ಸನಾದಿ ಅಪ್ಪಣ್ಣರ ನಾಲ್ಕನೇ ತಲೆಮಾರಿನ ಕುಡಿಯಿಂದ ಶಹನಾಯಿ ಬಗ್ಗೆ ಪಿಹೆಚ್ಡಿ; ವಾದನ ಕುರಿತು ಜಾಗೃತಿ ಮೂಡಿಸುವ ಕಾರ್ಯ
ಸನಾದಿ ಅಪ್ಪಣ್ಣ ಶಹನಾಯಿ ವಾದನದಲ್ಲಿ ಖ್ಯಾತಿ ಪಡೆದವರು. ಆ ಪ್ರಖ್ಯಾತಿಗೆ ಸಾಕ್ಷಿ ಅವರ ಹೆಸರಲ್ಲಿ ವರನಟ ರಾಜಕುಮಾರ ನಾಯಕರಾಗಿ ನಟಿಸಿದ ಚಿತ್ರ ತೆರೆಗೆ ಬಂತು, ದಾಖಲೆ ಕೂಡ ನಿರ್ಮಿಸಿತು. ಈಗ ಅವರ ನಾಲ್ಕನೇ ತಲೆಮಾರಿನ ಕುಡಿ ಶಹನಾಯಿಯಲ್ಲಿ ಪಿಹೆಚ್ಡಿ ಮಾಡಿದ್ದಾರೆ. ಯುಗಾದಿ ದಿನವಾದ ಇಂದು(ಏ.09) ಪ್ರಮುಖ ದೇಗುಲದ ವ್ಯಾಪ್ತಿಯಲ್ಲಿ ಶಹನಾಯಿ ನುಡಿಸಿ ಯುಗಾದಿಯ ಶುಭ ಕೋರಿದ್ದಾರೆ. ಜೊತೆಗೆ ವಿಶೇಷ ಬೇಡಿಕೆ ಕೂಡ ಇಟ್ಟಿದ್ದಾರೆ.
ಬಾಗಲಕೋಟೆ, ಏ.09: ಸನಾದಿ ಅಪ್ಪಣ್ಣ ಅವರ ಸಾಧನೆ, ಅವರ ಸನಾದಿ ವಾದನ ಎಷ್ಟು ಖ್ಯಾತಿ ಪಡೆದಿತ್ತು ಎನ್ನುವುದಕ್ಕೆ ರಾಜಕುಮಾರ ಅವರ ಸನಾದಿ ಅಪ್ಪಣ್ಣ ಚಿತ್ರ ಸಾಕ್ಷಿ. ಸನಾದಿ ಅಪ್ಪಣ್ಣ(Sanaadi Appanna) ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿಯವರು. ಇಂದಿಗೂ ಅವರ ಸಮಾಧಿ ಅದೇ ಊರ ಹೊರವಲಯದಲ್ಲಿದೆ. ಆದರೆ, ಅವರಿಗೆ ಸರಕಾರದಿಂದ ಸಿಗಬೇಕಾದ ಗೌರವ ಮಾತ್ರ ಸರಿಯಾಗಿ ಸಿಕ್ಕಿಲ್ಲ ಎಂಬುದು ಬೇಸರದ ಸಂಗತಿ. ಸನಾದಿ ಅಪ್ಪಣ್ಣ ಅವರ ವಂಶಸ್ಥರು ಬೀಳಗಿಯಲ್ಲಿ ನೆಲೆಸಿದ್ದು, ಅವರ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೊರಟಿದ್ದಾರೆ. ಸನಾದಿ ಅಪ್ಪಣ್ಣ ಅವರ ನಾಲ್ಕನೇ ತಲೆಮಾರಿನ ಕುಡಿ ಪುಟ್ಟರಾಜ ಭಜಂತ್ರಿ ಅವರು ಶಹನಾಯಿ ಬಗ್ಗೆ ಪಿಹೆಚ್ಡಿ ಮಾಡಿದ್ದಾರೆ.”ಶಹನಾಯಿ ವಾದನದಲ್ಲಿ ಖಯಾಲ್ ಗಾಯನದ ಪ್ರಭಾವ”ಪ್ರಬಂಧ ರಚಿಸಿ 2023 ರಲ್ಲಿ ಪಿಹೆಚ್ಡಿ ಪಡೆದಿದ್ದಾರೆ. ಆ ಮೂಲಕ ಶಹನಾಯಿ ವಾದನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರೆಸಿದ್ದಾರೆ.
ಸನಾದಿ ಅಪ್ಪಣ್ಣ ಅವರನ್ನು ಸರಕಾರ ನಿರ್ಲಕ್ಷ್ಯ ಮಾಡಿದೆ. ಅವರ ಸಮಾಧಿ ಬಿಟ್ಟರೆ ಸ್ಮಾರಕ ಮಾಡಿಲ್ಲ. ಆ ಜಾಗವನ್ನು ಒಂದು ಪ್ರವಾಸಿ ತಾಣವನ್ನಾಗಿ ಮಾಡುವ ಐತಿಹಾಸಿಕ ಸ್ಥಳ ಮಾಡುವ ಕಾರ್ಯ ಮಾಡಿಲ್ಲ. ಸ್ಥಳದಲ್ಲಿ ಕಸ-ಕಂಟಿಗಳು ಬೆಳೆದು ನಿಂತಿವೆ. ಇನ್ನು ಸನಾದಿ ಅಪ್ಪಣ್ಣ ಅವರ ನಂತರ ಕುಟುಂಬಸ್ಥರು ಶಹನಾಯಿ ವಾದನ ಕಲೆ ಪ್ರಚುರಪಡಿಸುತ್ತಾ ಹೊರಟಿದ್ದಾರೆ. ಇಡೀ ಕುಟುಂಬಸ್ಥರು ಇಂದಿಗೂ ಶಹನಾಯಿ ನುಡಿಸುವ ಕಾರ್ಯ ಮಾಡುತ್ತಾರೆ. ಇಲ್ಲಿ ಪುಟ್ಟರಾಜ ತಂದೆ ಬಸವಂತಪ್ಪ ಕೂಡ ಶಹನಾಯಿ ವಾದಕ. ಪುಟ್ಟರಾಜ ಅವರ ತಮ್ಮ ಮುತ್ತಾತ ಸನಾದಿ ಅಪ್ಪಣ್ಣ ಅವರ ಬಗ್ಗೆ ಅತಿ ಹೆಚ್ಚು ಅಭಿಮಾನ ಹೊಂದಿದವರಾಗಿದ್ದಾರೆ. ಸಂಗೀತದಲ್ಲಿ ಎಮ್ಎ ಪದವಿ ಪಡೆದಿದ್ದಾರೆ. ಗದಗಿನ ಪುಟ್ಟರಾಜ ಸಂಗೀತ ಶಾಲೆಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ.
ಇದನ್ನೂ ಓದಿ:ಅಣ್ಣವ್ರ ಸನಾದಿ ಅಪ್ಪಣ್ಣ ಸಿನಿಮಾದ ಪ್ರೇರಣೆಗೊಂಡು ಮೂಗಿನಲ್ಲೇ ಶಹನಾಯ್ ನುಡಿಸುವ ಯುವ ಕಲಾವಿದ
ಹೊರ ರಾಜ್ಯದಲ್ಲೂ ಶಹನಾಯಿ ಕಾರ್ಯಕ್ರಮ
ಸನಾದಿ ಅಪ್ಪಣ್ಣ ಅವರ ಸನಾದಿ ವಾದನ ಕಲೆ ಎಂದೂ ನಶಿಸಬಾರದು. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಮತ್ತಷ್ಟು ಎತ್ತರಕ್ಕೆ ಹಾರಿಸಬೇಕೆಂಬುದು ಇವರ ಉದ್ದೇಶ. ಇನ್ನು ತಂದೆ ಬಸವಂತಪ್ಪ, ಮಗ ಪುಟ್ಟರಾಜ ರಾಜ್ಯ ಪರರಾಜ್ಯದಲ್ಲೂ ಶಹನಾಯಿ ಕಾರ್ಯಕ್ರಮ ನೀಡುತ್ತಾರೆ. ಆ ಮೂಲಕ ಎಲ್ಲರಿಂದಲೂ ಮೆಚ್ಚುಗೆ ಸನ್ಮಾನ ಪಡೆದಿದ್ದಾರೆ. ಇವರು ಶಹನಾಯಿ ವಾದನ ಉಳಿಸುವುದರ ಜೊತೆಗೆ ಸನಾದಿ ಅಪ್ಪಣ್ಣ ಅವರ ಹೆಸರನ್ನು ಸದಾ ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸನಾದಿ ಅಪ್ಪಣ್ಣ ಅವರ ವಂಶಸ್ಥರು ಎನ್ನುವದೇ ಇವರಿಗೆ ಹೆಮ್ಮೆ. ಸರಕಾರ ಶಾಲೆ-ಕಾಲೇಜುಗಳಲ್ಲಿ ಶಹನಾಯಿ ಸಂಗೀತ ಕಲಿಸಬೇಕು. ಆ ಬಗ್ಗೆ ಪಾಠ ಮಾಡಬೇಕು. ಆ ಮೂಲಕ ಶಹನಾಯಿಗೆ ಹೆಚ್ಚು ಆಧ್ಯತೆ ನೀಡಬೇಕು ಎಂಬುದು ಇವರ ಆಗ್ರಹವಾಗಿದೆ.
ಸನಾದಿ ಅಪ್ಪಣ್ಣ ಅವರ ವಂಶಸ್ಥರು ಶಹನಾಯಿ ಹಾಗೂ ಅಪ್ಪಣ್ಣ ಹೆಸರು ಉಳಿವಿಕೆಗಾಗಿ ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ. ಸರಕಾರ ಇವರಿಗೆ ಕೈ ಜೋಡಿಸಿ ಶಹನಾಯಿ ಕಲೆ ಹಾಗೂ ಅಪ್ಪಣ್ಣ ಅವರ ಹೆಸರು ಇನ್ನಷ್ಟು ಅಜರಾಮರವಾಗಿಸುವ ನಿಟ್ಟಿನಲ್ಲಿ ಪ್ರಮುಖ ಕಾರ್ಯ ಮಾಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ