ಒಂದುವರೆ ತಿಂಗಳ ಮಗುವಿಗೆ ಲಿವರ್ ಸಮಸ್ಯೆ; ತನ್ನ ಲೀವರ್ ಕೊಟ್ಟು ಕಾಪಾಡಿದ ತಂದೆ
ಅವರು ಬಡದಂಪತಿಗಳು. ದಿನ ಬೆಳಗಾದರೆ ಪತಿ ಹಾಲು ಮಾರಿ ಜೀವನ ಮಾಡಬೇಕು.ಇವರಿಗೆ ಎರಡನೇ ಮಗುವಾಗಿ ಹೆಣ್ಣು ಮಗು ಹುಟ್ಟಿದಾಗ ತುಂಬಾ ಸಂಭ್ರಮ ಪಟ್ಟಿದ್ದರು. ಆದರೆ, ಒಂದುವರೆ ತಿಂಗಳಲ್ಲೇ ಲಿವರ್ ಸಮಸ್ಯೆ ಕಾಣಿಸಿಕೊಂಡು ಬರ ಸಿಡಿಲು ಬಡಿದ ಅನುಭವ ಆಗಿತ್ತು. ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಲಿವರ್ ಶಸ್ತ್ರಚಿಕಿತ್ಸೆ ಯಶಸ್ಸು ಕಂಡಿದ್ದು, ಮಗುವಿನ ಮುಖದಲ್ಲಿ ಕಿಲಕಿಲ ನಗು ಮೂಡಿದೆ.
ಬಾಗಲಕೋಟೆ, ಮೇ.16: ಜಿಲ್ಲೆಯ ಹುನಗುಂದ(Hunagunda) ಪಟ್ಟಣದವರಾದ ಮಾಂತೇಶ್ ಮೇಲಿನಮನಿ ಹಾಗೂ ಕಾವೇರಿ ದಂಪತಿಗಳಿಗೆ ಪ್ರೇಕ್ಷಾ ಎಂಬ ಮುದ್ದಾದ ಮಗುವೊಂದು ಜನಿಸಿತ್ತು. ಆದರೆ, ಈ ಮಗುವಿಗೆ ಕೇವಲ ಒಂದುವರೆ ತಿಂಗಳಲ್ಲೇ ಜಾಂಡಿಸ್ ಕಾಣಿಸಿಕೊಂಡು ಚಿಕಿತ್ಸೆಗೆ ಹೋದಾಗ ಪಿತ್ತಜನಕಾಂಗದ ಸಮಸ್ಯೆ (Liver Problem) ಇರುವುದು ಕಂಡುಬಂದಿದೆ. ಇದನ್ನು ಕೇಳಿದ ಬಡದಂಪತಿಗೆ ಬರಸಿಡಿಲು ಬಡಿದಂತಾಗಿತ್ತು. ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ಮಗುವನ್ನು ಹೇಗೆ ಬದುಕಿಸಿಕೊಳ್ಳೋದು ಎಂಬ ಚಿಂತೆ ಕಾಡತೊಡಗಿತ್ತು. ಬಳಿಕ ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಾರಾಯಣ ಹೃದಯಾಲಯ(Narayana Hrudayalaya) ಕ್ಕೆ ಭೇಟಿ ನೀಡಿದ್ದರು. ನಾರಾಯಣ ಹೃದಯಾಲಯದ ಸೀನಿಯರ್ ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಕನ್ಸಲ್‌ಟಂಟ್ ಡಾ.ರಾಘವೇಂದ್ರ ನೇತೃತ್ವದಲ್ಲಿ ತಪಾಸಣೆ ಶುರುವಾಯಿತು. ನಿರಂತರ ತಪಾಸಣೆ ಮಾಡಿದ ವೈದ್ಯರು, ತಂದೆ ಮಾಂತೇಶ್ ಅವರ ಲಿವರ್ ಅನ್ನು ಮಗುವಿಗೆ ಟ್ರಾನ್ಸ್ ಪ್ಲ್ಯಾಂಟ್ ಮಾಡಿ ಮಗುವಿನ ಜೀವ ಕಾಪಾಡಿದ್ದಾರೆ.
ಚಿಕಿತ್ಸೆಗೆ ಸರಕಾರಿ ಸ್ಕೀಮ್ಗಳ ಆಸರೆ
ಮಾಂತೇಶ್ ಹಾಗೂ ಕಾವೇರಿ ಇವರಿಗೆ ಮೊದಲ ಮಗು ಗಂಡು ಮಗು ಇದ್ದು, ಸಾಮಾನ್ಯ ಮಕ್ಕಳಂತೆ ಇದೆ. ಎರಡನೇಯದು ಹೆಣ್ಣು ಮಗುವಾದಾಗ ಇವರು ತುಂಬಾನೆ ಸಂಭ್ರಮಪಟ್ಟಿದ್ದರು. ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂದು ಸಂತಸಗೊಂಡಿದ್ದರು. ಆದರೆ, ಒಂದುವರೆ ತಿಂಗಳಲ್ಲಿ ಮಗಳಲ್ಲಿನ ಲಿವರ್ ಸಮಸ್ಯೆ ಆಕಾಶವೇ ಮೈ ಮೇಲೆ ಕಳಚಿ ಬಿದ್ದಂತಾಗಿತ್ತು. ಮಾಂತೇಶ್ಗೆ ಬೆಳಿಗ್ಗೆ ಹಾಲು ಮಾರಿದ ನಂತರ ಶಾಲೆಯಲ್ಲಿ ಡಿ ದರ್ಜೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆಪರೇಷನ್ಗೆ ಕನಿಷ್ಟ ಅಂದರೂ 20 ಲಕ್ಷ ಹಣ ಬೇಕು. ಈ ವೇಳೆ ಬಿಪಿಎಲ್ ಕಾರ್ಡ್ ಹಾಗೂ ಆಯುಷ್ಮಾನ್ ಕಾರ್ಡ್ ನ ಸರಕಾರಿ ಸ್ಕೀಮ್ ಗಳು ಇವರಿಗೆ ಆಸರೆಯಾಗಿವೆ.
ಇದನ್ನೂ ಓದಿ:Liver Disease: ಲಿವರ್ ಸಮಸ್ಯೆಯ 5 ಆರಂಭಿಕ ಲಕ್ಷಣಗಳಿವು
ಇನ್ನು ವಿವಿಧ ಎನ್ ಜಿ ಒ ಗಳ ಆಸರೆ,ನಾರಾಯಸ ಹೃದಯಾಲಯದ ವೈದ್ಯರ ಸಹಕಾರದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಇನ್ನು ಪ್ರತಿ 20 ರಿಂದ 25 ಸಾವಿರ ಮಗುವಿನಲ್ಲಿ ಒಬ್ಬರಿಗೆ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ವೈದ್ಯರಿಗೆ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಆದರೆ, ವೈದ್ಯರು ಕೊನೆಗೂ ಚಲಬಿಡದೆ ಮಗುವನ ಜೀವ ಉಳಿಸಿದ್ದಾರೆ.ಇದರಿಂದ ಮಗುವಿನ ತಂದೆ ತಾಯಿ ನಾರಾಯಾಣ ಹೃದಯಾಲಯ ವೈದ್ಯರು ದೇವರು ಬಂದ ಹಾಗೆ ಬಂದು ಮಗಳನ್ನು ಕಾಪಾಡಿದರು ಎಂದು ದನ್ಯವಾದ ಹೇಳುತ್ತಲೇ ಮಗಳ ಮೊದಲಿನ ಸ್ಥಿತಿ ನೆನೆದು ಭಾವುಕಾದರು. ಒಟ್ಟಿನಲ್ಲಿ ಸರಕಾರಿ ಸ್ಕೀಮ್, ಎನ್ ಜಿ ಒಗಳ ಸಹಾಯಹಸ್ತ, ವೈದ್ಯರ ಒಳ್ಳೆಯ ರಿಸ್ಪಾನ್ಸ್ ಮೇರೆಗೆ ಬಡ ಮಗು ಬದುಕಿದ್ದು, ತಂದೆ-ತಾಯಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:29 pm, Thu, 16 May 24