ಬಳ್ಳಾರಿ: ಚಿಲ್ಲಿ ದರ ದಿಢೀರ್ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಮೆಣಸಿನಕಾಯಿ ಬೆಳೆದ ರೈತರು

ಕಳೆದ ಕೆಲ ದಿನಗಳ ಹಿಂದೆ ಅಷ್ಟೇ ಮೆಣಸಿನಕಾಯಿ ದರ ಪ್ರತಿ ಕೆಜಿಗೆ 20 ರೂಪಾಯಿ ಇತ್ತು. ಆದರೆ ನಿನ್ನೆಯಿಂದ ಹಸಿ ಮೆಣಸಿನಕಾಯಿ ದರ 5 ರೂಪಾಯಿಗೆ ಕುಸಿದಿದೆ.

ಬಳ್ಳಾರಿ: ಚಿಲ್ಲಿ ದರ ದಿಢೀರ್ ಕುಸಿತ; ಸಂಕಷ್ಟಕ್ಕೆ ಸಿಲುಕಿದ ಮೆಣಸಿನಕಾಯಿ ಬೆಳೆದ ರೈತರು
ಚಿಲ್ಲಿ ದರ ದಿಢೀರ್ ಕುಸಿತ

ಬಳ್ಳಾರಿ: ಜಿಲ್ಲೆಯಲ್ಲಿ ಈ ವರ್ಷ ಮೆಣಸಿನಕಾಯಿ ಬೀಜಕ್ಕಾಗಿ ರೈತರು ಪರದಾಟ ನಡೆಸಿದ್ದರು. ಮೆಣಸಿನಕಾಯಿ ಬೀಜಕ್ಕೆ ಕೃತಕ ಅಭಾವ ಸೃಷ್ಟಿ ಆಗಿದ್ದರಿಂದ ದುಪ್ಪಟ್ಟು ದರಕ್ಕೆ ರೈತರು ಮೆಣಸಿನಕಾಯಿ ಬೀಜ ಖರೀದಿ ಮಾಡಬೇಕಾಯಿತು. ಬೀಜಕ್ಕಾಗಿ ನಿತ್ಯ ತೋಟಗಾರಿಕೆ ಇಲಾಖೆ ಕಚೇರಿ ಕಾಯಬೇಕಾದ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಇದೆಲ್ಲವನ್ನು ಸಹಿಸಿದ ರೈತರು ಫಸಲು ಉತ್ತಮವಾಗಿ ಬಂದು ಲಾಭ ಗಳಿಸಬಹುದು ಇದರಿಂದ ನಮ್ಮ ಕಷ್ಟ ದೂರವಾಗುತ್ತದೆ ಎಂದು ತಿಳಿದಿದ್ದರು. ಆದರೆ ಮೆಣಸಿನಕಾಯಿ ರೈತರ ಕಣ್ಣಲ್ಲಿ ನೀರು ತರಿಸಿದೆ. ಇದಕ್ಕೆ ಕಾರಣ ಹಸಿ ಮೆಣಸಿನಕಾಯಿ ದರ ದಿಢೀರ್ ಕುಸಿತ ಕಂಡಿದೆ.

ಬಳ್ಳಾರಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ದರ ದಿಢೀರ್ ಕುಸಿತ ಕಂಡಿರುವುದು ಮೆಣಸಿನಕಾಯಿ ಬೆಳೆದ ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದಷ್ಟೇ ಮೆಣಸಿನಕಾಯಿ ದರ ಪ್ರತಿ ಕೆಜಿಗೆ 20 ರೂಪಾಯಿ ಇತ್ತು. ಆದರೆ ನಿನ್ನೆಯಿಂದ ಹಸಿ ಮೆಣಸಿನಕಾಯಿ ದರ 5 ರೂಪಾಯಿಗೆ ಕುಸಿದಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ರತಿ ಕೆಜಿ ಮೆಣಸಿನಕಾಯಿಯನ್ನು 5 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ ಮೆಣಸಿನಕಾಯಿಗೆ 30-40 ರೂ. ಬೆಲೆ ಇತ್ತು. ಕಾರಣ ಫಸಲು ಆಷ್ಟೊಂದು ಇರಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ಲಾಭ ಬರುತ್ತದೆಂದು ರೈತರು ಹೆಚ್ಚಿನ ಪ್ರದೇಶದಲ್ಲಿ, ಮೆಣಸಿನಕಾಯಿ ಬೆಳೆದಿದ್ದು, ನಷ್ಟ ಎದುರಿಸುವಂತಾಗಿದೆ.

ವ್ಯಾಪಾರಿಗಳೇ 5 ರೂ. ಗೆ ಕೆಜಿ ಮೆಣಸಿನಕಾಯಿ ಮಾರಾಟ ಮಾಡುವಾಗ ಇನ್ನೂ ಎಪಿಎಂಸಿಗೆ ಮೆಣಸಿನಕಾಯಿ ಮಾರಾಟ ಮಾಡಲು ಬಂದ ರೈತರಿಗೆ ಪ್ರತಿ ಕೆಜಿಗೆ ಸಿಗುವುದು 2-3 ರೂ. ಮಾತ್ರ. ಇದರಿಂದಾಗಿ ತುಂಬಾ ನಷ್ಟ ಆಗುತ್ತಿದೆ ಎಂದು ಮೆಣಸಿನಕಾಯಿ ಬೆಳೆದ ರೈತ ಖಾಜಾ ಹುಸೇನ್ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಈ ದರಕ್ಕೆ ಮಾರಾಟವಾದರೆ ಮೆಣಸಿನಕಾಯಿಯನ್ನು ಕಿತ್ತ ಕೂಲಿ ಸಹ ರೈತನಿಗೆ ಸಿಗಲ್ಲ. ಕೂಲಿಕಾರರಿಗೆ 300 ರೂ. ನೀಡಬೇಕಿದೆ. ಕೂಲಿ ಕೊಟ್ಟು, ಚೀಲದಲ್ಲಿ ತುಂಬಿ, ಮಾರುಕಟ್ಟೆಗೆ ತಂದು, ಕಮೀಷನ್ ನೀಡಿದರೆ ರೈತ ಬರೀ ಕೈಯಿಂದ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿ ಎಕರೆ ಮೆಣಸಿನಕಾಯಿ ಬೆಳೆಯಲು ರೈತರು ಒಂದು ಲಕ್ಷ ಖರ್ಚು ಮಾಡಿದ್ದಾರೆ. ಆದರೆ ದರ ದಿಢೀರ್ ಕುಸಿತವಾಗಿದ್ದರಿಂದ ಹಾಕಿದ ಬಂಡವಾಳ ಕೂಡ ರೈತರಿಗೆ ಸಿಗದಂತಾಗಿದೆ. ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಸಿ ಮೆಣಸಿನಕಾಯಿ ಬಂದಿರುವ ಕಾರಣ ದರ ಕೂಡ ದಿಢೀರ್ ಅಂತಾ ಕುಸಿತವಾಗಿದೆ. ಇದರಿಂದಾಗಿ ತುಂಬಾ ನಷ್ಟವಾಗುತ್ತಿದೆ ಎಂದು ಮೆಣಸಿನಕಾಯಿ ವ್ಯಾಪಾರಸ್ಥರಾದ ರಾಮಾಂಜನೇಯ ತಿಳಿಸಿದ್ದಾರೆ.

ಈ ವರ್ಷ ಜಿಲ್ಲೆಯಲ್ಲಿ ಹತ್ತಿ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಜತೆಗೆ ನೆರೆಯ ಆಂಧ್ರದ ಗಡಿಭಾಗಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹಸಿ ಮೆಣಸಿನಕಾಯಿ ಬಳ್ಳಾರಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಬರುತ್ತಿದೆ. ಈ ಕಾರಣದಿಂದಾಗಿ ದರದಲ್ಲಿ ದಿಢೀರ್ ಕುಸಿತವಾಗಿ ಮೆಣಸಿನಕಾಯಿ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ವರದಿ: ಬಸವರಾಜ ಹರನಹಳ್ಳಿ

ಇದನ್ನೂ ಓದಿ:
ಯಾದಗಿರಿ ರೈತರಲ್ಲಿ ಹೆಚ್ಚಿದ ಆತಂಕ; ಗೋಡೌನ್​ನಲ್ಲಿ ಇಟ್ಟ ಸಾವಿರಾರು ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ ಹಾಳು

ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೀಜಕ್ಕಾಗಿ ಮುಂದುವರಿದ ರೈತರ ಪರದಾಟ; ತೋಟಗಾರಿಕೆ ಇಲಾಖೆ ಕಚೇರಿಗೆ ನುಗ್ಗಿ ಆಕ್ರೋಶ

 

Read Full Article

Click on your DTH Provider to Add TV9 Kannada