ಅಲ್ಲಿ 20 ವರ್ಷದಿಂದ ಬಿಜೆಪಿಯ ಅದೇ ಅಭ್ಯರ್ಥಿ ವಿಜಯ ಸಾಧಿಸುತ್ತಿದ್ದಾರೆ, ಕಾಂಗ್ರೆಸ್ ಮಾತ್ರ ಸೋಲುತ್ತಲೇ ಇದೆ!
ಬಾಗಲಕೋಟೆ ಲೋಕಸಭೆ ಕ್ಷೇತ್ರ ಘಟಾನುಘಟಿಗಳ ಅಖಾಡಕ್ಕೆ ಸಾಕ್ಷಿಯಾಗಿದೆ. 1991 ರಲ್ಲಿ ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರು ಸಿದ್ದು ನ್ಯಾಮಗೌಡ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದು ಇತಿಹಾಸ. ವೀರೇಂದ್ರ ಪಾಟೀಲರು 1980 ರ ದಶಕದಲ್ಲಿ ಇಲ್ಲಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಮಧ್ಯೆ, ಪಿಸಿ ಗದ್ದಿಗೌಡರ ಐದನೇ ಬಾರಿ ಇಲ್ಲಿ ಸತತ ಗೆಲುವು ಸಾಧಿಸಲು ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ.
ಆ ಕ್ಷೇತ್ರದಲ್ಲಿ 20 ವರ್ಷಗಳ ಕಾಲ ಲೋಕಸಭೆ ಬಿಜೆಪಿ ಪಾಲಾಗಿದೆ. ಬಿಜೆಪಿಯ ಏಕಮೇವ ಅಭ್ಯರ್ಥಿ 20 ವರ್ಷ ಸಂಸದರಾಗಿದ್ದಾರೆ. ಆದರೆ ಕೈ ಪಾಳಯದಲ್ಲಿ ಮಾತ್ರ ಪ್ರತಿ ಚುನಾವಣೆಯಲ್ಲೂ ಹೊಸ ಮುಖಕ್ಕೆ ಮಣೆ ಹಾಕುತ್ತಲೇ ಬಂದಿದೆ. ಸತತ ಸೋಲುತ್ತಲೇ ಇದೆ. ಈಗ ಮತ್ತೆ ಕಾಂಗ್ರೆಸ್ ಹೊಸಮುಖಕ್ಕೆ ಟಿಕೆಟ್ ನೀಡಿದ್ದು ಅಸಮಾಧಾನ ಸ್ಪೋಟವಾಗಿದೆ.
ಬಾಗಲಕೋಟೆ ರಾಜಕೀಯ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದುಕೊಂಡ ಕ್ಷೇತ್ರವಾಗಿದೆ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟಿಲ್, ಎಸ್ ನಿಜಲಿಂಗಪ್ಪನಂತವರು ಸ್ಪರ್ಧೆ ಮಾಡಿದಂತಹ ಜಿಲ್ಲೆ ಬಾಗಲಕೋಟೆ. ಇಂತಹ ಕ್ಷೇತ್ರದಲ್ಲಿ ಇದೀಗ ಲೋಕಸಭೆ ಕಾವು ಹೆಚ್ಚಾಗಿದೆ. ಬಿಜೆಪಿ ಪಕ್ಷದಿಂದ ಪಿಸಿ ಗದ್ದಿಗೌಡರ ಐದನೇ ಬಾರಿ ಟಿಕೆಟ್ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷ ಸಚಿವ ಶಿವಾನಂದ ಪಾಟೀಲ್ ಮಗಳು ಸಂಯುಕ್ತಾ ಗೆ ಟಿಕೆಟ್ ನೀಡಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಹೊಸಮುಖಕ್ಕೆ ಮಣೆ ಹಾಕಿದೆ.
2009 ರಿಂದ ಪ್ರತಿ ಚುನಾವಣೆಯಲ್ಲೂ ಕೈ ಪಕ್ಷ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾ ಬಂದಿದೆ. 2009ರಲ್ಲಿ ಜೆಟಿ ಪಾಟೀಲ್, 2014 ರಲ್ಲಿ ಅಜಯಕುಮಾರ ಸರನಾಯಕ, 2019 ರಲ್ಲಿ ವೀಣಾ ಕಾಶಪ್ಪನವರ, ಇದೀಗ 2024 ರಲ್ಲಿ ಸಂಯುಕ್ತಾ ಪಾಟೀಲ್ ಹೀಗೆ ನಿರಂತರವಾಗಿ ಹೊಸ ಅಭ್ಯರ್ಥಿಗೇ ಟಿಕೆಟ್ ನೀಡಲಾಗಿದೆ. ಆದರೆ ಇದು ಕಾಂಗ್ರೆಸ್ ಹಿನ್ನಡೆಗೆ ಒಂದು ಕಾರಣವಾಗಿದೆ.
ಜೊತೆಗೆ ಒಂದು ಸಾರಿ ಸೋತವರು ಮತ್ತೆ ನಿಂತರೆ ಅನುಕಂಪ ಅಲೆ ಇರುತ್ತದೆ. ಆದರೆ ಇಲ್ಲಿ ಅನುಕಂಪಕ್ಕೂ ಅವಕಾಶ ಇಲ್ಲದಂತಾಗಿದೆ. ಪ್ರತಿ ಬಾರಿ ಹೊಸ ಮುಖಕ್ಕೆ ಟಿಕೆಟ್ ನೀಡೋದರಿಂದ ಕ್ಷೇತ್ರಕ್ಕೆ ಪರಿಚಯ ಕೊರತೆ ಕಾಡುತ್ತದೆ. ಇದೆಲ್ಲ ಕಾರಣಗಳೂ ಕೂಡ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕ ಶ್ರೀಶೈಲ ಬಿರಾದಾರ ವ್ಯಾಖ್ಯಾನಿಸಿದ್ದಾರೆ.
ಬಾಗಲಕೋಟೆ ಲೋಕಸಭೆ ಕ್ಷೇತ್ರ ಘಟಾನುಘಟಿಗಳ ಅಖಾಡಕ್ಕೆ ಸಾಕ್ಷಿಯಾಗಿದೆ. ೧೯೯೧ ರಲ್ಲಿ ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರು ಸಿದ್ದು ನ್ಯಾಮಗೌಡ ವಿರುದ್ಧ ಸ್ಪರ್ಧೆ ಮಾಡಿ ಸೋತಿದ್ದು ಇತಿಹಾಸ. ವೀರೇಂದ್ರ ಪಾಟೀಲರು 1980 ರ ದಶಕದಲ್ಲಿ ಇಲ್ಲಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದಾರೆ.
ಇಂತಹ ಕ್ಷೇತ್ರದಲ್ಲಿ 2004 ರಿಂದ ಗದ್ದಿಗೌಡರ ನಿರಂತರ ಗದ್ದುಗೆ ಹಿಡಿದಿದ್ದಾರೆ. ಗದ್ದಿಗೌಡರಗೆ ಎದುರಾಗಿ ಕಾಂಗ್ರಸ್ ನ ಐದು ಅಭ್ಯರ್ಥಿಗಳು ಸ್ಪರ್ಧಿಸಿ ಸೋತಿದ್ದಾರೆ. ೨೦೦೪ ಆರ್ ಎಸ್ ಪಾಟೀಲ್ ಒಬ್ಬರನ್ನು ಬಿಟ್ಟು ಎಲ್ಲರೂ ಹೊಸಮುಖಗಳೇ ಆಗಿವೆ. ಈಗ ಅವರ ಎದುರು ಸಂಯುಕ್ತಾ ಪಾಟೀಲ್ ಮತ್ತೆ ಹೊಸಮುಖವಿದೆ. ಸಂಯುಕ್ತಾ ಪಾಟೀಲ್ ಸಚಿವ ಶಿವಾನಂದ ಪಾಟೀಲ್ ಮಗಳು, ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ. ಇದು ಬಿಟ್ಟರೆ ಬೇರೆ ಯಾವುದೇ ಸರ್ಟಿಫಿಕೇಟ್ ಇಲ್ಲ. ಮೇಲಾಗಿ ಈಗ ಪರ ಜಿಲ್ಲೆಯವರು ಎಂಬ ಹಣೆಪಟ್ಟಿಯಿದೆ.
ಇನ್ನೊಂದೆಡೆ ವೀಣಾ ಕಾಶಪ್ಪನವರ ಅಸಮಾಧಾನ ಭುಗಿಲೆದ್ದಿದೆ. ಈ ಮಧ್ಯೆ 30 ವರ್ಷದ ಸಂಯುಕ್ತಾ ಪಾಟೀಲ್ ಎದುರಿಗೆ 40 ವರ್ಷ ರಾಜಕೀಯ ಅನುಭವ ಹೊಂದಿರುವ ಗದ್ದಿಗೌಡರ ಇದಾರೆ. ಒಂದೊಂದು ಸಂದರ್ಭದಲ್ಲಿ ಒಂದೊಂದು ಅಲೆ ಮೂಲಕ ಗದ್ದಿಗೌಡರ ಗೆದ್ದಿದ್ದಾರೆ ಅಷ್ಟೇ. ಹಾಗಂತ ಇದಕ್ಕೆ ಹೊಸಮುಖಗಳಿಗೆ ಟಿಕೆಟ್ ಕೊಟ್ಟಿರೋದು ಕಾರಣವಲ್ಲ. ಈ ಬಾರಿ ನಮ್ಮ ಗೆಲುವು ಖಚಿತ ಎಂದು ಕೈ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ನಾಲ್ಕು ಚುನಾವಣೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿರುವ ಕಾಂಗ್ರೆಸ್, ಈ ಬಾರಿ ಗೆಲುವಿನ ಭಾರಿ ನಿರೀಕ್ಷೆಯಲ್ಲಿದೆ. ಹೊಸಮುಖ ಜೊತೆಗೆ ಪರಜಿಲ್ಲೆಯ ಸಂಯುಕ್ತಾ ಪಾಟೀಲ್ ವೀಣಾ ಅಸಮಾಧಾನದ ಮಧ್ಯೆ ಗೆಲುವು ಕಾಣ್ತಾರಾ ಚುನಾವಣೆಯೇ ಉತ್ತರಿಸಲಿದೆ.