AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಧೋಳದಲ್ಲಿ ರಾತ್ರೋರಾತ್ರಿ ಮನೆ ಕಳ್ಳತನಕ್ಕೆ ಬಂದ ಚಡ್ಡಿ ಗ್ಯಾಂಗ್: ಅಮೆರಿಕದಿಂದಲೇ ತಪ್ಪಿಸಿದ ಯುವತಿ!

ಬಾಗಲಕೋಟೆಯ ಮುಧೋಳದ ಆ ಮನೆಯಲ್ಲಿ ಇಬ್ಬರು ವೃದ್ಧ ದಂಪತಿ ಮಾತ್ರ ವಾಸವಾಗಿದ್ದರು. ಇದನ್ನೇ ಬಂಡವಾಳ‌ ಮಾಡಿಕೊಂಡ ಚಡ್ಡಿ ಕಳ್ಳರ ಗ್ಯಾಂಗ್ ಮನೆ ಕಳ್ಳತನಕ್ಕೆ ಬಂದಿತ್ತು. ಆದರೆ, ಇದನ್ನು ಗಮನಿಸಿದ್ದು ಆ ದಂಪತಿಯ ಅಮೆರಿಕದಲ್ಲಿ ನೆಲೆಸಿರುವ ಮಗಳು. ಬಳಿಕ ಕಳ್ಳರ ಪ್ಲ್ಯಾನ್ ಠುಸ್ ಆಗಿದ್ದೇ ರೋಚಕ!

ಮುಧೋಳದಲ್ಲಿ ರಾತ್ರೋರಾತ್ರಿ ಮನೆ ಕಳ್ಳತನಕ್ಕೆ ಬಂದ ಚಡ್ಡಿ ಗ್ಯಾಂಗ್: ಅಮೆರಿಕದಿಂದಲೇ ತಪ್ಪಿಸಿದ ಯುವತಿ!
ಮುಧೋಳದಲ್ಲಿರುವ ಎಂಜಿನಿಯರ್​ ಹನುಮಂತಗೌಡರ ಮನೆ ಹಾಗೂ ಅಮೆರಿಕದಲ್ಲಿರುವ ಅವರ ಮಗಳು ಶ್ರುತಿ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Aug 28, 2025 | 7:06 AM

Share

ಬಾಗಲಕೋಟೆ, ಆಗಸ್ಟ್ 28: ಒಬ್ಬನ ಮುಖಕ್ಕೆ ಮಂಕಿ ಕ್ಯಾಪ್, ಮತ್ತೊಬ್ಬನ ಮುಖದಲ್ಲಿ ಮಾಸ್ಕ್, ಮೈಮೇಲೆ ಶರ್ಟ್ ಇದೆ ಆದರೆ ಪ್ಯಾಂಟೇ ಇಲ್ಲ. ಇರೋದು ಬರೀ ಚಡ್ಡಿ! ಅವರು ಕಳ್ಳಬೆಕ್ಕಿನಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದಿದ್ದರು. ಇವರು ಬರುತ್ತಿರುವುದು ಮನೆ ಒಳಗಿದ್ದವರಿಗಂತೂ ಗೊತ್ತಾಗಿಲ್ಲ. ಆದರೆ, ದೂರದ ಅಮೆರಿಕದಲ್ಲಿ ಕೂತಿದ್ದ ಮನೆ ಮಗಳಿಗೆ ಗೊತ್ತಾಗಿತ್ತು. ಇದು ಬಾಗಲಕೋಟೆ (Bagalkot) ಜಿಲ್ಲೆಯ ಮುಧೋಳದಲ್ಲಿರುವ (Mudhol) ನಿವೃತ್ತ ಪಿಡಬ್ಲ್ಯುಡಿ ಎಂಜಿನಿಯರ್​ ಹನುಮಂತಗೌಡರ ಮನೆಯಲ್ಲಿ ನಡೆದ ಘಟನೆ. ಮಂಗಳವಾರ ರಾತ್ರಿ ನಾಲ್ಕು ಜನರ ಚಡ್ಡಿ ಗ್ಯಾಂಗ್​ (Chaddi Gang) ತಡರಾತ್ರಿ​ 1 ಗಂಟೆಗೆ ಎಂಟ್ರಿ ಕೊಟ್ಟಿತ್ತು. ಮನೆಗೆ ಸಿಸಿಟಿವಿ ಕ್ಯಾಮರಾ ಹಾಕಿಸಿದ್ದಾರೆ. ಹನುಮಂತಗೌಡರ ಅಮೆರಿಕದಲ್ಲಿರುವ ಪುತ್ರಿ ಶ್ರುತಿ ತನ್ನ ಮೊಬೈಲ್​​ಗೆ ಸಿಸಿ ಕ್ಯಾಮರಾ ಕನೆಕ್ಟ್​ ಮಾಡಿಕೊಂದ್ದು, ಅಲ್ಲಿಂದಲೇ ಮನೆಯವರನ್ನು ಗಮನಿಸುತ್ತಿದ್ದರು. ಆದರೆ, ರಾತ್ರಿ ಚಡ್ಡಿ ಗ್ಯಾಂಗ್ ಮನೆ ಬಳಿ ಬರುತ್ತಿದ್ದಂತೆಯೇ, ಶ್ರುತಿ ಮೊಬೈಲ್​ಗೆ ಅಲರ್ಟ್ ಮೆಸೇಜ್ ಬಂದಿದೆ. ಈ ವೇಳೆ ಅವರು ಕ್ಯಾಮರಾ ಚೆಕ್ ಮಾಡಿದಾಗ ಚಡ್ಡಿ ಗ್ಯಾಂಗ್ ಕಾಣಿಸಿದೆ.

ಅಮೆರಿಕದಲ್ಲೇ ಕೂತು ಖದೀಮರನ್ನು ನೋಡಿದ ಶ್ರುತಿ, ಕೂಡಲೇ ಮನೆಯವರಿಗೆ ಫೋನ್ ಮಾಡಿದ್ದಾರೆ.ಕಳ್ಳರು ನುಗ್ಗಿರುವ ಬಗ್ಗೆ ಹೇಳಿದ್ದಾರೆ. ಎಚ್ಚೆತ್ತ ಹನುಮಂತಗೌಡ, ಮನೆ ಬಾಗಿಲು ತೆರೆದಾಗ ಚಡ್ಡಿ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ.

ಇನ್ನು ಈ ಚಡ್ಡಿ ಗ್ಯಾಂಗ್, ಹನುಮಂತಗೌಡರ ಮನೆಗೆ ನುಗ್ಗುವ ಮೊದಲು, ಅಶೋಕ್ ಕರಿಹೊನ್ನ ಎಂಬವರ ಮನೆಗೂ ನುಗ್ಗಿತ್ತಂತೆ. ಅಲ್ಲಿ 100 ಗ್ರಾಂ ಚಿನ್ನ ದೋಚಿ ಪರಾರಿಯಾಗಿದೆ. ಸದ್ಯ, ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್​ವೇರ್ ಎಂಜಿನಿಯರ್​ ಶ್ರುತಿ ಸಮಯಪ್ರಜ್ಞೆಯಿಂದ ಮನೆ ಕಳ್ಳತನ ತಪ್ಪಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಕೂತು ಬಾಗಲಕೋಟೆ ಮನೆ ಕಳ್ಳತನ ತಪ್ಪಿಸಿದ ಶೃತಿ: ಆಗಿದ್ದೇನು?

ಇದೀಗ ಚಡ್ಡಿ ಗ್ಯಾಂಗ್ ಬಗ್ಗೆ ಕೇಸ್​ ದಾಖಲಿಸಿಕೊಂಡಿರುವ ಮುಧೋಳ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಮುಧೋಳ ಕಳ್ಳತನ ಪ್ರಕರಣ ಅಮೆರಿಕದಿಂದ ಬಯಲಾಗಿದ್ದು, ಪೊಲೀಸರು ಚಡ್ಡಿ ಗ್ಯಾಂಗ್ ಅನ್ನು ಆದಷ್ಟು ಬೇಗ ಹಿಡಿದು, ಮುಂದೆ ಆಗಬಹುದಾದ ಇನ್ನಷ್ಟು ಕಳ್ಳತನ ಪ್ರಕರಣಗಳನ್ನು ತಡೆಯಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ