ಶಿಕ್ಷಕರ ಆಕ್ರಮ ನೇಮಕಾತಿ ಪ್ರಕರಣ: ಬಾಗಲಕೋಟೆ ಡಿಡಿಪಿಐ ಶ್ರೀಶೈಲ್ ಬಿರಾದಾರಗೆ ಸಿಐಡಿ ವಿಚಾರಣೆ
ಸೆಪ್ಟೆಂಬರ್ 12ರಂದು ಡಿಡಿಪಿಐ ಶ್ರೀಶೈಲ ಬಿರಾದಾರ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಿರುವ ವಿಷಯ ಇದೀಗ ಬಯಲಾಗಿದೆ. ಎರಡು ದಿನಗಳ ಕಾಲ ಬೆಂಗಳೂರು ಸಿಐಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಬಾಗಲಕೋಟೆ: ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮೀಷನ್ ವಿಚಾರ ಸೇರಿದಂತೆ ವಿವಿಧ ಭ್ರಷ್ಟಾಚಾರ ಆರೋಪ ಇಟ್ಟುಕೊಂಡು ಮುಗಿಬಿದ್ದ ಕಾಂಗ್ರೆಸ್ ಗೆ ಎದುರೇಟು ನೀಡಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೇ ವಿಚಾರಕ್ಕಾಗಿ ಶಿಕ್ಷಕರ ನೇಮಕಾತಿ ಹಗರಣವನ್ನು ಬಿಜೆಪಿ ಕೆದಕುತ್ತಿದೆ. ಇದೆ ಬೆನ್ನಲ್ಲೇ ಶಿಕ್ಷಕರ ನೇಮಕಾತಿ ಆಕ್ರಮದಲ್ಲಿ ಬಾಗಲಕೋಟೆ ಡಿಡಿಪಿಐ ಶ್ರೀಶೈಲ್ ಬಿರಾದಾರ ಹೆಸರು ಕೇಳಿ ಬಂದಿದೆ. ಬೀದರ್ ನಲ್ಲಿ ಡಿಡಿಪಿಐ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಶಿಕ್ಷಕರ ಆಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಸಿಐಡಿ ತಂಡ ಬೆಂಗಳೂರಿನಿಂದ ಬಂದು ಸೆಪ್ಟೆಂಬರ್ 12ರಂದು ಡಿಡಿಪಿಐ ಶ್ರೀಶೈಲ ಬಿರಾದಾರ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಿರುವ ವಿಷಯ ಇದೀಗ ಬಯಲಾಗಿದೆ. ಎರಡು ದಿನಗಳ ಕಾಲ ಬೆಂಗಳೂರು ಸಿಐಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಡಿಡಿಪಿಐ ಶ್ರೀಶೈಲ್ ಬಿರಾದಾರ ಸೇರಿದಂತೆ ಐವರ ವಿರುದ್ಧ ಎಫ್ಐಆರ್
ಶಿಕ್ಷಕರ ಆಕ್ರಮ ನೇಮಕಾತಿ ವಿಚಾರವಾಗಿ ಅಗಸ್ಟ್ 16, 2022ರಂದು ಶ್ರೀಶೈಲ್ ಬಿರಾದಾರ ಸೇರಿದಂತೆ ಐವರ ವಿರುದ್ಧ ಬೆಂಗಳೂರು ವಿಧಾನಸೌಧ ಠಾಣೆಯಲ್ಲಿ ಎಫ್ ಐಆರ್ ಕೂಡ ಆಗಿದೆ.
- ತುಳಸಿರಾಮ ದೊಡ್ಡೆ,
- ಅಬ್ದುಲ್ ಗಣಿ,
- ಪ್ರಕಾಶ್ ಟಾಳೆ,
- ಇನಾಯತುರ್ ರೆಹಮಾನ್ ಸಿಂದೆ.
- ಶ್ರೀಶೈಲ ಬಿರಾದಾರ ಐದನೇ ಆರೋಪಿಯಾಗಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಎಂಬುವರ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. 2006-07ನೇ ಸಾಲಿನಿಂದ ಬೀದರ್ ಜಿಲ್ಲೆಯಲ್ಲಿ ಐದು ಜನ ಶಿಕ್ಷಕರ ಆಕ್ರಮ ನೇಮಕಾತಿ ಹಿನ್ನೆಲೆ ದೂರು ದಾಖಲಾಗಿದೆ. ಬಸಪ್ಪ, ನಸೀಮಾಬೇಗಮ್, ಮಹ್ಮದ್ ಅಸ್ಲಾಮ್, ಉಮಾದೇವಿ ಮನೋಹರರಾವ್, ಓಂಪ್ರಕಾಶ್ ಶಂಕ್ರಯ್ಯ ಎಂಬ ಶಿಕ್ಷಕರನ್ನು ಆಕ್ರಮ ನೇಮಕಾತಿ ಮಾಡಿಕೊಂಡಿದ್ದಾರೆ. ನಕಲಿ ದಾಖಲಾತಿ ಸೃಷ್ಟಿಸಿ ನಿಯಮಬಾಹೀರ ಕ್ರಮದಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ.
ಎಫ್ ಐ ಆರ್ ಆದ ಐವರಲ್ಲಿ ಮೊದಲಿಗರಾದ ತುಳಸಿರಾಮ್ ಹಿಂದೆ ಬೀದರ್ ಜಿಲ್ಲೆ ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಕರಾಗಿದ್ದರು. ಸದ್ಯ ಡಿವೈಪಿಸಿ ಎಸ್ ಎಸ್ ಎ(ಡೆಪ್ಯುಟಿ ಪ್ರೊಜೆಕ್ಟ್ ಕೊ ಆರ್ಡಿನೇಟರ್ ಸರ್ವಶಿಕ್ಷಣ ಅಭಿಯಾನ) ಬೀದರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಬ್ದುಲ್ ಗಣಿ ಪ್ರಕರಣ ನಡೆದಾಗ ಬೀದರ್ ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಕರಾಗಿದ್ದರು. ಸದ್ಯ ಬೀದರ್ ನ ಅಮಾನತ್ತಿನಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರಾಗಿದ್ದಾರೆ. ಪ್ರಕಾಶ್ ಟಾಳೆ ಬೀದರ್ ಡಿಡಿಪಿಐ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದವರು. ಪ್ರಸ್ತುತ ಬೀದರ್ ಬಿಇಒ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿದ್ದಾರೆ.
ಇನಾಯತುರ್ ರೆಹಮಾನ್ ಪ್ರಕರಣ ನಡೆದ ವೇಳೆ ಬೀದರ್ ಪ್ರಭಾರಿ ಡಿಡಿಪಿಐ ಆಗಿದ್ದರು. ಪ್ರಸ್ತುತ ಬೀದರ್ ನ ಶಿಕ್ಷಣಾಧಿಕಾರಿಗಳು,ಅಕ್ಷರ ದಾಸೋಹ ಯೋಜನೆ ಅಧಿಕಾರಿಗಳಾಗಿದ್ದಾರೆ. ಶ್ರೀಶೈಲ್ ಬಿರಾದಾರ ಹಿಂದೆ ಬೀದರ್ ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಕರಾಗಿದ್ದರು. ಪ್ರಸ್ತುತ ಬಾಗಲಕೋಟೆ ಡಿಡಿಪಿಐ ಆಗಿದ್ದಾರೆ. ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತಾಡಿದ ಡಿಡಿಪಿಐ ಶ್ರೀಶೈಲ ಬಿರಾದಾರ ಮಾತ್ರ ಸಿಐಡಿ ವಿಚಾರಣೆ ಬಗ್ಗೆ ಬಾಯಿ ಬಿಡುತ್ತಿಲ್ಲ. ಸಿಐಡಿ ನನ್ನನ್ನು ವಿಚಾರಣೆ ನಡೆಸಿಲ್ಲ,ವಿಧಾನಸೌಧಠಾಣೆಯಲ್ಲಿ ಪ್ರಕರಣ ಬಗ್ಗೆ ಕೇಳಿದರೂ ಅದರಲ್ಲಿ ನನ್ನ ಪಾತ್ರವೇನೂ ಇಲ್ಲ ಈ ಬಗ್ಗೆ ನಾನು ಏನು ಮಾತಾಡೋದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಆಕ್ರಮವಾಗಿ ಆಯ್ಕೆದಾದ ಐವರು ಶಿಕ್ಷಕರನ್ನು ಈ ಹಿಂದೆಯೇ ವಜಾ ಮಾಡಲಾಗಿದೆ.
ಒಟ್ಟಾರೆ ಆಕ್ರಮ ಶಿಕ್ಷಕರ ನೇಮಕಾತಿ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು ಬೀದರ್ ನಲ್ಲಿದ್ದಾಗ ಆದ ಆಕ್ರಮದಲ್ಲಿ ಬಾಗಲಕೋಟೆ ಡಿಡಿಪಿಐ ಪಾತ್ರ ಎಷ್ಟರಮಟ್ಟಿಗೆ ಇದೆ ಅನ್ನೋದು ಸಂಪೂರ್ಣ ತನಿಖೆ ನಂತರ ತಿಳಿಯಬೇಕಿದೆ.
ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ
Published On - 3:24 pm, Thu, 15 September 22