ಬಾಗಲಕೋಟೆ, ಮೇ.28: ಮಹಿಳೆ ಮನೆ ಬಾಗಿಲು ತೆರೆಯದ ಹಿನ್ನೆಲೆ ರೊಚ್ಚಿಗೆದ್ದ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ (Acid Attack) ಘಟನೆ ಬಾಗಲಕೋಟೆ(Bagalakote) ತಾಲೂಕಿನ ಗದ್ದನಕೇರಿ ಕ್ರಾಸ್ನಲ್ಲಿ ನಡೆದಿದೆ. ಮೌನೇಶ್ ಪತ್ತಾರ ಆ್ಯಸಿಡ್ ಎರಚಿದ ವ್ಯಕ್ತಿ. ಈ ವೇಳೆ ಲಕ್ಷ್ಮಿ ಬಡಿಗೇರ ಎಂಬ ಮಹಿಳೆಯ ಎಡಗಣ್ಣು ಮತ್ತು ಮುಖದ ಮೇಲೆ ಗಾಯವಾಗಿದೆ. ಜೊತೆಗೆ ಆಕೆಯ ಎಂಟು ವರ್ಷದ ಮಗಳ ಮುಖಕ್ಕೂ ಅಲ್ಪ ಪ್ರಮಾಣದಲ್ಲಿ ಆ್ಯಸಿಡ್ ತಗುಲಿದ್ದು, ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೌನೇಶ್ ಪತ್ತಾರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಅಪಾಯದಿಂದ ಮಹಿಳೆ ಪಾರಾಗಿದ್ದಾರೆ. ಇಬ್ಬರು ವಿಜಯಪುರ ನಗರದ ಮೂರನಕೇರಿ ಮೂಲದವರಾಗಿದ್ದು, ಮೌನೇಶ್ ಮೂರ್ತಿ ತಯಾರಿಕೆ ಕೆಲಸ ಮಾಡುತ್ತಿದ್ದ. ಇಬ್ಬರು ಪ್ರತ್ಯೇಕ ಬೇರೆ ಬೇರೆಯವರನ್ನು ಮದುವೆಯಾಗಿದ್ದರೂ ಅನಧಿಕೃತವಾಗಿ ಒಂದುವರೆ ತಿಂಗಳಿಂದ ಗದ್ದನಕೇರಿ ಕ್ರಾಸ್ನಲ್ಲಿ ಒಂದೇ ಮನೆಯಲ್ಲಿ ಲೀವಿಂಗ್ ಟುಗೆದರ್ ರೀತಿ ವಾಸವಿದ್ದರು.
ಇದನ್ನೂ ಓದಿ:Acid Attack: ಪ್ರೀತಿಸಿ ಮೋಸ ಮಾಡಿದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ!
ಲಕ್ಷ್ಮಿ ಬಡಿಗೇರ ಮೇಲೆ ಪದೆ ಪದೆ ಸಂಶಯಪಡುತ್ತಿದ್ದ ಮೌನೇಶ್, ಇದರಿಂದ ಮೇಲಿಂದ ಮೇಲೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಮೌನೇಶ್ ಮನೆ ಬಿಟ್ಟು ಹೋಗಿದ್ದ. ಈ ಹಿನ್ನಲೆ ಮಹಿಳೆ ಆತನ ನಂಬರ್ ಬ್ಲಾಕ್ ಮಾಡಿದ್ದಳು. ನಿನ್ನೆ(ಮೇ.27) ರಾತ್ರಿ ಮನೆಗೆ ವಾಪಸ್ ಬಂದಿದ್ದ ಮೌನೇಶ್ಗೆ ಲಕ್ಷ್ಮಿ ಬಾಗಿಲು ತೆರೆದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮೌನೇಶ್ ಕಿಟಕಿ ತೆಗೆದು ಆ್ಯಸಿಡ್ ದಾಳಿ ನಡೆಸಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 pm, Tue, 28 May 24