AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದ ಯುವತಿ- ಬಾಗಲಕೋಟೆ ಯುವಕನ ಮೂಕ ಪ್ರೀತಿ, ಯುವತಿಯ ಎಳೆದೊಯ್ದ ಸಹೋದರರು: ಪ್ರೇಮಪಕ್ಷಿಗಳ ಮೂಕರೋದನೆ

ಆಕೆ ರಾಜಸ್ಥಾನದವಳು. ಈತ ಬಾಗಲಕೋಟೆ ಮೂಲದವ. ಇಬ್ಬರೂ ಮೂಕರು. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದರು. ಮುಂದೆ ಮೂಕ ಪ್ರೇಮಿಗಳು ಮದುವೆಯೂ ಆದರು. ಆದರೆ ಯುವತಿಯ ಸೋದರರು ಬಂದು ವಾಪಸ್ ಕರೆದುಕೊಂಡುಹೋಗಿದ್ದಾರೆ. ​ಈಗ ಪ್ರೇಮಪಕ್ಷಿಗಳು ಮೂಕರೋದನೆ ಅನುಭವಿಸುತ್ತಿದ್ದಾರೆ.

ರಾಜಸ್ಥಾನದ ಯುವತಿ- ಬಾಗಲಕೋಟೆ ಯುವಕನ ಮೂಕ ಪ್ರೀತಿ, ಯುವತಿಯ ಎಳೆದೊಯ್ದ ಸಹೋದರರು: ಪ್ರೇಮಪಕ್ಷಿಗಳ ಮೂಕರೋದನೆ
ರಾಜಸ್ಥಾನ ಯುವತಿ-ಬಾಗಲಕೋಟೆ ಯುವಕನ ಮೂಕ ಪ್ರೀತಿ, ಯುವತಿಯ ಎಳೆದೊಯ್ದ ಸೋದರರು
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Jan 24, 2024 | 11:04 AM

Share

ಆಕೆ ರಾಜಸ್ಥಾನದವಳು. ಈತ ಬಾಗಲಕೋಟೆ ಮೂಲದವ. ಇಬ್ಬರಿಗೂ ಮಾತುಬರುವುದಿಲ್ಲ. ಆದರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯ, ಲವ್ ಆಗಿ ಇಬ್ಬರು ಮೂಕ ಪ್ರೇಮಿಗಳು ಮದುವೆಯೂ ಆಗಿದ್ದರು. ಆದರೆ ಯುವತಿಯನ್ನು ಸಹೋದರರು ಕರೆದೊಯ್ದಿದ್ದು, ಈಗ ಆ ಎರಡೂ ಪ್ರೇಮಪಕ್ಷಿಗಳು ಮೂಕ ರೋದನೆ ಅನುಭವಿಸುತ್ತಿದ್ದಾರೆ. ಸ್ಟೈಲ್ ಆಗಿ ವಿಭಿನ್ನ ಗೆಟಪ್‌ ನಲ್ಲಿ ಕಲರ್ ಕಲರ್ ಫೋಟೊ. ಅದರಲ್ಲಿ ಯುವಕ ಯುವತಿ ಫುಲ್ ಮಿಂಚಿಂಗ್. ಬೈಕ್‌ನಲ್ಲಿ ಜಾಲಿ ರೈಡಿಂಗ್. ನೋಡಿದರೆ ಯಾರೂ ಕೂಡ ಮೂಕರು ಅನ್ನುವ ಹಾಗಿಲ್ಲ. ಆದರೆ ಇವರು ಇಬ್ಬರೂ ಮೂಕರು. ಸನ್ನೆ ‌ಮೂಲಕವೇ ಕೈ ಮುಗಿದು ತನ್ನ ಮೂಕ‌ ನಿವೇದನೆ. ಕೈಯಲ್ಲಿ ತನ್ನ ಪತ್ನಿಯ ಫೋಟೊ ಹಿಡಿದು ಮೂಕರೋದನೆ. ಗೆಳೆಯನ ಬಗ್ಗೆ ವಿವರಿಸುತ್ತಿರುವ ಮೂಕ ಸ್ನೇಹಿತ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಎಸ್ ಪಿ ಕಚೇರಿ ಆವರಣದಲ್ಲಿ.

ಹೌದು ಪ್ರೀತಿಗೆ ಕಣ್ಣಿಲ್ಲ ಅದಕ್ಕೆ ಭಾಷೆ ಬೇಕಿಲ್ಲ ಗಡಿ ಹಂಗಿಲ್ಲ… ಎಲ್ಲ ನಿಜ. ಅದೇ ಪ್ರಕಾರ ಇವರಿಬ್ಬರು ಮಾತು ಬಾರದಿದ್ದರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯ, ಪ್ರೀತಿ ಆಗಿ ಮದುವೆ ಆಗಿದ್ದವರು. ಇವರ ಹೆಸರು ಸಿದ್ದಾರ್ಥ್ ಕಾಂಬಳೆ ಹಾಗೂ ರೊದಿಯಾ ಕಂವರ್. ಸಿದ್ದಾರ್ಥ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾಗನೂರು ಗ್ರಾಮದವ. ರೊದಿಯಾ ರಾಜಸ್ಥಾನ‌ದ ರಾಜಸಮಂಡ ಜಿಲ್ಲೆ ದಾಸಣಾ ಗ್ರಾಮದವಳು.

ಏಳು ತಿಂಗಳ ಹಿಂದೆ ಇಬ್ಬರು ಇನ್ಸ್ಟಾ ಗ್ರಾಮ್ ಮೂಲಕ ಮೂಕ ಭಾಷೆ ಮೂಲಕವೇ ಪರಿಚಯ ಆಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿತ್ತು. ಕೊನೆಗೆ ರಾಜಸ್ಥಾನಕ್ಕೆ ಹೋಗಿ ಸಿದ್ದಾರ್ಥ ಆಕೆಯನ್ನು ಊರಿಗೆ ಕರೆತಂದು ಮದುವೆಯಾಗಿದ್ದ. ಆದರೆ ಆಕೆಯನ್ನು ಸಹೋದರರು ರಾಜಸ್ಥಾನ ಪೊಲೀಸರ ಜೊತೆ ಬಂದು ಮರಳಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಎಷ್ಟು ಬೇಡಿಕೊಂಡರೂ ಬಿಡದೆ ಕರೆದೊಯ್ದಿದ್ದು, ಇತ್ತ ಸಿದ್ದಾರ್ಥ ನನಗೆ ಆಕೆ ಬೇಕು ಎಂದು‌ ಕೈ ಮುಗಿದು ಕೇಳಿಕೊಳ್ಳುತ್ತಾ ಮೂಕರೋದನೆ ಪಡುತ್ತಿದ್ದಾನೆ.

ಆ ಇಬ್ಬರೂ ಅದಾಗಲೇ ಪ್ರತ್ಯೇಕವಾಗಿ ಮದುವೆಯಾಗಿದ್ದರು ಎಂಬ ಮಾಹಿತಿಯೂ ಇದೆ. ಆದರೆ ಆ ಬಗ್ಗೆ ನಿಖರತೆಯಿಲ್ಲ. ಇಲ್ಲಿ ಸಿದ್ದಾರ್ಥ ಮತ್ತು ರೊದಿಯಾ ಇಬ್ಬರೂ ಇನ್ಸ್ಟಾ ಮೂಲಕ ಪ್ರೀತಿ ಮಾಡಿ, ಅಗಸ್ಟ್​​ ೨೭, ೨೦೨೩ ರಂದು ಜಮಖಂಡಿ ತಾಲ್ಲೂಕಿನ ‌ನಾಗನೂರು ಗ್ರಾಮದ ಸಿದ್ದಾರ್ಥ್ ಮನೆ ಮುಂದೆ ಮದುವೆ ಆಗಿದೆ. ಆದರೆ ಮದುವೆ ನೊಂದಾವಣಿ ಮಾಡಿಸಿಲ್ಲ. ಶಾಸ್ತ್ರೋಕ್ತವಾಗಿ ಮದುವೆಯಾಗಿದೆ.

Also Read: ವೈಟ್​ಫೀಲ್ಡ್​​ನಲ್ಲಿ ನಾಪತ್ತೆಯಾಗಿದ್ದ ಬಾಲಕ ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ

ಇನ್ನೊಂದು ಕಡೆ ರೊದಿಯಾ ಕುಟುಂಬಸ್ಥರು ರಾಜಸ್ಥಾನದಲ್ಲಿ ರೊದಿಯಾ ಕಿಡ್ನಾಪ್ ಆಗಿದ್ದಾಳೆ ಎಂದು ದೂರು ನೀಡಿದ್ದರು. ಇದರಿಂದ ನಾಗನೂರಿಗೆ ಬಂದ ರಾಜಸ್ಥಾನ ‌ಪೊಲೀಸರು ಹಾಗೂ ಆಕೆಯ ಸಹೋದರರು ಸೆಪ್ಟೆಂಬರ್ ೧೬, ೨೦೨೩ ರಂದು ರೊದಿಯಾಳನ್ನು ಕರೆದೊಯ್ದಿದ್ದಾರೆ. ಮದುವೆಯಾಗಿ ೨೦ ದಿನದಲ್ಲಿ ಇಬ್ಬರು ದೂರ ಆಗಿದ್ದಾರೆ.

ರೊದಿಯಾ ವಿಡಿಯೊ ಕಾಲ್ ಮಾಡಿ ನನ್ನ ಕರೆದುಕೊಂಡು ಹೋಗು ಇಲ್ಲದಿದ್ರೆ ಇವರು ನನ್ನ ಸಾಯಿಸ್ತಾರೆ ಎಂದು ಸನ್ನೆ ಮೂಲಕವೇ ಸಿದ್ದಾರ್ಥ ಗೆ ದಿನಾಲು ಹೇಳುತ್ತಿದ್ದಾಳೆ. ಇದರಿಂದ ಸಿದ್ದಾರ್ಥ ಮತ್ತಷ್ಟು ಆತಂಕ್ಕೆ ಈಡಾಗಿದ್ದಾನೆ. ಹೇಗಾದರೂ‌ ಮಾಡಿ‌ ರೊದಿಯಾಳನ್ನು ವಾಪಸ್ ಕರೆ ತನ್ನಿ ಅಂತಿದ್ದಾನೆ. ಇದಕ್ಕಾಗಿ ತಂದೆ ಹಾಗೂ ವಕೀಲ ಎನ್ ಬಿ ಗಸ್ತಿ ಅವರ ಮೂಲಕ ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ಅವರ ಮೊರೆ ಹೋಗಿದ್ದಾನೆ. ಸಮಸ್ಯೆ ಆಲಿಸಿದ ಎಸ್ ಪಿ ಅವರು ಇದಕ್ಕೆ ಕಾನೂನಾತ್ಮಕ ರೀತಿಯಲ್ಲಿ ಏನು ಮಾಡಬಹುದು ಎಂದು ಯೋಚಿಸಿ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಅರಳಿದ ಮೂಕ ಪ್ರೇಮ, ಮದುವೆ ಜೀವನವಾಗಿ ಈಗ ವಿರಹ ವೇದನೆ ಮೂಕರೋದನೆಯಾಗಿ ಬದಲಾಗಿದೆ. ಇಲ್ಲಿ ಇಬ್ಬರೂ ಪ್ರತ್ಯೇಕವಾಗಿ ಮೊದಲೇ ಮದುವೆಯಾದ ಸುದ್ದಿ ‌ಇರುವ ಕಾರಣ ಈ ಮೂಕ‌ಪ್ರೇಮ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೊ ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ