ಹಿರಿಯ ‘ಜೀವಿ’ ನಿಘಂಟು ತಜ್ಞ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ

Prof G Venkatasubbaiah No More ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಏಪ್ರಿಲ್ 19 ರಾತ್ರಿ 1.15ರ ಸಮಯಕ್ಕೆ ವಿಧಿವಶರಾಗಿದ್ದಾರೆ. ವಯೋ ಸಹಜ ಕಾರಣಗಳಿಂದ ಕನ್ನಡದ ಹೆಮ್ಮೆಯ ಹಿರಿಯ ಸಾಧಕ ತಮ್ಮ 108ನೇ ವಯಸ್ಸಿನಲ್ಲಿ ಅಗಲಿದ್ದಾರೆ.

ಹಿರಿಯ 'ಜೀವಿ' ನಿಘಂಟು ತಜ್ಞ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ
ನಿಜ ಅರ್ಥದಲ್ಲಿ ಸರಸ್ವತಿ ಪುತ್ರ; ಶಾರದೆಯನ್ನೇ ತನ್ನ ಮಡಿಲಲ್ಲಿ ತುಂಬಿಕೊಂಡು ಪೊರೆದ 'ಜೀವಿ'
Follow us
ಆಯೇಷಾ ಬಾನು
|

Updated on:Apr 19, 2021 | 10:52 AM

ಬೆಂಗಳೂರು: ಕನ್ನಡ ಭಾಷಾಶಾಸ್ತ್ರಜ್ಞ, ವೈಯಾಕರಣಿಕ, ಸಾಹಿತ್ಯ ಪ್ರೇಮಿ ಮತ್ತು ಸಾವಿರಾರು ಪ್ರತ್ಯಕ್ಷ-ಲಕ್ಷಾಂತರ ಪರೋಕ್ಷ ಶಿಷ್ಯರ ಪ್ರೀತಿಯ ‘ಮೇಷ್ಟ್ರು’ ಕನ್ನಡದ ವಿದ್ವಾಂಸ, ನಿಘಂಟು ತಜ್ಞ ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ ಏಪ್ರಿಲ್ 19 ತಡರಾತ್ರಿ 1.15ರ ಸಮಯಕ್ಕೆ ವಿಧಿವಶರಾಗಿದ್ದಾರೆ. ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ಕನ್ನಡದ ಹೆಮ್ಮೆಯ ಹಿರಿಯ ಸಾಧಕ ತಮ್ಮ 108ನೇ ವಯಸ್ಸಿನಲ್ಲಿ ಅಗಲಿದ್ದಾರೆ.

ಪ್ರೊ.ಜಿ.ವೆಂಕಟಸುಬ್ಬಯ್ಯ 1913ರ ಆಗಸ್ಟ್ 13ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದ್ದರು. ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಕನ್ನಡ ನಿಘಂಟು ಶಾಸ್ತ್ರ ಪರಿಚಯ’ ಇವರ ಶ್ರೇಷ್ಠ ಗ್ರಂಥ. ‘ಇಗೋ ಕನ್ನಡ’ ಅಂಕಣದ ಮೂಲಕ ಕನ್ನಡ ಪದಗಳ ವ್ಯುತ್ಪತ್ತಿ (ಪದಗಳ ಹಿನ್ನೆಲೆ) ಶೋಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. ಈ ಅಂಕಣ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಅಪಾರ ಜನಪ್ರಿಯತೆ ಪಡೆದಿತ್ತು. ಯಾವುದೇ ಪದಗಳ ಅರ್ಥ ನಿಷ್ಕರ್ಷೆಯಲ್ಲಿ ಅನುಮಾನಗಳು ಮೂಡಿದರೆ ನೇರವಾಗಿ ಜಿವಿ ಅವರಿಗೆ ವಿದ್ಯಾರ್ಥಿ-ಶಿಕ್ಷರು ಪತ್ರ ಬರೆಯುತ್ತಿದ್ದರು. ಇಂಥ ಪತ್ರಗಳಿಗೆ ಜಿವಿ ತಾಳ್ಮೆಯಿಂದ ಉತ್ತರಿಸುತ್ತಿದ್ದುದಲ್ಲದೆ, ತಮ್ಮ ಅಂಕಣದಲ್ಲಿಯೂ ಪ್ರಸ್ತಾಪಿಸುತ್ತಿದ್ದರು.ಜಿವಿ ಅವರ ಇಗೋ ಕನ್ನಡ ಪುಸ್ತಕ ಕನ್ನಡ ಭಾಷಾಶಾಸ್ತ್ರಕ್ಕೆ ಸಿಕ್ಕ ದೊಡ್ಡ ಕೊಡುಗೆಯಾಗಿದೆ.

ಕನ್ನಡದ ಏಳಿಗೆಗಾಗಿ ದುಡಿದ ಪ್ರೊ.ಜಿ.ವೆಂಕಟಸುಬ್ಬಯ್ಯ ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಹಾಗೂ ಇವರ ಭಾಷಾ ಸಾಹಿತ್ಯ ಸಾಧನೆಗೆ ಹಂಪಿ ವಿಶ್ವವಿದ್ಯಾಲಯ ಪ್ರತಿಷ್ಠತ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜೊತೆಗೆ ಇವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಗೋಕಾಕ್ ಪ್ರಶಸ್ತಿ, ಭಾಷಾ ಸಮ್ಮಾನ್, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಪ್ರೊ.ಜಿ.ವೆಂಕಟಸುಬ್ಬಯ್ಯರವರಿಗೆ ಲಭಿಸಿದೆ. ಅಲ್ಲದೆ ಇವರು ಬೆಂಗಳೂರಿನಲ್ಲಿ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಜಯನಗರದ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಜಯನಗರದ ನಿವಾಸದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನದ ಬಳಿಕ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯ ಅಂತ್ಯಸಂಸ್ಕಾರ ನೆರವೇರಲಿದೆ.

ಮೂತ್ರ ನಾಳದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟಸುಬ್ಬಯ್ಯ ಕಳೆದ‌ ಎಂಟು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಮೂತ್ರ ನಾಳದ ಸೋಂಕಿನಿಂದ ಗುಣಮುಖರಾಗಿದ್ದ ಪ್ರೊ.‌ ಜೀವಿ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಆದ್ರೆ ನಸುಕಿನ ಜಾವ 1:15 ರ ವೇಳೆಗೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

Prof G Venkatasubbaiah

ಪ್ರೊ.ಜಿ.ವೆಂಕಟಸುಬ್ಬಯ್ಯ

ಕನ್ನಡ ನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ನಿಧನಕ್ಕೆ ಸಿಎಂ ಬಿಎಸ್‌ವೈ ಸಂತಾಪ ಸೂಚಿಸಿದ್ದಾರೆ. ವೆಂಕಟಸುಬ್ಬಯ್ಯರ ನಿಧನದ ಸುದ್ದಿಯಿಂದ ದುಃಖವಾಗಿದೆ. ಭಾಷಾ ತಜ್ಞರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಶಿಕ್ಷಕರಾಗಿ ಕನ್ನಡಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ನಿಧನ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಸಾಧನೆ ಕನ್ನಡಿಗರ ಪಾಲಿಗೆ ಚಿರಸ್ಥಾಯಿಯಾಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್‌ ಮೂಲಕ ಸಿಎಂ ಬಿಎಸ್‌ವೈ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎ. ಹೆಗಡೆ ನಿಧನ

Published On - 7:03 am, Mon, 19 April 21