ಬಾಗಲಕೋಟೆ, ಆ.07: ಜಿಲ್ಲಾ ಆರೋಗ್ಯ ಇಲಾಖೆ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುತ್ತದೆ. ಕಳೆದ ವರ್ಷ ಡಿಹೆಚ್ಒ(DHO) ಹುದ್ದೆಗಾಗಿ ಬಾಗಲಕೋಟೆ(Bagalakote) ಶಾಸಕ ಹೆಚ್ವೈ ಮೇಟಿ ಅಳಿಯ ರಾಜಕುಮಾರ ಯರಗಲ್ ಹಾಗೂ ಜಯಶ್ರಿ ಎಮ್ಮಿ ಮಧ್ಯೆ ತಿಕ್ಕಾಟ ನಡೆದಿತ್ತು. ಸರಕಾರದ ಆದೇಶದ ಪ್ರಕಾರ ರಾಜಕುಮಾರ ಯರಗಲ್, ‘ನಾನು ಡಿಹೆಚ್ಒ ಎಂದು ಬಂದರೆ, ಜಯಶ್ರಿ ಅವರು ನನ್ನನ್ನು ವರ್ಗಾವಣೆ ಮಾಡಲು ಬರೋದಿಲ್ಲ ಎಂದು ಕೆಎಟಿ ಮೊರೆ ಹೋಗಿದ್ದರು. ಈ ಮಧ್ಯೆ ರಾಜಕುಮಾರ ಯರಗಲ್ 92 ಎನ್ಹೆಚ್ಎಮ್ ಹುದ್ದೆ ನೇಮಕ ಮಾಡಿದ್ದರು. ಆದರೆ, ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ನಿಯಮ ಪಾಲಿಸಿಲ್ಲ ಎಂದು ನಿಕಟಪೂರ್ವ ಡಿಹೆಚ್ಒ ಜಯಶ್ರಿ ಎಮ್ಮಿ ಸಿಇಒ ಅವರಿಗೆ ವರದಿ ಮಾಡಿದ್ದಾರೆ. ಅದನ್ನು ಆಧರಿಸಿ ಸಿಇಒ ಅವರು ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯ ಸಂಘಕ್ಕೆ ಸಿಇಒ ಅಧ್ಯಕ್ಷರಿದ್ದು, ಸಿಇಒ ಗಮನಕ್ಕೆ ತರದೆ ನೇಮಕಾತಿ ಆದ ಹಿನ್ನೆಲೆ 92 ಹುದ್ದೆ ರದ್ದು ಮಾಡಿದ್ದಾರೆ.
92 ಹುದ್ದೆಗಳಲ್ಲಿ ಆಯುಷ್ ವೈದ್ಯರು, ಸ್ಟಾಪ್ ನರ್ಸ್, ಡಿ ದರ್ಜೆ ನೌಕರರಿದ್ದಾರೆ. ಎಲ್ಲರೂ ಈಗಾಗಲೇ ಯರಗಲ್ ಆದೇಶದ ಮೇರೆಗೆ ಕರ್ತವ್ಯದ ಮೇಲಿದ್ದರು. ಆದರೆ, ಈಗ ಸಿಇಒ ಅವರು ಎಲ್ಲರನ್ನು ಬಿಡುಗಡೆಗೊಳಿಸಿ ಆದೇಶ ಮಾಡಿದ್ದಾರೆ. ಇದರಿಂದ 92 ಜನರ ಸ್ಥಿತಿ ಆತಂತ್ರವಾಗಿದೆ. ನೇಮಕಾತಿ ವೇಳೆ ಲಕ್ಷಾಂತರ ರೂ. ಪಡೆದು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೂಡ ಇದೆ.
ಇದನ್ನೂ ಓದಿ:ಹಾಲಿ, ಮಾಜಿ ಶಾಸಕರು ಮತ್ತು ರಾಜಕಾರಣಿಗಳ ವಿರುದ್ಧ 132 ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲು
ಆದರೆ, ಈಗ ಎಲ್ಲ ಹುದ್ದೆ ರದ್ದು ಮಾಡಿದ ಸಿಇಒ, ಆರೋಗ್ಯ ಇಲಾಖೆಗೆ ಯರಗಲ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಬರೆದಿದ್ದಾರೆ. ಇಲ್ಲಿ ಕೇವಲ 92 ಹುದ್ದೆ ರದ್ದು ಮಾಡಿದರೆ ಸಾಲದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದ್ದಾರೆ. ಒಟ್ಟಿನಲ್ಲಿ ಆರೋಗ್ಯ ಇಲಾಖೆ ಮೇಲಿಂದ ಮೇಲೆ ಸುದ್ದಿಯಾಗುತ್ತಿದ್ದು, ನೌಕರಿ ಕಳೆದುಕೊಂಡವರು ಮುಂದಿನ ನಡೆ ಏನು ಎಂಬುದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ