರನ್ ಸ್ವಾಮಿ 2007 ರಿಂದ ನಿರಂತರವಾಗಿ ರಾಮನಾಮ ಜಪ ಬರೆಯುತ್ತಿದ್ದಾರೆ. ಮೈಸೂರಲ್ಲಿ ನವಜಾತ ಕರುವಿಗೆ ರಾಮನ ಹೆಸರು ನಾಮಕರಣ ಮಾಡಲಾಗಿದೆ. KRS ರಸ್ತೆಯ ಶ್ರೀ ಶಿವಸಾಯಿ ದೇಗುಲದಲ್ಲಿ ನಾಮಕರಣ ಮಾಡಲಾಯ್ತು. ಸ್ನೇಕ್ ಶ್ಯಾಮ್ ಗೋಶಾಲೆಯಲ್ಲಿ ಕರು ಜನಿಸಿತ್ತು.
ಕಲಾವಿದರ ಕೈಯಲ್ಲಿ ಅರಳಿದ ಭವ್ಯ ರಾಮಮಂದಿರ
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮಾಕಾಪೂರು ಗ್ರಾಮದ ಕಲಾವಿದ ರಾಮಜಪ ಮಾಡಿದ್ದಾನೆ. 10 ರೂಪಾಯಿ ಸಂತೂರ್ ಸೋಪ್ನಲ್ಲಿ ಶ್ರೀರಾಮನನ್ನು ಬಿಡಿಸಿದ್ದಾನೆ. ಇನ್ನೂ ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಯುವಕ ನಾಗರಾಜ ಕಮ್ಮಾರ 15 ಕೆಜಿ ಜೋಳ, 2 ಕೆಜಿ ಅಕ್ಕಿಯಲ್ಲಿ ರಾಮಮಂದಿರದ ಮಾದರಿ ಬಿಡಿಸಿದ್ದು, ಇದು 12 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ