ಉಚ್ಚಾಟನೆ ಬೆನ್ನಲ್ಲೇ ಕೂಡಲಸಂಗಮಕ್ಕೆ ಧಾವಿಸಿದ ಬಸವ ಜಯಮೃತ್ಯುಂಜಯ ಶ್ರೀ: ಹೊಸ ಪೀಠ ಕಟ್ಟುವ ಬಗ್ಗೆ ಸುಳಿವು
ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭಾನುವಾರ ಉಚ್ಚಾಟನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ, ಪಂಚಮಸಾಲಿ ಟ್ರಸ್ಟ್ ವಿರುದ್ಧ ಬಸವ ಜಯಮೃತ್ಯುಂಜಯ ಶ್ರೀ ಗುಡುಗಿದ್ದಾರೆ. ತಮ್ಮನ್ನು ಉಚ್ಟಾಟಿಸುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ. ಭಕ್ತರ ಜತೆ ಕೂಡಲಸಂಗಮದಲ್ಲೇ ಕಣ್ಣೀರಿಟ್ಟಿದ್ದಾರೆ. ಹೊಸ ಪೀಠ ಕಟ್ಟುವುದಾಗಿ ಹೇಳಿಕೊಂಡಿದ್ದಾರೆ.

ಬಾಗಲಕೋಟೆ, ಸೆಪ್ಟೆಂಬರ್ 23: ಕೂಡಲಸಂಗಮದ ಪಂಚಮಸಾಲಿ ಮಹಾಪೀಠಕ್ಕೆ (Lingayat Panchamasali Peetha) ಬೀಗ ಬಿದ್ದಿದೆ. ಬಸವ ಜಯಮೃತ್ಯುಂಜಯ ಶ್ರೀ (Basava Jaya Mruthyunjaya Swamiji) ಉಚ್ಚಾಟನೆ ಬಳಿಕ ನೀರವ ಮೌನ ಆವರಿಸಿದೆ. ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಭಾನುವಾರ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ (Vijayanand Kashappanavar) ನೇತೃತ್ವದ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್‌ನ ಕಾರ್ಯಕಾರಿಣಿ ಜಯಮೃತ್ಯುಂಜಯ ಶ್ರೀಗಳನ್ನು ಉಚ್ಚಾಟಿಸಿ ನಿರ್ಧಾರ ಪ್ರಕಟಿಸಿತ್ತು. ಸ್ವಾಭಿಮಾನವಿದ್ದರೆ ಸ್ವಾಮೀಜಿ ಪೀಠದ ಕಡೆ ಬರಬಾರದೆಂದು ಟ್ರಸ್ಟ್‌ನ ಅಧ್ಯಕ್ಷ ಕಾಶಪ್ಪನವರ್ ಹೇಳಿದ್ದರು.
ಉಚ್ಚಾಟನೆ ಬಳಿಕ ಶ್ರೀಗಳು ಕೂಡಲಸಂಗಮಕ್ಕೆ ಧಾವಿಸಿದ್ದಾರೆ. ಆದರೆ, ಸ್ವಾಮೀಜಿಗೆ ಸಭೆ ನಡೆಸಲು ಎಲ್ಲೂ ಅವಕಾಶ ಸಿಗಲಿಲ್ಲ. ಕಾಶಪ್ಪನವರ ಪರೋಕ್ಷ ಸೂಚನೆಯಿಂದಾಗಿ ಎಲ್ಲೂ ಹಾಲ್‌ಗಳನ್ನು ನೀಡಿಲ್ಲ. ಹಾಗಾಗಿ, ಆಲದಮರದ ಕೆಳಗೆ ಭಕ್ತರ ಜತೆ ಶ್ರೀಗಳು ಸಭೆ ನಡೆಸಿದ್ದು, ಈ ವೇಳೆ ಭಾವುಕರಾದರು.
ಈ ಮಧ್ಯೆ, ಶ್ರೀಗಳ ಉಚ್ಚಾಟನೆ ಬಗ್ಗೆ ದಾವಣಗೆರೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಭಕ್ತರು, ಸಮುದಾಯದ ಮುಖಂಡರ ಜತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಕೂಡಲಸಂಗಮದಲ್ಲೇ ಹೊಸ ಪೀಠ ಕಟ್ಟುವ ಬಗ್ಗೆ ಮಾತಾಡಿದ್ದಾರೆ.
ಕೂಡಲಸಂಗಮದ ಪಂಚಮಸಾಲಿ ಮಹಾಪೀಠ ಪ್ರಕರಣದ ಹಿನ್ನೆಲೆ
ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಜುಲೈ ತಿಂಗಳಲ್ಲಿ ರಾತ್ರೋರಾತ್ರಿ ಬೀಗ ಹಾಕಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿಜಯಾನಂದ ಕಾಶಪ್ಪನವರ್ ಸೂಚನೆ ಮೇರೆಗೆ ಪೀಠಕ್ಕೆ ಬೀಗ ಜಡಿಯಲಾಗಿದೆ ಎನ್ನಲಾಗಿದ್ದು, ನಂತರ ಸ್ವಾಮೀಜಿಯ ಬೆಂಬಲಿಗರು ಬೀಗ ಒಡೆದಿದ್ದರು. ಈ ವಿಚಾರವಾಗಿ ಐವರ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ, ಪಂಚಮಸಾಲಿ ಮೀಸಲಾತಿ ಹೋರಾಟ ಇಡೀ ರಾಜ್ಯದ ಗಮನ ಸೆಳೆದಿತ್ತು. ಕಾಂಗ್ರೆಸ್ ಪಂಚಮಸಾಲಿ ನಾಯಕರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ವಿಜಯಾನಂದ ಕಾಶಪ್ಪನರ್, ಹೆಬ್ಬಾಳ್ಕರ್, ಬಿಜೆಪಿ ನಾಯಕರಾದ ಯತ್ನಾಳ್ ಮುಂಚೂಣಿ ಹೋರಾಟ ನಡೆಸಿದ್ದರು.

ಕೂಡಲಸಂಗಮದಲ್ಲಿ ಬಿಗಿ ಭದ್ರತೆ
ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆ ಪಕ್ಷದ ನಾಯಕರು ಹೋರಾಟದಿಂದ ಪಲಾಯನ ಮಾಡಿದ್ದರು. ಆದರೆ, ಅಂದು ಬಿಜೆಪಿಯಲ್ಲಿದ್ದ ಪಂಚಮಸಾಲಿ ನಾಯಕ ಯತ್ನಾಳ್ ಹಾಗೂ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಒಗ್ಗಟ್ಟಿನ ಮಂತ್ರ ಸಾರಿದ್ದರು. ಇದು ವಿಜಯಾನಂದ ಕಾಶಪ್ಪನವರ ಹಾಗೂ ಪಂಚಮಸಾಲಿ ಶ್ರೀ ಮಧ್ಯೆ ಬಿರುಕು ಮೂಡಲು ಕಾರಣವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಪೀಠಕ್ಕೆ ಬೀಗ ಜಡಿಯಲಾಗಿತ್ತು.
ಇದನ್ನೂ ಓದಿ: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ
ಸಂದರ್ಭ ಬಂದರೆ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದಲೇ ಇಳಿಸುತ್ತೇವೆ ಎಂದು ಕಾಶಪ್ಪನವರ್ ಜುಲೈಯಲ್ಲೇ ಎಚ್ಚರಿಕೆ ನೀಡಿದ್ದರು. ಇದೀಗ ಅದರಂತೆಯೇ ನಡೆದಿದೆ. ಸದ್ಯ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




