ಒಂದೇ ತಿಂಗಳಲ್ಲಿ ಕುಡಿತಕ್ಕೆ ಗ್ರಾಮದ ಐವರು ಬಲಿ, ಡಂಗುರ ಸಾರಿ ಜಾಗೃತಿ

ಅಬಕಾರಿ ಸಚಿವರ ಜಿಲ್ಲೆಯಲ್ಲೇ ಎಗ್ಗಿಲ್ಲದೆ ಅಕ್ರಮವಾಗಿ ಮದ್ಯ ‌ಮಾರಾಟವಾಗುತ್ತಿದೆ. ಹಳ್ಳಿಯಲ್ಲಿನ ಪಾನ್ ಶಾಪ್ ಸೇರಿದಂತೆ ಕಿರಾಣಿ ಅಂಗಡಿಗಳಲ್ಲೂ ಸಾರಾಯಿ ಸಲೀಸಾಗಿ ಸಿಗುತ್ತಿದೆ. ಕುಡಿತಕ್ಕೆ ದಾಸರಾಗಿ ಒಂದೇ ತಿಂಗಳಲ್ಲಿ ಬರೊಬ್ಬರಿ ಐವರು ಮೃತಪಟ್ಟಿದ್ದಾರೆ. ಇದರಿಂದ‌ ಮಹಿಳೆಯರು ಕಣ್ಣೀರು ಹಾಕುತ್ತಿದ್ದರೇ, ಊರಿನಲ್ಲಿ ಮದ್ಯ ಮಾರಾಟ ಮಾಡಬಾರದೆಂದು ಡಂಗುರ ಸಾರಲಾಗಿದೆ.

ಒಂದೇ ತಿಂಗಳಲ್ಲಿ ಕುಡಿತಕ್ಕೆ ಗ್ರಾಮದ ಐವರು ಬಲಿ, ಡಂಗುರ ಸಾರಿ ಜಾಗೃತಿ
ಡಂಗುರ ಸಾರಿ ಜಾಗೃತಿ
Edited By:

Updated on: Jun 11, 2025 | 7:51 PM

ಬಾಗಲಕೋಟೆ, ಜೂನ್​ 11: ಅಬಕಾರಿ ಸಚಿವ ಆರ್​ ಬಿ ತಿಮ್ಮಾಪುರ (RB Timmapur) ಅವರ ಉಸ್ತುವಾರಿ ಜಿಲ್ಲೆಯಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಎಷ್ಟರಮಟ್ಟಿಗೆ ಅಕ್ರಮವಾಗಿ ಮಾಡಲಾಗುತ್ತಿದೆ ಎಂಬುವುದಕ್ಕೆ ಬಾದಾಮಿ (Badami) ತಾಲೂಕಿನ ಹಲಕುರ್ಕಿ ಗ್ರಾಮ ಸೂಕ್ತ ಉದಾಹರಣೆಯಾಗಿದೆ. ಹಲಕುರ್ಕಿ ಗ್ರಾಮದ ಅಂಗಡಿಗಳಲ್ಲಿ ‌ನಿತ್ಯ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಸುಕಿನ ಜಾವ ಐದು ಗಂಟೆಗೆ ಹೋಗಿ ಮದ್ಯ ಕೇಳಿದರೂ ಕೊಡುತ್ತಾರೆ. ಇದರಿಂದ ಹದಿಹರೆಯದ ಯುವಕರು ಕುಡಿತಕ್ಕೆ ದಾಸರಾಗಿದ್ದಾರೆ.

ದುರಂತ ಅಂದರೆ ಮದ್ಯ ಸೇವನೆಯಿಂದ ಒಂದೇ ತಿಂಗಳಲ್ಲಿ ಐವರು ಮೃತಪಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಒಳಗಾಗಿ, ಆತ್ಮಹತ್ಯೆ ಮತ್ತು ಕುಡಿತದಿಂದ ಆರೋಗ್ಯ ಹದಗೆಟ್ಟು ಐವರು ಜೀವ ಕಳೆದುಕೊಂಡಿದ್ದಾರೆ. ಐವರ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಹೇಗಾದರೂ ಮಾಡಿ ಅಕ್ರಮ ಮದ್ಯ ಮಾರಾಟ ಬಂದ್ ಮಾಡಿಸಿ ಎಂದು ಮಹಿಳೆಯರು ಟಿವಿ9 ಎದುರು ಕೈ ಮುಗಿದು, ಕಣ್ಣೀರು ಹಾಕಿದ್ದಾರೆ.

ಇದೇ ಗ್ರಾಮದ ವೃದ್ಧೆ ನೀಲವ್ವ ಹಡಪದ ಎಂಬುವರ ಪತಿ ಹಾಗೂ ಮಗ ಇಬ್ಬರೂ ಕುಡಿತದ ದಾಸರಾಗಿ ಅನಾರೋಗ್ಯ ತುತ್ತಾಗಿ ಮೃತಪಟ್ಟಿದ್ದಾರೆ. ಇನ್ನೋರ್ವ ವೃದ್ಧೆಯ ಕಥೆಯೂ ಇದೇ ರೀತಿ ಇದೆ. ವೃದ್ಧೆಯ ಅಳಿಯ ಕುಡಿದು ಕುಡಿದು ಮೃತಪಟ್ಟಿದ್ದು, ಈತನ ಮಗ ಹದಿನೆಂಟು ವರ್ಷದವನಾಗಿದ್ದು ಆತನೂ ಕೂಡ ಕುಡಿತಕ್ಕೆ ದಾಸನಾಗಿದ್ದಾನೆ.

ಇದನ್ನೂ ಓದಿ
ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮುಖ, ಮೂತಿ ನೋಡದೆ ಶಿಕ್ಷಕನಿಗೆ ಬಿಯರ್ ಬಾಟ್ಲಿಯಿಂದ ಹೊಡೆದ ಯುವಕ

ಮಕ್ಕಳು, ಗಂಡಂದಿರು ನಿತ್ಯ ಕುಡಿದು ಬಂದು ಮನೆಯಲ್ಲಿ ‌ಜಗಳವಾಡುತ್ತಿದ್ದು, ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಹೆಣ್ಮಕ್ಕಳು ದುಡಿದು ತಂದ ಹಣ ಕಸಿದುಕೊಂಡು ಎಣ್ಣೆ ಹೊಡೆಯೋಕೆ ಹೋಗುತ್ತಾರೆ. ಊರಲ್ಲಿ ಎಣ್ಣೆ ಮಾರಾಟ ಕಡಿಮೆಯಾದರೆ ಊರ ಹೊರಗೆ ಎಮ್​ಎಸ್​ಐಎಲ್ ಇದ್ದು, ಅದು ಕೂಡ ಕುಡಿತ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣವಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ.

ಇದರಿಂದ ಊರ ಜನರು ಗ್ರಾಮ ಪಂಚಾಯಿತಿ ಮೂಲಕ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಿದರೆ ಪೊಲೀಸರ ವಶಕ್ಕೆ ಕೊಡಲಾಗುವುದು. ಯಾರು ಸೆರೆ ಮಾರಾಟ ಮಾಡುವಂತಿಲ್ಲ ಎಂದು ಡಂಗುರ ಸಾರಿಸಿದ್ದಾರೆ. ಅಬಕಾರಿ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದು, ಕೂಡಲೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಊರ ಹೊರಗಿನ ಎಮ್​ಎಸ್​ಐಎಲ್ ಬಂದ್ ಮಾಡಿಸಬೇಕು ಇಲ್ಲದಿದ್ದರೆ ಶೀಘ್ರದಲ್ಲೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಲ್ಯಾಣಮಂಟಪದಲ್ಲೇ ವರನಿಗೆ ಹೃದಯಾಘಾತ, ತಾಳಿ ಕಟ್ಟಿಸಿಕೊಂಡ 15 ನಿಮಿಷದಲ್ಲೇ ವಿಧವೆಯಾದ ನವವಧು

ಒಟ್ಟಿನಲ್ಲಿ ಊರಲ್ಲಿ ಒಂದು ಕಡೆ ಅಕ್ರಮ ಸಾರಾಯಿ ಮಾರಾಟ, ಇನ್ನೊಂದು ಕಡೆ ಎಮ್​ಎಸ್​ಐಎಲ್ ಎರಡು ಕಡೆ ಕಂಠಪೂರ್ತಿ‌ ಕುಡಿದು ಜನರು ಜೀವ ಬಿಡುತ್ತಿದ್ದಾರೆ. ಇದಕ್ಕೆ ಅಬಕಾರಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಎಲ್ಲರ ಆಶಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ