ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ, ಮಹಿಳೆ ಸಾವು ಕೇಸ್​: ಏಳು ಜನರ ವಿರುದ್ಧ ಎಫ್​​ಐಆರ್ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: May 29, 2024 | 7:04 PM

ಬಾಗಲಕೋಟೆ ‌ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಭ್ರೂಣಹತ್ಯೆ ಮತ್ತು ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ದ ಎಫ್​ಐಆರ್​ ದಾಖಲಾಗಿದೆ. ಪ್ರಕರಣದ ಆರನೇ ಆರೋಪಿ ಕವಿತಾ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಕೆಲಸ‌ ಮಾಡುತ್ತಿದ್ದರು. ಸುಮಾರು ವರ್ಷದಿಂದ ಗರ್ಭಪಾತ ದಂಧೆ ನಡೆಸುತ್ತಾ ಬಂದಿದ್ದು, ಇದೀಗ ಒಂದು ಮಹಿಳೆ ಸಾವಿಗೆ ಕಾರಣವಾಗಿದ್ದಾರೆ.

ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ, ಮಹಿಳೆ ಸಾವು ಕೇಸ್​: ಏಳು ಜನರ ವಿರುದ್ಧ ಎಫ್​​ಐಆರ್ ದಾಖಲು
ಮಹಾಲಿಂಗಪುರದಲ್ಲಿ ಭ್ರೂಣಹತ್ಯೆ, ಮಹಿಳೆ ಸಾವು ಕೇಸ್​: ಏಳು ಜನರ ವಿರುದ್ದ ಎಫ್​​ಐಆರ್ ದಾಖಲು
Follow us on

ಬಾಗಲಕೋಟೆ, ಮೇ 29: ಜಿಲ್ಲೆಯಲ್ಲಿ ಭ್ರೂಣಹತ್ಯೆ ಮತ್ತು ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ (Mahalingpur) ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ದ ಎಫ್​ಐಆರ್​ (FIR) ದಾಖಲಾಗಿದೆ. ಸೋನಾಲಿ ಕದಮ್ ಗರ್ಭಪಾತದಿಂದ ಸಾವಿಗೀಡಾದ ಮಹಿಳೆ. ಮಹಾರಾಷ್ಟ್ರದ ದೂದಗಾವ್​ನ ಸಂಜಯ ಗೌಳಿ, ಸಂಗೀತಾ ಸಂಜಯ ಗೌಳಿ, ವಿಜಯ ಸಂಜಯ ಗೌಳಿ, ಮಿರಜ್ ತಾಲೂಕಿನ ಕುಪ್ಪವಾಡ ಗ್ರಾಮದ ಡಾ.ಮಾರುತಿ ಬಾಬಸೋ ಖಿರಾತ್, ಸಾಂಗ್ಲಿ ತಾಲೂಕಿನ ಅಥಣಿ ನಗರದ ಡಾ.ಕೊತ್ವಾಲೆ, ಮಹಾಲಿಂಗಪುರದ ಕವಿತಾ ಚನ್ನಪ್ಪ ಬದನ್ನವರ ಮತ್ತು ಮಿರಜ್ ತಾಲೂಕಿನ ಜೈಸಿಂಗಪುರದ ಒಬ್ಬ ವೈದ್ಯ ಸೇರಿ ಏಳು ಜನರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ಪ್ರಕರಣದಲ್ಲಿ ಆರನೇ ಆರೋಪಿ ಆಗಿರುವ ಕವಿತಾ ಬದನ್ನವರ ಖಾಸಗಿ ಆಸ್ಪತ್ರೆಯಲ್ಲಿ ಕೆಲ ವರ್ಷಗಳ ಕಾಲ ಆಯಾ ಕೆಲಸ‌ ಮಾಡುತ್ತಿದ್ದರು. ಕವಿತಾ ಬದನ್ನವರ ಆಕ್ರಮವಾಗಿ ಗರ್ಭಪಾತ ಮಾಡಿ ಸೋನಾಲಿ ಎಂಬ 33 ವರ್ಷದ‌ ಮಹಿಳೆಯ ಸಾವಿಗೆ ಕಾರಣಳಾಗಿದ್ದಾರೆ. ಸೋನಾಲಿ ಮಹಾರಾಷ್ಟ್ರದ ಕೊಲ್ಲಾಪುರ ಮೂಲದವರು. ಈ ಮೊದಲು ಎರಡು ಹೆಣ್ಣು ‌ಮಕ್ಕಳಿವೆ. ಇದರಿಂದ ಗರ್ಭಿಣಿ ಆದಾಗ ಮಿರಜ್​ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿ ಭ್ರೂಣ ಪತ್ತೆ ‌ಮಾಡಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸ್ಕ್ಯಾನಿಂಗ್, ಕರ್ನಾಟಕದಲ್ಲಿ ಗರ್ಭಪಾತ: ಮೂವರು ವಶಕ್ಕೆ

ಆಗ ಹೊಟ್ಟೆಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗು ಇರೋದು ಪತ್ತೆಯಾಗಿದೆ. ಆಗ ಮಾರುತಿ ಎಂಬ ದಲ್ಲಾಳಿ‌ ಮೂಲಕ ಕವಿತಾ ಸಂಪರ್ಕಕ್ಕೆ ಸಿಕ್ಕಿದ್ದಾಳೆ. ಮೇ 27 ರಂದು ಮಾರುತಿ ಹಾಗೂ ಸೋನಾಲಿ ಸಂಬಂಧಿ ವಿಜಯ್ ಮಹಾಲಿಂಗಪುರದಲ್ಲಿ ಕವಿತಾ ಬಳಿ ಕರೆತಂದಿದ್ದು, ಗರ್ಭಪಾತ ‌ಮಾಡಿಸಿದ್ದಾರೆ. ಆಗ ತೀವ್ರ ರಕ್ತಸ್ರಾವವಾಗಿದೆ. ನಂತರ ಕೆಲ ನಿಮಿಷದಲ್ಲಿ ಸೋನಾಲಿ ಮೂರ್ಚೆ ಹೋಗಿದ್ದಾರೆ.

ಕವಿತಾ ಎಲ್ಲ ಸರಿಯಾಗುತ್ತದೆ ಎಂದು ಒಂದು ಸಲೈನ್ ಹಾಕಿಸಿ ಕಳಿಸಿಕೊಟ್ಟಿದ್ದಾಳೆ. ಆದರೆ ಮಾರ್ಗ ಮಧ್ಯೆ ಕಾರಲ್ಲಿ ಸೋನಾಲಿ ‌ಮೃತಪಟ್ಟಿದ್ದಾರೆ. ಕಾರನ್ನು ಮಹಾರಾಷ್ಟ್ರ ಪೊಲೀಸರ ಗಡಿಯಲ್ಲಿ ಚೆಕ್‌ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸಾಂಗ್ಲಿ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿ ಸೋನಾಲಿ ಬ್ರಾಟ್ ಡೆಡ್ ಅಂತ ಸಾಬೀತಾಗಿದೆ.

ಇದನ್ನೂ ಓದಿ: ಮಂಡ್ಯ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣ: ಮಾಹಿತಿ ಇದ್ದರೂ ನಿರ್ಲಕ್ಷ್ಯ ಮಾಡಿದರೇ ಅಧಿಕಾರಿಗಳು?

ಆಗ ಘಟನೆ ಬಗ್ಗೆ ಸಾಂಗ್ಲಿ ಪೊಲೀಸರ ಎಂಟ್ರಿಯಾಗಿ ಠಾಣೆಯಲ್ಲಿ ಎಫ್​​ಐಆರ್ ಆಗಿದೆ. ಇದೀಗ ಕೇಸ್ ‌ಮಹಾಲಿಂಗಪುರ ಠಾಣೆಗೆ ಹಸ್ತಾಂತರವಾಗಿದ್ದು, ಕವಿತಾ ಬದನ್ನವರ, ದಲ್ಲಾಳಿ ಮಾರುತಿ ಕರ್ವಾಡ್,ವಿಜಯ್ ಗೌಲಿ ಮೂವರನ್ನು ಬಂಧಿಸಲಾಗಿದೆ. ಇನ್ನು ಇದೊಂದು ವ್ಯವಸ್ಥಿತ ಜಾಲ ಇರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದ್ದು ತನಿಖೆ‌ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:03 pm, Wed, 29 May 24