ಬಳ್ಳಾರಿ: ಜಿಲ್ಲೆಯ ಅನ್ನದಾತರೆಲ್ಲಾ ಕಷ್ಟಪಟ್ಟು ಬೆಳೆ ಬೆಳೆದಿದ್ದರು. ಬೆಳೆದ ಬೆಳೆ(Crop) ಸಹ ಬಂಪರ್ ಆಗಿ ಬಂದಿತ್ತು. ಆದರೆ ಕಳೆದ ನವೆಂಬರ್ನಲ್ಲಿ ಸುರಿದ ಅಕಾಲಿಕ ಮಳೆ ಈ ಅನ್ನದಾತರನ್ನು ಕಣ್ಣೀರಿಡುವಂತೆ ಮಾಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ(Chilli) ಬೆಳೆ ನಷ್ಟವಾದರೆ, ರೈತರ ನೆರವಿಗೆ ಬರಬೇಕಾದ ಸರ್ಕಾರಿ ಹಣ ಬರೀ 36 ಕೋಟಿ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿನಕಾಯಿ ಬೆಳೆ ನಷ್ಟದಿಂದ ಅನ್ನದಾತರು(Farmers) ಕಣ್ಣೀರಿಡುವಂತಾಗಿದೆ.
ಮೆಣಸಿನಕಾಯಿ ಬೆಳೆ ಬೆಳೆಯುವುದರಲ್ಲಿ ಬಳ್ಳಾರಿ ಜಿಲ್ಲೆಯ ರೈತರದ್ದು ಎತ್ತಿದ ಕೈ. ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಬೆಳೆ ಬೆಳೆಯುವ ಬಳ್ಳಾರಿ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೆಣಸಿನಕಾಯಿ ಬೆಳೆ ಬೆಳೆದ ತಪ್ಪಿಗೆ ಕಣ್ಣೀರಿಡುತ್ತಿದ್ದಾರೆ. ಏಕೆಂದರೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಸಾವಿರ ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ.
ಬಳ್ಳಾರಿ, ಕಂಪ್ಲಿ, ಕುರಗೋಡ್, ಸಿರಗುಪ್ಪ ತಾಲೂಕಿನಲ್ಲಿ ರೈತರು ಅತಿ ಹೆಚ್ಚಾಗಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಾರೆ. ಈ ಭಾಗದ ರೈತರು ಬೆಳೆಯುವ ಮೆಣಸಿನಕಾಯಿ ಬೆಳೆ ಸಹ ಬಂಪರ್ ಆಗಿ ಬರುತ್ತದೆ. ಆದರೆ ಕಳೆದ ನವೆಂಬರ್ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟಕ್ಕೆ ತುತ್ತಾಗಿದೆ.
ಅಕಾಲಿಕವಾಗಿ ಸುರಿದ ಮಳೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಮತ್ತು ವಿಜಯನಗರ ಜಿಲ್ಲೆಯ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬ್ಯಾಡಗಿ ಮತ್ತು ಗುಂಟೂರು ಮೆಣಸಿನಕಾಯಿ ಬೆಳೆ ನಷ್ಟಕ್ಕೆ ತುತ್ತಾಗಿದೆ. ಸರಿಯಾಗಿ ಬೆಳೆ ಬಂದಿದ್ದರೆ ಎರಡೂವರೆ ಲಕ್ಷ ಟನ್ ಮೆಣಸಿನಕಾಯಿ ಫಸಲು ಬರಬೇಕಿತ್ತು. ಹಿಂದಿನ ವರ್ಷ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 1.8 ಲಕ್ಷ ಮೆಣಸಿನಕಾಯಿ ಬೆಳೆಯಲಾಗಿತ್ತು. ಆದರೆ ಅಕಾಲಿಕವಾಗಿ ಸುರಿದ ಮಳೆಗೆ ಮೆಣಸಿನಕಾಯಿ ಬೆಳೆಯಲ್ಲ ತೊಯ್ದು ಕೊಳೆತು ಹೋಗಿದೆ. ಆದರೆ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಸಿಕ್ಕಿದ್ದು ಮಾತ್ರ ಬಿಡಿಗಾಸು ಪರಿಹಾರ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತಮ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ಒಂದೆಡೆ ನಷ್ಟವುಂಟು ಮಾಡಿದರೆ, ಇನ್ನೊಂದೆಡೆ ಸರ್ಕಾರ ಸೂಕ್ತ ಪರಿಹಾರ ನೀಡದೇ ಅನ್ನದಾತರಿಗೆ ಅನ್ಯಾಯ ಮಾಡಿದೆ. ಅಲ್ಲದೇ ಮೆಣಸಿನಕಾಯಿ ಬೆಳೆ ಬೆಳೆದ ಸುಮಾರು 3 ಸಾವಿರ ರೈತರಿಗೆ ದಾಖಲೆಗಳ ಸಮಸ್ಯೆಯಿಂದ ಇನ್ನೂ ಪರಿಹಾರ ದೊರೆಯದೇ ಇರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಹೀಗಾಗಿ ರೈತರು ಬಜೆಟ್ನಲ್ಲಾದರೂ ವಿಶೇಷ ಅನುದಾನ ನೀಡುವ ಮೂಲಕ ಪರಿಹಾರ ನೀಡಿ ಎಂದು ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಮಾತನಾಡಿದ್ದು, ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆ ಸಾಕಷ್ಟು ಹಾನಿಯಾಗಿದೆ. ಪರಿಹಾರ ಕಡಿಮೆ ನೀಡಲಾಗಿದೆ ಎನ್ನುವ ದೂರು ಬಂದಿದೆ ಹೊರತು ಸರ್ಕಾರದಿಂದ ಪರಿಹಾರ ಕೊಡಿಸುವ ಬಗ್ಗೆ ಭರವಸೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಮೆಣಸಿನಕಾಯಿ ಬೆಳೆ ಬೆಳೆದು ಅನ್ನದಾತರು ಅತ್ತ ಪರಿಹಾರವೂ ಇಲ್ಲ. ಇತ್ತ ಬೆಳೆದ ಬೆಳೆಯೂ ಇಲ್ಲವೆಂದು ಕಣ್ಣೀರಿಡುತ್ತಿದ್ದಾರೆ. ಜೊತೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಸರಿಯಾಗಿ ಸರ್ವೆ ಮಾಡದೇ ರೈತರಿಗೆ ಬಿಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಂಡಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ. ಇನ್ನಾದರೂ ಈ ಸಮಸ್ಯೆಗೆ ಸರಿಯಾದ ಪರಿಹಾರ ಸಿಗಬೇಕಿದೆ.
ವರದಿ: ವೀರಪ್ಪ ದಾನಿ
ಇದನ್ನೂ ಓದಿ:
ಬಳ್ಳಾರಿ: ಚಿಲ್ಲಿ ದರ ದಿಢೀರ್ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಮೆಣಸಿನಕಾಯಿ ಬೆಳೆದ ರೈತರು
ಹೆಚ್ಚುವರಿ ಪರಿಹಾರದ ಮೊತ್ತ ಸಿಗದ ಕಾರಣ ಕಲಬುರಗಿಯ ರೈತರೊಬ್ಬರು ಜಿಲ್ಲಾಧಿಕಾರಿಗಳ ಕಾರನ್ನು ಜಪ್ತು ಮಾಡಿದರು!
Published On - 2:31 pm, Sat, 19 February 22