ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನ ಕೈಗೊಂಡರೂ ಸೋಂಕಿನ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಬಳ್ಳಾರಿ ಜಿಲ್ಲಾಡಳಿತ ಈಗ ಕೊರೊನಾ ನಿಯಂತ್ರಣಕ್ಕಾಗಿ ಏಪ್ರಿಲ್ 19ರಿಂದ 30 ರವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕೊರೊನಾ ಕರ್ಫ್ಯೂ ಜಾರಿಗಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇತ್ತ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. ಎರಡು ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಏಪ್ರಿಲ್ 30ರವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ(34)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಏಪ್ರಿಲ್ 19ರಿಂದ ಏಪ್ರಿಲ್ 30ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಅತ್ಯವಶ್ಯಕ ಸೇವೆಗಳಿಗೆ ಮಾತ್ರ ಅನುಮತಿಸಿದ್ದು, ಉಳಿದಂತೆ ಎಲ್ಲಾ ಸೇವೆಗಳನ್ನು ಮತ್ತು ಸಂಚಾರಗಳನ್ನು ನಿಷೇಧಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿಸಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು, ಕಂಪನಿಗಳು ಮತ್ತು ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಆದರೆ ಸಂಬಂಧಿಸಿದ ಕಾರ್ಮಿಕರು ನೌಕರರು ಕೊರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯಕ್ಕೆ ಹಾಜರಿರತಕ್ಕದ್ದು ಎಂದು ತಿಳಿಸಿದೆ. ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಟುವಟೆಕೆಗೆ ಮಾತ್ರ ಅನುಮತಿಸಿದ್ದು, ಇನ್ನುಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.
ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು, ಸರಕು ಸಾಗಣಿಕೆ ವಾಹನಗಳು ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ರಾತ್ರಿ ವೇಳೆಯಲ್ಲಿನ ಬಸ್ಸು, ರೈಲು, ವಿಮಾನದ ದೂರ ಪ್ರಯಾಣಕ್ಕೆ ಅನುಮತಿಸಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣದಿಂದ ಮನೆಗೆ ಅಧಿಕೃತ ಟಿಕೆಟ್‌ಗಳ ಆಧಾರದ ಮೇಲೆ ಆಟೋ ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿಸಲಾಗಿದೆ.
ಕಳೆದ ಐದು ದಿನಗಳಲ್ಲಿ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ:
ಏಪ್ರಿಲ್ 14- 159 ಪಾಸಿಟಿವ್ 1 ಸಾವು
ಏಪ್ರಿಲ್ 15- 200 ಪಾಸಿಟಿವ್ 6 ಸಾವು
ಏಪ್ರಿಲ್ 16- 279 ಪಾಸಿಟಿವ್ 1 ಸಾವು
ಏಪ್ರಿಲ್ 17- 355 ಪಾಸಿಟಿವ್ 2 ಸಾವು
ಏಪ್ರಿಲ್ 18 – 238 ಪಾಸಿಟಿವ್ 2 ಸಾವು
ಕಳೆದ ಐದು ದಿನಗಳಲ್ಲಿ 1231 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, 12 ಜನರು ಸಾವನ್ನಪ್ಪಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಜಿಲ್ಲಾಡಳಿತ ಈಗ ಕೊರೊನಾ ಕರ್ಫ್ಯೂ ಜಾರಿಗೊಳಿಸಿದೆ. ಇಂದಿನಿಂದ (ಏಪ್ರಿಲ್ 19) ಕೊರೊನಾ ಕರ್ಪ್ಯೂ ಜಾರಿಗೊಳಿಸಿದ್ದರಿಂದ ರಾತ್ರಿಯಿಂದಲೇ ಪೊಲೀಸರು ಫೀಲ್ಡ್ಗಿಳಿಯಲಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಬಳ್ಳಾರಿ ನಗರದಲ್ಲಿ ಫೀಲ್ಡ್ಗಿಳಿದು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ ಕೊವಿಡ್ ನಿಯಮ ಉಲ್ಲಂಘಿಸಿದ ಅಂಗಡಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ:
ಯುವಕರಲ್ಲೇ ಕೊರೊನಾ ಸೋಂಕು ಹೆಚ್ಚು; ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆರೋಗ್ಯಾಧಿಕಾರಿಗಳಿಂದ ಸೂಚನೆ
ನನ್ನ ಸಾವಿಗೆ ರಾಜಕಾರಣಿಗಳೇ ಕಾರಣ; ಕೊರೊನಾ ಸೋಂಕಿತ ‘ಮಠ’ ಗುರುಪ್ರಸಾದ್ ಬಹಿರಂಗ ಡೆತ್ ನೋಟ್
(Ballari deputy commissioner announced corona curfew as covid cases surge)