ಬಾಗಲಕೋಟೆ: ನಾನೇನಾದ್ರೂ ತಪ್ಪು ಮಾಡಿದ್ದರೆ ಚೌಡೇಶ್ವರಿ ನನಗೆ ಶಿಕ್ಷೆ ಕೊಡಲಿ. ನಮ್ಮ ಮನೆ ದೇವರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ. ನಾನು ತಪ್ಪು ಮಾಡಿಲ್ಲ ಅಂದ್ರೆ ಬೇಗನೆ ಶಿಕ್ಷೆಯಿಂದ ಹೊರಬರಲಿ. ಇದು ದೇವರಲ್ಲಿ ನನ್ನ ಪ್ರಾರ್ಥನೆ ಎಂದು ಮಾಜಿ ಸಚಿವ ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದಾರೆ. 15 ದಿನದಲ್ಲಿ ಇದಕ್ಕೊಂದು ರೂಪ ಬರುತ್ತೆ ಅಂತ ಅನ್ಕೊಂಡಿದ್ದೇನೆ. ಸಂಪುಟಕ್ಕೆ (Cabinet) ಸೇರಿಸಿಕೊಳ್ಳೋದು ಬಿಡೋದು ಹೈಕಮಾಂಡ್ಗೆ ಬಿಟ್ಟಿದ್ದು. ಕೇಂದ್ರದ ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನೂರಕ್ಕೆ ನೂರು ದೇವರ ಕೃಪೆಗೆ ಪಾತ್ರ ಆಗುತ್ತೇನೆ ಎಂದು ಮಾಜಿ ಸಚಿವರು ತಿಳಿಸಿದರು.
ಇದೇ ವೇಳೆ ಬಿವೈ ವಿಜಯೇಂದ್ರಗೆ ಎಂಎಲ್ಸಿ ಟಿಕೆಟ್ ಕೈತಪ್ಪಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಪಕ್ಷದಲ್ಲಿ ಲಕ್ಷಾಂತರ ಜನರು ಟಿಕೆಟ್ ತಪ್ಪಿದವರು ಇದ್ದಾರೆ. ಕೇಂದ್ರದ ತೀರ್ಮಾನಕ್ಕೆ ವಿಜಯೇಂದ್ರ ಬದ್ಧ ಅಂತ ಹೇಳಿದ್ದಾರೆ. 30-40 ವರ್ಷಗಳ ಕಾಲ ದುಡಿದ ಕಾರ್ಯಕರ್ತರಿಗೆ ಸಿಕ್ಕಿಲ್ಲ. ಲಿಂಗರಾಜ ಪಾಟೀಲ್ ಕೂಡ ಟಿಕೆಟ್ ಸಿಗದಿದ್ದಕ್ಕೆ ಸುಮ್ಮನಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪಠ್ಯಪುಸ್ತಕಗಳ ಪರಿಷ್ಕರಣೆ ವಿಚಾರ; ಸಿಎಂಗೆ ಪತ್ರ ಬರೆದ ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಹಂಪ ನಾಗರಾಜಯ್ಯ
ಪಠ್ಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ?- ಈಶ್ವರಪ್ಪ:
ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರಿದ್ದಕ್ಕೆ ವಿರೋಧ ವ್ಯಕ್ತವಾಗಿರುವ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ, ದೇಶದ ಸಂಸ್ಕೃತಿ ವಿಚಾರದಲ್ಲಿ ಭಾಷಣದ ಬಗ್ಗೆ ಸೇರಿಸಲಾಗಿದೆ. ಪಠ್ಯದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹೆಸರು ಸೇರಿಸಬೇಕಿತ್ತಾ? ಶಿವನ ಲಿಂಗ ಒಡೆದ ಔರಂಗಜೇಬನ ಹೆಸರು ಸೇರಿಸಬೇಕಿತ್ತಾ? ಪಠ್ಯದಲ್ಲಿ ಅಲೆಗ್ಸಾಂಡರ್ ದಿ ಗ್ರೇಟ್ ಅಂತಾ ಮಕ್ಕಳು ಓದುತ್ತಿದ್ದರು. ಯಾರು ನಮ್ಮ ದೇಶವನ್ನು ಹಾಳು ಮಾಡಿ ಸಂಸ್ಕೃತಿ ಒಡೆದ್ರೋ ಅಂಥವರ ವೈಭವೀಕರಣ ಈ ಮೊದಲು ನಮ್ಮ ಪಠ್ಯದಲ್ಲಿ ಇತ್ತು. ಭಗತ್ ಸಿಂಗ್, ನಾರಾಯಣ್ ಗುರು ಪಠ್ಯ ತೆಗೆದಿದ್ದು ಸುಳ್ಳು. ಹೆಡ್ಗೆವಾರ್ ವಿಚಾರಗಳನ್ನ ಹರಡದಿದ್ರೆ ದೇಶ ತುಂಡಾಗಿ ಹೋಗ್ತಿತ್ತು ಎಂದರು.
1925ರಲ್ಲಿ ಹಿಂದೂ ಸಮಾಜ ಒಗ್ಗೂಡಿಸುವ ಪ್ರಯತ್ನ ಮಾಡಿದ್ರು. ಹಿಂದೂತ್ವ ಇಷ್ಟೂ ಜಾಗೃತವಾಗಿರುವಾಗಲೇ ಉಗ್ರರು ಆಟ ಆಡ್ತಿದ್ದಾರೆ. ವಿಚಾರವಾದಿಗಳು ಅಂತಾ ಹೇಳಿಕೊಳ್ಳುವವರಿಗೆ ಅದೇ ಖುಷಿಯಾಗಿದೆ. ದೇಶ ಹಾಳು ಮಾಡಿರುವವರ ಪಠ್ಯ ಇರಬೇಕೆನ್ನುವ ಆಸೆ ಅವರದ್ದು. ಸಂವಿಧಾನ ಬದ್ಧವಾಗಿ ನಡೆಯುತ್ತಿರುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಸಂಸ್ಕೃತಿಯನ್ನು ಉಳಿಸಬೇಕು ಅಂತಾ ಸರ್ಕಾರ ತೀರ್ಮಾನ ಮಾಡಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: Nayanthara: ಮತ್ತಷ್ಟು ಜೋರಾಯ್ತು ನಯನತಾರಾ ಮದುವೆಯ ವಿಚಾರ; ಎಲ್ಲಕ್ಕೂ ಕಾರಣ ಆ ಒಂದು ಭೇಟಿ!
Published On - 9:01 am, Thu, 26 May 22