ಕೋಲಾರ ಕ್ಷೇತ್ರ ಸೇಫ್ ಅಲ್ಲ ಎನ್ನುವ ವರದಿ ಬೆನ್ನಲ್ಲೇ ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಬಾದಾಮಿ ಪ್ರವಾಸ
ಬಾಗಲಕೋಟೆ: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಈ ಹಿನ್ನಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ (ಮಾ.24) ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಕೋಲಾರ ಕ್ಷೇತ್ರ ಸೇಫ್ ಅಲ್ಲ ಎನ್ನುವ ವರದಿ ಬೆನ್ನಲ್ಲೇ ಸಿದ್ದರಾಮಯ್ಯನವರ ಬಾದಾಮಿ ಪ್ರವಾಸ ಕುತೂಹಲ ಮೂಡಿಸಿದೆ.
ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಉಭಯ ಪಕ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಮತಬೇಟೆ ಜೋರಾಗಿದೆ. ಈ ಹಿನ್ನಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ನವರು ನಾಳೆ (ಮಾ.24) ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಬಾದಾಮಿಯಿಂದಲೇ ಸ್ಪರ್ಧೆ ಮಾಡಿ ಎಂದು ಕಾರ್ಯಕರ್ತರು ಹೇಳಿದ್ದು, ಈ ಕಾರ್ಯಕ್ರಮದ ನೆಪದಲ್ಲಿ ನಾಳೆ ಸಿದ್ದರಾಮಯ್ಯ ಆಪ್ತರು ಬಾದಾಮಿಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಮೂಲಕ ಸಿದ್ದರಾಮಯ್ಯಯವರಿಗೆ ಬಾದಾಮಿ ಸೇಫ್ ಎಂದು ತೋರಿಸಲು ಹೊರಟಿದ್ದಾರೆ. ಇದರ ಜೊತೆಗೆ ಬಾರೀ ಅಂತರದಿಂದ ಗೆಲ್ಲಿಸುವ ಭರವಸೆಯಲ್ಲಿದ್ದಾರೆ.
ನಾಳೆ ಸ್ಪರ್ಧೆಯ ಗುಟ್ಟು ಬಿಟ್ಟು ಕೊಡಲಿದ್ದಾರಾ ಸಿದ್ದರಾಮಯ್ಯ?
ಸಿದ್ದರಾಮಯ್ಯ ಸ್ಪರ್ಧೆಯ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಕೋಲಾರದಲ್ಲಿಯೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಕೋಲಾರ ಕ್ಷೇತ್ರ ಸೇಫ್ ಅಲ್ಲ ಎಂದ ಹೈಕಮಾಂಡ್ ಹೇಳಿಕೆ ಬೆನ್ನಲ್ಲೆ ಬಾದಾಮಿ ಕಡೆ ಸಿದ್ದರಾಮಯ್ಯ ಮುಖ ಮಾಡಿದ್ರಾ ಅಥವಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ನಿಶ್ಚಯಿಸಿದ್ದಾರಾ. ಈ ಎಲ್ಲಾ ಪ್ರಶ್ನೆಗಳಿಗೆ ನಾಳೆ ಸ್ಪರ್ಧೆಯ ಗುಟ್ಟು ಬಿಟ್ಟುಕೊಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ:ವಿವಿಧ ಭಾಗ್ಯಗಳನ್ನು ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯವೇ ಇಲ್ಲ; ಪ್ರತಾಪ್ ಸಿಂಹ
ನಾಳೆ ಬಾದಾಮಿಯಲ್ಲಿ ಭರ್ಜರಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ವಿವರ ಹೀಗಿದೆ
ಇನ್ನು ನಾಳೆ ಬೆಳಿಗ್ಗೆ 11.30ಕ್ಕೆ ಸಿದ್ದರಾಮಯ್ಯ ಬಾದಾಮಿಗೆ ಆಗಮಿಸಲಿದ್ದಾರೆ. ಸುಮಾರು 500 ಕೋಟಿ ರೂಪಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಅದಕ್ಕಾಗಿ ಎಪಿಎಂಸಿ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಈ ವೇಳೆ ಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಇನ್ನು ಮಧ್ಯಾಹ್ನ 12 ಗಂಟೆಗೆ ಕೆರೂರು ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬಳಿಕ 12.30ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರಾಮದುರ್ಗ ವೃತ್ತದಿಂದ ಎಪಿಎಂಸಿವರೆಗೆ ರೋಡ್ ಶೋ ಮಾಡಲಿದ್ದಾರೆ. ರೋಡ್ ಶೋ ವೇಳೆ ಸುಮಾರು 30 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Thu, 23 March 23