ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ. ಎ. ಹೆಗಡೆ ನಿಧನ
ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಮಹಾಬಲೇಶ್ವರ ಅಣ್ಣಪ್ಪ ಹೆಗಡೆ (77) ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ಮೂರು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಇಂದು ಬೆಳಗ್ಗೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯೆಯೇ ಕೊನೆ ಉಸಿರೆಳೆದರು.
ಯಕ್ಷಗಾನವು ಪ್ರೊ. ಎಂ.ಎ ಹೆಗಡೆ ಅವರಿಗೆ ಪ್ರಿಯವಾದ ಹವ್ಯಾಸ. ಸುಮಾರು 11ನೆಯ ವರ್ಷದಲ್ಲಿ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ ರಂಗವನ್ನು ಪ್ರವೇಶಿದರು. ಅನಂತರ ಕೆರೆಮನೆ ಶಂಭು ಹೆಗಡೆಯವರಲ್ಲಿ ನೃತ್ಯಾಭ್ಯಾಸ ಮಾಡಿ ಬಣ್ಣ ಹಚ್ಚಿದರು. ಕಾನಸೂರು ಕೆರೆಮನೆ, ಗಡಿಮನೆ ಮುಂತಾದ ಬಯಲಾಟದ ಮೇಳಗಳಲ್ಲದೆ ಇಡಗುಂಜಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದರು. ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿ ಶೇಣಿ, ಪೆರ್ಲ, ಆನಂದಮಾಸ್ತರ, ಜೋಶಿ ಮುಂತಾದವರೊಂದಿಗೂ ಹೊಸತಲೆಮಾರಿನ ಉಮಾಕಾಂತ ಭಟ್ಟ, ವಾಸುದೇವರಂಗ ಭಟ್ಟ, ಜಬ್ಬಾರ ಸಮೊ, ಕಲಚಾರ್, ಸುಣ್ಣಂಬಳ, ಸಂಕದಗುಂಡಿ ಮುಂತಾದ ಹೊಸ ತಲೆಮಾರಿನವರೊಂದಿಗೆ ಅರ್ಥ ಹೇಳಿದ ಅನುಭವ ಇವರದಾಗಿತ್ತು.
ಬೆಂಗಳೂರು : ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಮಹಾಬಲೇಶ್ವರ ಅಣ್ಣಪ್ಪ ಹೆಗಡೆ (73) ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ಮೂರು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಇಂದು ಬೆಳಗ್ಗೆ ತೀವ್ರ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯೆಯೇ ಕೊನೆ ಉಸಿರೆಳೆದರು.
ಎಂ. ಎ. ಹೆಗಡೆ ಅವರು ಸಿದ್ದಾಪುರ ತಾಲೂಕಿನ ಜೋಗಿನಮನೆಯವರು. ತಂದೆ ಅಣ್ಣಪ್ಪ ಹೆಗಡೆ , ತಾಯಿ ಕಾಮಾಕ್ಷಿ. ಜನನ 1948 ಜುಲೈ 3. ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ. ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಹಾಗೂ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯಗಳಲ್ಲಿ ಉಪನ್ಯಾಸಕ. 1973ರಿಂದ ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ದಿ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ 2006ರಲ್ಲಿ ನಿವೃತರಾಗಿದ್ದರು.
ಯಕ್ಷಗಾನವು ಅವರಿಗೆ ಪ್ರಿಯವಾದ ಹವ್ಯಾಸ. ಸುಮಾರು 11ನೆಯ ವರ್ಷದಲ್ಲಿ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ ರಂಗವನ್ನು ಪ್ರವೇಶಿದರು. ಅನಂತರ ಕೆರೆಮನೆ ಶಂಭು ಹೆಗಡೆಯವರಲ್ಲಿ ನೃತ್ಯಾಭ್ಯಾಸ ಮಾಡಿ ಬಣ್ಣ ಹಚ್ಚಿದರು. ಕಾನಸೂರು ಕೆರೆಮನೆ, ಗಡಿಮನೆ ಮುಂತಾದ ಬಯಲಾಟದ ಮೇಳಗಳಲ್ಲದೆ ಇಡಗುಂಜಿ ಮೇಳದಲ್ಲಿ ಅತಿಥಿ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದರು. ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿ ಶೇಣಿ, ಪೆರ್ಲ, ಆನಂದಮಾಸ್ತರ, ಜೋಶಿ ಮುಂತಾದವರೊಂದಿಗೂ ಹೊಸತಲೆಮಾರಿನ ಉಮಾಕಾಂತ ಭಟ್ಟ, ವಾಸುದೇವರಂಗ ಭಟ್ಟ, ಜಬ್ಬಾರ ಸಮೊ, ಕಲಚಾರ್, ಸುಣ್ಣಂಬಳ, ಸಂಕದಗುಂಡಿ ಮುಂತಾದ ಹೊಸ ತಲೆಮಾರಿನವರೊಂದಿಗೆ ಅರ್ಥ ಹೇಳಿದ ಅನುಭವ ಇವರದಾಗಿತ್ತು.
ಮಲ್ಪೆ ವಾಸುದೇವ ಸಾಮಗರ ನೇತೃತ್ವದ ‘ಸಂಯಮಂ’ ಕೂಟದ ಸದಸ್ಯರಾಗಿ ಸಂಚರಿಸಿದ್ದರು. ಪ್ರಸಂಗ ಕರ್ತರಾಗಿ ಸೀತಾವಿಯೋಗ, ತ್ರಿಶಂಕುಚರಿತೆ, ರಾಜಾ ಕರಂಧಮ, ವಿಜಯೀ ವಿಶ್ರುತ, ಧರ್ಮದುರಂತ, ವಜ್ರಕಿರೀಟ, ಆದಿಚುಂಚನಗಿರಿ ಕ್ಷೇತ್ರಮಹಾತ್ಮೆ, ಭಕ್ತ ಕನಕದಾಸ, ರಾಮಧಾನ್ಯಚರಿತೆ, ಗಯಯಜ್ಞವೇ ಮುಂತಾಗಿ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಪ್ರಸಂಗಗಳ ರಚನೆ ಮಾಡಿದ್ದರು. ಇವರ ‘ಸೀತಾವಿಯೋಗ’ಅತ್ಯಂತ ಜನಪ್ರಿಯ ಕೃತಿಯಾಗಿದೆ. ಹಸ್ತಪ್ರತಿಗಳ ಸಂಗ್ರಹ ಸಂಶೋಧನೆಯಲ್ಲಿ ತೊಡಗಿ ಅನೇಕ ಹಳೆಯ ಪ್ರಸಂಗಗಳನ್ನು ಪ್ರಕಟಿಸಿದ್ದರು. ಯಕ್ಷಗಾನ ಸಾಹಿತ್ಯದಲ್ಲಿಯೇ ಅತ್ಯಂತ ಪ್ರಾಚೀನವೆನಿಸಿದ ‘ಆದಿಪರ್ವ’ವನ್ನು ಸಂಪಾದಿಸಿ ಪ್ರಕಟಿಸಿದ್ದರು. ಇದರೊಂದಿಗೆ ಬೆಳಸಲಿಗೆ ಗಣಪತಿ ಹೆಗಡೆಯವರ ಪ್ರಸಂಗಗಳ ಪ್ರಕಟಣೆಯಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಅನೇಕ ಪ್ರಸಂಗಕರ್ತರಿಗೆ ಮಾರ್ಗದರ್ಶಕರಾಗಿದ್ದರು. ಯಕ್ಷಗಾನಕ್ಕೆ ಸಂಬಂಧಿಸಿ ನೂರಾರು ಲೇಖನಗಳನ್ನು ಬರೆದಿದ್ದರು.
ಗೋಷ್ಠಿ, ವಿಚಾರಸಂಕಿರಣಗಳಲ್ಲಿ ಪ್ರಬಂಧಕಾರರಾಗಿ ಅಧ್ಯಕ್ಷರಾಗಿ ಭಾಗವಹಿಸಿದ್ದರು. ಸಿದ್ದಾಪುರದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ಯಕ್ಷಗಾನ ಸಮ್ಮೇಳನ, ಭುವನಗಿರಿಯಲ್ಲಿ ನಡೆದ ಪ್ರಥಮ ತಾಳಮದ್ದಳೆ ಸಮ್ಮೇಳನ, ಶಿರಸಿಯಲ್ಲಿ ನಡೆದ ಅಖಿಲಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿದ್ದರು. ಸೋಂದಾ ಸ್ವರ್ಣವಲ್ಲಿಯ ಯಕ್ಷಶಾಲ್ಮಲಾ ಸಂಸ್ಥೆಯ ಸಕ್ರಿಯ ಸದಸ್ಯರಾಗಿ, ಶಿರಸಿಯ ಯಕ್ಷಸಂಭ್ರಮಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇಡಗುಂಜಿ ಮೇಳದೊಟ್ಟಿಗೆ ನಿರಂತರವಾದ ಸಂಬಂಧವನ್ನಿಟ್ಟುಕೊಂಡ ಇವರು ರಾಷ್ಟ್ರೀಯ ನಾಟ್ಯೋತ್ಸವ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. ಯಕ್ಷಗಾನಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳಿಗೆ ಮಾರ್ಗದರ್ಶಕರೂ ಆಗಿದ್ದರು.
ಯಕ್ಷಗಾನ ಸೇವೆಗಾಗಿ ಸದಾನಂದ ಪ್ರಶಸ್ತಿ, ಶೇಣಿ ಪುರಸ್ಕಾರ, ಚಿಟ್ಟಾಣಿ ಪ್ರಶಸ್ತಿ,ಅನಂತಪ್ರಶಸ್ತಿಯೇ ಮುಂತಾದವುಗಳಲ್ಲದೆ ನೂರಾರು ಸನ್ಮಾನಗಳಿಗೆ ಇವರು ಭಾಜನರಾಗಿದ್ದಾರೆ. ಇವರ ಸಿದ್ಧಾಂತಬಿಂದು ಗ್ರಂಥಕ್ಕೆ ಪ್ರೊ.ಎಂ. ಹಿರಿಯಣ್ಣ ಪುರಸ್ಕಾರ, ಭಾರತೀಯ ದರ್ಶನಗಳು ಮತ್ತು ಭಾಷೆ ಎಂಬ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಸೋಂದಾ ಸ್ವರ್ಣವಲ್ಲೀ ಮಠದಿಂದ ‘ವೈಖರೀವಾಕ್’ಎಂಬ ಬಿರುದು ಸಂದಿದೆ.
ಇವರು ರಚಿಸಿದ ಕೃತಿಗಳು
1.ಬ್ರಹ್ಮಸೂತ್ರ ಚತುಃಸೂತ್ರಿ- ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಗಳ ಅನುವಾದ ಹಾಗೂ ವಿಸ್ತಾರವಾದ ಟಿಪ್ಪಣಿ.
2. ಅಲಂಕಾರತತ್ತ್ವ- ಕನ್ನಡದಲ್ಲಿ ಉಪಮಾ, ರೂಪಕ ಇತ್ಯಾದಿ ಅಲಂಕಾರಗಳನ್ನು ವಿಸ್ತಾರವಾಗಿ ವಿವೇಚಿಸಿದ ಕನ್ನಡದ ಏಕಮಾತ್ರ ಗ್ರಂಥ. ಇದರಲ್ಲಿ ಹಳೆಗನ್ನಡ ಹಾಗೂ ಹೊಸಗನ್ನಡ ಕಾವ್ಯಗಳಿಂದ ಉದಾಹರಣೆಗಳನ್ನು ಕೊಟ್ಟು ಪ್ರಾಚೀನ ಆಲಂಕಾರಿಕರ ತತ್ತ್ವಗಳು ಇಂದಿಗೂ ಹೇಗೆ ಪ್ರಸ್ತುತವಾಗಿವೆಯೆಂಬುದನ್ನು ನಿರೂಪಿಸಲಾಗಿದೆ. ಇದನ್ನೊಂದು ಆಕರ ಗ್ರಂಥವೆಂದು ಕರ್ನಾಟಕ ವಿಶ್ವವಿದ್ಯಾಲಯವು ಮಾನ್ಯತೆ ಮಾಡಿದೆ. ಧಾರವಾಡದ ಸಮಾಜ ಪುಸ್ತಕಾಲಯವು ಇದನ್ನು ಪ್ರಕಟಿಸಿದೆ.
3.ಭಾರತೀಯ ತತ್ತ್ವಶಾಸ್ತ್ರ ಪ್ರವೇಶ – ಭಾರತೀಯ ದರ್ಶನಗಳ ವಿಚಾರಧಾರೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಗ್ರಂಥ. ಇದು ಮೊದಲು ಮಂಗಳೂರಿನ ದಿಗಂತ ಪ್ರಕಾಶನದಿಂದ ಪ್ರಕಟ. ಅನಂತರ ಹೆಗ್ಗೋಡಿನ ಆಕ್ಷರ ಪ್ರಕಾಶನದಿಂದ ಪ್ರಕಟಗೊಂಡು ಈಗ ದ್ವಿತೀಯ ಮುದ್ರಣವನ್ನು ಕಂಡಿದೆ. ಗಹನವಾದ ದರ್ಶನಶಾಸ್ತ್ರ ಸಿದ್ಧಾಂತಗಳನ್ನು ಇಷ್ಟು ತಿಳಿಯಾಗಿ ನಿರೂಪಿಸುವ ಮತ್ತೊಂದು ಗ್ರಂಥವಿಲ್ಲವೆಂಬ ಖ್ಯಾತಿ. ಡಾ. ಎಂ. ಪ್ರಭಾಕರ ಜೋಶಿಯವರು ಸಹಲೇಖಕರು.
4. ಕುಮಾರಿಲಭಟ್ಟ – ಭಾರತದ ಮಹಾನ್ ತಾರ್ಕಿಕರಲ್ಲೊಬ್ಬನಾದ ಮೀಮಾಂಸಾಶಾಸ್ತ್ರದ ಮೂರ್ಧನ್ಯನೆನಿಸಿದ ಕುಮಾರಿಲಭಟ್ಟನ ಶ್ಲೋಕವಾರ್ತಿಕದ ಒಂದು ಅಧ್ಯಾಯದ ಅನುವಾದ, ಟಿಪ್ಪಣಿ ಹಾಗೂ ಸುದೀರ್ಘವಾದ ಪೀಠಿಕೆಯೊಂದಿಗೆ ಪ್ರಕಟಗೊಂದ ಈ ಗ್ರಂಥವು ಕನ್ನಡ ಜಗತ್ತಿಗೆ ಕುಮಾರಿಲನನ್ನು ಪರಿಚಯಿಸುವ ಕೃತಿ. ಡಾ. ಎಂ. ಪ್ರಭಾಕರ ಜೋಶಿಯವರರು ಸಹಲೇಖಕರಾಗಿರುವ ಈ ಕೃತಿಯು ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರ ಹಿನ್ನುಡಿಯೊಂದಿಗೆ ಅಕ್ಷರ ಚಿಂತನಮಾಲೆಯಲ್ಲಿ ಹೆಗ್ಗೋಡಿನ ಅಕ್ಷರಪ್ರಕಾಶನದಿಂದ ಪ್ರಕಟಗೊಂಡಿದೆ.
5. ಶಬ್ದ ಮತ್ತು ಜಗತ್ತು – ಪ್ರೊ. ಬಿ.ಕೆ. ಮತಿಲಾಲ ಅವರ ಮೂಲಕೃತಿಯ ಕನ್ನಡ ಅನುವಾದ. ಭಾಷಾತತ್ತ್ವಶಾಸ್ತ್ರದ ವಿವಿಧ ಸಮಸ್ಯೆಗಳನ್ನು ಚರ್ಚಿಸುವಗ್ರಂಥ. ಅಕ್ಷರ ಪ್ರಕಾಶನ ಹೆಗ್ಗೋಡು ಇವರಿಂದ ಪ್ರಕಟಿತ.
6. ಭಾರತೀಯ ದರ್ಶನಗಳು ಮತ್ತು ಭಾಷೆ – ಭಾಷೆಯ ಬಗೆಗೆ ಭಾರತೀಯ ದರ್ಶನಗಳಲ್ಲಿ ನಡೆದ ಮುಖ್ಯವಾದ ವಾದ-ವಿವಾದಗಳನ್ನು ಸಂಕ್ಷಿಪ್ತವಾಗಿ ನಿರೂಪಿಸುವ ಗ್ರಂಥ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.
7. ಅಭಿನಯದರ್ಪಣ -ನಂದಿಕೇಶ್ವರನ ಅಭಿನಯ ದರ್ಪಣದ ಅನುವಾದ. ಸಂಸ್ಕೃತದಲ್ಲಿ ರಚಿತವಾದ ಪ್ರಸಿದ್ಧ ಕೃತಿಯನ್ನು ವಿವರವಾದ ಟಿಪ್ಪಣಿಗಳೊಂದಿಗೆ ಅನುವಾದಿಸಲಾಗಿದೆ. ಅಕ್ಷರ ಪ್ರಕಾಶನದಿಂದ ಪ್ರಕಟಿತ.
8. ಧ್ವನ್ಯಾಲೋಕ ಮತ್ತು ಲೋಚನ – ಆನಂದವರ್ಧನನ ಪ್ರಸಿದ್ಧಕೃತಿಯನ್ನು ಮೂಲವೃತ್ತಿಗಳ ಜೊತೆಗೆ ಅಭಿನವಗುಪ್ತನ ಲೋಚನವೆಂಬ ವ್ಯಾಖ್ಯಾನದೊಂದಿಗೆ ಅನುವಾದಿಸಲಾಗಿದೆ. ವಿವರವಾದ ಟಿಪ್ಪಣಿಗಳನ್ನು ಕೊಡಲಾಗಿದೆ. ಇದು ಅಲಂಕಾರಶಾಸ್ತ್ರದ ಅಧ್ಯಯನಕ್ಕೆ ಮಹತ್ವದ ಕೊಡುಗೆಯೆನಿಸಿದೆ. ಇದನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಪ್ರಕಟಿಸಿದೆ.
9. ಭಗವದ್ಭಕ್ತಿರಸಾಯನಮ್ –ಮಧುಸೂದನ ಸರಸ್ವತಿಯವರ ಕೃತಿ. ಭಕ್ತಿಯು ಒಂದು ರಸವೆಂದು ಸಿದ್ಧಪಡಿಸುವ ಗ್ರಂಥ. ಅದನ್ನು ವ್ಯಾಖ್ಯಾನಸಹಿತವಾಗಿ ಕನ್ನಡಕ್ಕೆ ಅನುವಾದಿಸಿದೆ. 10. ಸಿದ್ಧಾಂತಬಿಂದು – ಮಧುಸೂದನ ಸರಸ್ವತಿಯವರ ಮತ್ತೊಂದು ಪ್ರೌಢ ಗ್ರಂಥ. ಅದನ್ನು ವಿಸ್ತಾರವಾದ ವಿವರಣೆಯೊಂದಿಗೆ ಅನುವಾದಿಸಲಾಗಿದೆ. ಈ ಅನುವಾದಕ್ಕೆ ಸಂಸ್ಕೃತ ವಿಶ್ವವಿದ್ಯಾಲಯವು ಅತ್ಯುತ್ತಮ ಅನುವಾದಕ್ಕೆ ಕೊಡಲಾಗುವ ‘ಪ್ರೊ. ಎಂ. ಹಿರಿಯಣ್ಣ ಪುರಸ್ಕಾರ’ವನ್ನು ನೀಡಿದೆ.
11. ಪರಮಾನಂದಸುಧಾ – ಶಂಕರಾಚಾರ್ಯರ ಬ್ರಹ್ಮಸೂತ್ರದ ನಾಲ್ಕು ಸೂತ್ರಗಳ ಭಾಷ್ಯದ ಮೇಲಿನ ವಿಸ್ತಾರವಾದ ವ್ಯಾಖ್ಯಾನ. ಈ ಮೂರೂ ಗ್ರಂಥಗಳನ್ನು ಬೆಂಗಳೂರಿನ ಉದಯ ಪ್ರಕಾಶನವು ಪ್ರಕಟಿಸಿದೆ.
12. ಗೀತಾಗೂಢಾರ್ಥದೀಪಿಕಾ – ಮಧುಸೂದನ ಸರಸ್ವತಿಯವರ ಆಚಾರ್ಯಕೃತಿಯೆನಿಸಿದ ಭಗವದ್ಗೀತೆಯ ಮೇಲಿನ ವ್ಯಾಖ್ಯಾನದ ಕನ್ನಡ ಅನುವಾದ. ಈ ಬೃಹದಗ್ರಂಥವನ್ನು ಕೆ.ಆರ್.ನಗರದ ವೇದಾಂತಭಾರತಿ ಸಂಶೋಧನಾ ಸಂಸ್ಥೆಯು ಪ್ರಕಟಿಸಿದೆ.
13. ಸೌಂದರ್ಯಲಹರಿ ಮತ್ತು ಸಮಾಜ -ಶಂಕರಾಚಾರ್ಯರ ಸೌಂದರ್ಯಹರಿಯ ಮೇಲಿನ ಕೃತಿ.ಇದು ವೇದಾಂತ ಭಾರತಿಯಿಂದ ಪ್ರಕಟವಾಗಿದೆ.
14. ಪ್ರಮಾಣಪರಿಚಯ – ಪ್ರತ್ಯಕ್ಷ, ಅನುಮಾನ, ಶಬ್ದವೇ ಮುಂತಾದ ಪ್ರಮಾಣಗಳ ಸ್ವರೂಪವನ್ನು ಭಾರತೀಯದರ್ಶನಗಳು ವಿವೇಚಿಸಿದ ಬಗೆಯನ್ನು ವಿವರಿಸುವ ಕೃತಿ. ಇದನ್ನು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರಕಟಿಸಿದೆ. ದರ್ಶನಶಾಸ್ತ್ರಗಳ ಅಧ್ಯಯನಕ್ಕೆ ಪೂರಕ ಕೃತಿ.
15. ಹಿಂದೂ ಸಂಸ್ಕಾರಗಳು – ವೇದೋಕ್ತವಾದ ಷೋಡಶಸಂಸ್ಕಾರಗಳ ಇತಿಹಾಸ,ಅರ್ಥವತ್ತತೆಯೇ ಮುಂತಾದವುಗಳನ್ನು ವಿವೇಚಿಸುವ ಕೃತಿ. ಮುದ್ರಣಗೊಂಡು ವರ್ಷವಾಗುವುದರೊಳಗೆ ದ್ವಿತೀಯ ಮುದ್ರಣಕ್ಕೆ ಅಣಿಯಾದ ಜನಪ್ರಿಯ ಕೃತಿ.ಇದು ಬೆಂಗಳೂರಿನ ಸಮೃದ್ಧ ಸಾಹಿತ್ಯದಿಂದ ಪ್ರಕಟಗೊಂಡಿದೆ.
16. ಕೆರೆಮನೆ ಶಂಭು ಹೆಗಡೆ –ಯಕ್ಷಗಾನದ ಮೇರುಕಲಾವಿದ ಕೆರೆಮನೆ ಶಂಭು ಹೆಗಡೆಯವರ ಜೀವನ ಚರಿತ್ರೆ. ಇದನ್ನು ಬೆಂಗಳೂರಿನ ಹೇಮಂತ ಸಾಹಿತ್ಯ ಪ್ರಕಾಶನವು ಪ್ರಕಟಿಸಿದೆ.
17. ಮರೆಯಲಾಗದ ಮಹಾಬಲ – ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ಪಾತ್ರಗಳನ್ನು ಕುರಿತು ರಚಿಸಿದ ಕೃತಿ. ಇದು ಮೈಸೂರಿನ ಚೇತನಾ ಬುಕ್ ಹೌಸ್ ನಿಂದ ಪ್ರಕಟವಾಗಿದೆ.
18. ಉತ್ತರಕನ್ನಡಜಿಲ್ಲೆಯ ಯಕ್ಷಗಾನ ಸಾಹಿತ್ಯ ಚರಿತ್ರೆ.
ಇವಲ್ಲದೆ ತಾಂಬೂಲಮಂಜರಿ, ಅಭಿನವಭಾರತಿ (ನಾಟ್ಯಶಾಸ್ತ್ರದ ಮೇಲಿನ ವ್ಯಾಖ್ಯಾನ), ಬಾಲರಾಮಾಯಣ, ಉನ್ಮತ್ತರಾಘವ, ಅನರ್ಘರಾಘವ ನಾಟಕಗಳ ಅನುವಾದಗೊಂಡಿವೆ.
ಇದನ್ನೂ ಓದಿ : ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳು ನಿಧನ
yakshagana bayalata akademi president ma hegade no more
Published On - 11:20 am, Sun, 18 April 21