AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದಿಂದ ನದಿ ಖಾಲಿ ಖಾಲಿ, ಕೃಷಿ ಜಾನುವಾರುಗಳಿಗೆ ನೀರಿಲ್ಲ, ಆದರೆ ಮರಳು ದಂದೆಕೋರರಿಗೆ ಪುಷ್ಕಳ -ಎಲ್ಲಿ?

ಬರದಿಂದ ನದಿಗಳು ಖಾಲಿಯಾಗಿವೆ ಕೃಷಿ ಜಾನುವಾರುಗಳಿಗೆ ನೀರಿಲ್ಲ ಎಂದು ರೈತವಲಯ ಕಂಗಾಲಾಗಿದೆ. ಜಲಮೂಲ ಖಾಲಿಯಾಗಿ ಪ್ರಾಣಿ ಪಕ್ಷಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಬರದಿಂದ ಜಲಮೂಲ ಖಾಲಿಯಾಗಿರುವುದೇ ಮರಳು ದಂದೆಕೋರರಿಗೆ ಬಂಡವಾಳ ಆಗಿದೆ. ರಾಜಕೀಯ ನಾಯಕರ ಹಿಂಬಾಲಕರು, ಪ್ರಭಾವಿಗಳು ನಿರಾತಂಕವಾಗಿ ಮರಳು ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಇಲ್ಲಿದೆ ಸಮಗ್ರ ವರದಿ

ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​|

Updated on: Mar 04, 2024 | 4:41 PM

Share

ಬರದಿಂದ ನದಿಗಳು ಖಾಲಿಯಾಗಿವೆ ಕೃಷಿ ಜಾನುವಾರುಗಳಿಗೆ ನೀರಿಲ್ಲ ಎಂದು ರೈತವಲಯ ಕಂಗಾಲಾಗಿದೆ. ಜಲಮೂಲ ಖಾಲಿಯಾಗಿ ಪ್ರಾಣಿ ಪಕ್ಷಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಬರದಿಂದ ಜಲಮೂಲ ಖಾಲಿಯಾಗಿರುವುದೇ ಮರಳು ದಂದೆಕೋರರಿಗೆ ಬಂಡವಾಳ ಆಗಿದೆ. ನದಿಯಲ್ಲಿ ಅಲ್ಲಲ್ಲಿ ನಿಂತ ನೀರಲ್ಲೇ ಆಕ್ರಮವಾಗಿ ಮರಳು ದಂದೆ ಎಗ್ಗಿಲ್ಲದೆ ಸಾಗುತ್ತಿದೆ. ಜಿಲ್ಲಾಡಳಿತ ಕಚೇರಿಯಿಂದ ಕೇವಲ 10 ಕಿಮೀ ಅಂತರದಲ್ಲೇ ಇಂತಹದ್ದೊಂದು ಆಕ್ರಮ ಹಾಡಹಗಲೆ ನಡೆಯುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಅಷ್ಟಕ್ಕೂ ಆಕ್ರಮ ಮರಳು ದಂದೆ ನಡೆಯುತ್ತಿರೋದು ಎಲ್ಲಿ ಹೇಗಿದೆ ಅಲ್ಲಿನ ಸ್ಥಿತಿ ಇಲ್ಲಿದೆ ನೋಡಿ. ಮುಂಗಾರು-ಹಿಂಗಾರು ಒಟ್ಟೊಒಟ್ಟಿಗೆ ಕೈಕೊಟ್ಟು ಮಳೆಯಿಲ್ಲ ಬೆಳೆಯಿಲ್ಲ ನೀರಿಲ್ಲದೆ ನದಿಗಳು ಖಾಲಿ ಖಾಲಿಯಾಗಿವೆ. ಆದರೂ ಅಲ್ಲಲ್ಲಿ ಕೆಲ ಕಡೆ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಆದರೆ ಅಂತಹ ನದಿಯಲ್ಲಿ ಆಕ್ರಮ ಮರಳು ದಂದೆಕೋರರು ನದಿಯ ಒಡಲು ಬಗೆದು ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ. ಎಲ್ಲಿ ಇದು ಅಂದರೆ… ಬಾಗಲಕೋಟೆ ಜಿಲ್ಲೆಯ ಬೀಳಿ ತಾಲ್ಲೂಕಿನ ಅನಗವಾಡಿ ಗ್ರಾಮದ ಬಳಿ ಇರುವ ಘಟಪ್ರಭಾ ನದಿ ಪಾತ್ರದಲ್ಲಿ.

ಇದನ್ನೂ ಓದಿ: ರಾಮಗೊಂಡನಹಳ್ಳಿಯಲ್ಲಿ ನೀರಿಗೆ ಶುರುವಾಯ್ತು ಜಲಕ್ಷಾಮ; ಎಗ್ಗಿಲ್ಲದೇ ನಡೀತಿದೆ ಟ್ಯಾಂಕರ್ ಮಾಫಿಯ

ಈ ನದಿ ಒಡಲು ಬಗೆದು ಮರಳು ದಂದೆಕೋರರು ಆಕ್ರಮ ಮರಳು ದಂದೆ ನಡೆಸಿದ್ದಾರೆ. ಇದಕ್ಕೆ ಯಾವುದೆ ಅನುಮತಿಯಿಲ್ಲ, ಆದರೂ ರಾಜಾರೋಷವಾಗಿ ಹಾಡಹಗಲೇ ಮರಳುಗಾರಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಘಟಪ್ರಭಾ ನದಿಯಲ್ಲಿ ಜನರೇಟರ್, ಟ್ರ್ಯಾಕ್ಟರ್ ಇಂಜಿನ್ ಬಳಸಿ ನೀರಲ್ಲಿ ಕಬ್ಬಿಣದ ಸಾಧನೆ ಬಳಸಿ ಮರಳನ್ನು ದಂಡೆ ಮೇಲೆ ತಂದು ಸಂಗ್ರಹಿಸುತ್ತಾರೆ.

ನಂತರ ಜೆಸಿಬಿ ಮೂಲಕ ರಾಶಿ ರಾಶಿ ಗುಡ್ಡೆ ಹಾಕಿದ ಮರಳನ್ನು ಆಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಒಂದಲ್ಲ ಎರಡಲ್ಲ ನದಿಯಲ್ಲಿ ಕಿಮೀ ಉದ್ದಕ್ಕೂ ಹತ್ತಾರು ಪಾಯಿಂಟ್ ಗಳನ್ನು ಮಾಡಿ ಆಕ್ರಮ ಮರಳು ದಂದೆ ನಡೆಸಿದ್ದಾರೆ. ರಾಜಕೀಯ ನಾಯಕರ ಹಿಂಬಾಲಕರು, ಪ್ರಭಾವಿಗಳು ನಿರಾತಂಕವಾಗಿ ಮರಳು ಲೂಟಿ ಮಾಡುತ್ತಿದ್ದಾರೆ.

ಜೆಸಿಬಿ ಟಿಪ್ಪರ್ ಟ್ರ್ಯಾಕ್ಟರ್ ಬಳಸಿ ನಿತ್ಯವೂ ಹಾಡಹಗಲೇ ಮರಳು ಕಳ್ಳತನ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಇದು ಕೇವಲ ಹತ್ತು ಕಿಮೀ ಅಂತರದಲ್ಲಿದೆ. ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯಲ್ಲಿ ಸಂಚರಿಸುವಾಗ ಕಣ್ಣೆದುರಿಗೆ ಈ ಆಕ್ರಮ ಕಂಡರೂ ಈ ಬಗ್ಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಪಾಲು ಇದೆ ಅವರು ಕೂಡ ಕಮೀಷನ್ ಪಡೆದು ಸುಮ್ಮನಿದ್ದಾರೆ. ಕೂಡಲೆ ಇದಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ನದಿ ದಂಡೆಯಲ್ಲೇ ಕುಳಿತು ಪ್ರತಿಭಟನೆ ಮಾಡೋದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಹರಿಯುತ್ತವೆ. ಆದರೆ ಇದೀಗ ಮಳೆಯಿಲ್ಲದೆ ನದಿಯಲ್ಲಿ ನೀರು ಖಾಲಿಯಾಗಿದೆ. ಅಲ್ಲೋ ಇಲ್ಲೋ ತಗ್ಗು ಪ್ರದೇಶದಲ್ಲಿ ಅಲ್ಪಸ್ವಲ್ಪ ನೀರಿದೆ. ಆದರೆ ಆ ನೀರು ಕೃಷಿಗೆ ಜಾನುವಾರುಗಳಿಗೆ ಕುಡಿಯೋಕು ಆಗದಂತಹ ಪರಿಸ್ಥಿತಿ ನಿರ್ಮಿಸಿಬಿಟ್ಟಿದ್ದಾರೆ. ಬೇಕಾಬಿಟ್ಟಿಯಾಗಿ ನದಿಯಲ್ಲಿನ ಮರಳನ್ನು ಲೂಟಿ ಮಾಡುತ್ತಿದ್ದಾರೆ. ನದಿ ದಂಡೆ ಮೇಲೆ ರಾಶಿ ರಾಶಿ ಮರಳನ್ನು ಸಂಗ್ರಹಿಸಿದ್ದಾರೆ. ಇನ್ನು ಹೀಗೆ ಸಂಗ್ರಹಿಸುವ ಟಿಪ್ಪರ್ ಗೆ ತಲಾ 20-30 ಸಾವಿರ ರೂಪಾಯಿಯಷ್ಟಿದೆ.

ಹೀಗೆ ಕೋಟಿ ಕೋಟಿ ವ್ಯವಹಾರ ಆಕ್ರಮ ಮರಳು ದಂದೆ ಮೂಲಕ ನಡೆಯುತ್ತಿದೆ. ಸ್ಥಳದಲ್ಲಿ ಹತ್ತಕ್ಕೂ ಅಧಿಕ ಜೆಸಿಬಿ, 40ಕ್ಕೂ ಅಧಿಕ ಟಿಪ್ಪರ್ ಗಳು ನಿತ್ಯ ಆಕ್ರಮ ಮರಳನ್ನು ಸಾಗಿಸುತ್ತಿವೆ. ನೂರಾರು ಜನ ಕಾರ್ಮಿಕರು ಆಕ್ರಮ ಮರಳುಗಾರಿಕೆಯಲ್ಲಿ ದಂದೆಯಲ್ಲಿ ತೊಡಗಿದ್ದಾರೆ. ತಹಸೀಲ್ದಾರ್​, ಪೊಲೀಸ್ ಇಲಾಖೆ ಅಧಿಕಾರಿಗಳು, ಮುಖ್ಯವಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇಲ್ಲಿ ದಾಳಿ ನಡೆಸಿ ಇದನ್ನು ತಡೆಯಬೇಕು.

ಆದರೆ ಈ ಎಲ್ಲ ಅಧಿಕಾರಿಗಳು ತಿಂಗಳ ಕಮೀಷನ್ ಪಡೆದು ಮರಳು ದಂದೆಗೆ ಅವಕಾಶ ಕೊಟ್ಟಿದ್ದಾರೆ. ಇದಕ್ಕೆ ಹಾಡಹಗಲೇ ನಡೆಯುತ್ತಿರುವ ಈ ದೃಶ್ಯಗಳೇ ಸಾಕ್ಷಿಯಾಗಿವೆ. ಈ ರೀತಿ ಬೇಕಾಬಿಟ್ಟಿ ನದಿಯಲ್ಲಿ ಮರಳುಗಾರಿಕೆ ಮಾಡೋದರಿಂದ ನದಿಯಲ್ಲಿ ತಗ್ಗು ಗುಂಡಿಗಳು ಬಿದ್ದು ಅದು ಜಾನುವಾರುಗಳು ಹಾಗೂ ಜನರ ಪ್ರಾಣಕ್ಕೂ ಅಪಾಯ ತಂದೊಡ್ಡಲಿದೆ. ಇನ್ನು ಈ ಬಗ್ಗೆ ಬಾಗಲಕೋಟೆ ಡಿಸಿ ಅವರ ಗಮನಕ್ಕೆ ತರಲಾಗಿ ಇಲ್ಲ ಇದನ್ನು ನಾವು ಖಂಡಿತ ಸಹಿಸೋದಿಲ್ಲ, ಈ ಬಗ್ಗೆ ನಾನು ತಾಲ್ಲೂಕಾವಾರು ಒಂದೊಂದು ಟೀಮ್ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆಕ್ರಮ ಮರಳುಗಾರಿಕೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಆಕ್ರಮವಾಗಿ ನದಿಯನ್ನು ಬಗೆಯಲು ಅವಕಾಶ ಕೊಡೋದಿಲ್ಲ ಎಂದಿದ್ದಾರೆ. ಇದು ಎಷ್ಟರಮಟ್ಟಿಗೆ ಈಡೇರುತ್ತೋ ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ