ಹೆಚ್ಚುವರಿ ಪರಿಹಾರದ ಮೊತ್ತ ಸಿಗದ ಕಾರಣ ಕಲಬುರಗಿಯ ರೈತರೊಬ್ಬರು ಜಿಲ್ಲಾಧಿಕಾರಿಗಳ ಕಾರನ್ನು ಜಪ್ತು ಮಾಡಿದರು!

ಹೆಚ್ಚುವರಿ ಪರಿಹಾರ ಮೊತ್ತಕ್ಕಾಗಿ ಕಾದು ಬೇಸತ್ತು ಹೋಗುವ ರೈತ ಕಲ್ಲಪ್ಪ ಕಲಬುರಗಿ ಜಿಲ್ಲಾ ಮೊದಲ ಹೆಚ್ಚುವರಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ವಿಚಾಚರಣೆ ನಡೆಸುವ ಕೋರ್ಟ್ ಕಲ್ಲಪ್ಪನವರಿಗೆ ಅನ್ಯಾಯವಾಗಿದೆ ಅನ್ನುವುದನ್ನು ಕಂಡುಕೊಂಡು ಕಲಬುರಗಿ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಿಕೊಳ್ಳುವಂತೆ ಆದೇಶ ನೀಡುತ್ತದೆ.

TV9kannada Web Team

| Edited By: Arun Belly

Feb 15, 2022 | 7:05 PM

ನಮ್ಮ ರಾಜ್ಯದಲ್ಲಿ ಹೀಗೂ ಅಗುವುದುಂಟು. ಸರ್ಕಾರದಿಂದ ಸಿಗಬೇಕಿದ್ದ ಪರಿಹಾರದ (compensation) ಮೊತ್ತ ದಶಕ ಕಳೆದರೂ ಸಿಗದ ಕಾರಣ ನ್ಯಾಯಾಲಯದ ಮೊರೆ ಹೋಗುವ ಒಬ್ಬ ರೈತನಿಗೆ ಜಿಲ್ಲಾಧಿಕಾರಿ (deputy commissioner) ಕಾರನ್ನು ಜಪ್ತಿ ಮಾಡಿಕೊಳ್ಳುವಂತೆ ಕೋರ್ಟ್ ಆದೇಶ ನೀಡುತ್ತದೆ. ನ್ಯಾಯಾಲಯದ ಆದೇಶದಂತೆ ರೈತ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕೆಎ 32 ಜಿ-9990 ಕಾರನ್ನು ಜಪ್ತು ಮಾಡುತ್ತಾರೆ. ಸ್ವಾರಸ್ಯಕರ ಘಟನೆ ನಡೆದಿರೋದು ಕಲಬುರಗಿಯಲ್ಲಿ (Kalburgi). ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆ ಅವರ 33 ಗಂಟೆ ಜಮೀನನ್ನು ಭೀಮಾ ಏತ ನೀರಾವರಿ ಯೋಜನೆಗಾಗಿ ಸರ್ಕಾರ 2010 ರಲ್ಲಿ ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ಪರಿಹಾರ ಧನ ರೂಪದಲ್ಲಿ ರೂ. 7,14,132 ಸಂದಾಯ ಮಾಡುತ್ತದೆ. ಅದರೆ, ಸ್ವಾಧಿನ ಪಡಿಸಿಕೊಂಡ ಜಮೀನಿನ ಬೆಲೆಗಿಂತ ಕಡಿಮೆ ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂಬ ಅಂಶವನ್ನು ಮನಗಾಣುವ ಕಲ್ಲಪ್ಪ ಹೆಚ್ಚುವರಿ ಹಣ ನೀಡಬೇಕೆಂದು ಸರ್ಕಾರಕ್ಕೆ ಮೊರೆ ಸಲ್ಲಿಸುತ್ತಾರೆ. ವರ್ಷಗಳೇ ಕಳೆಯುತ್ತವೆ ಆದರೆ ನ್ಯಾಯವಾಗಿ ದಕ್ಕಬೇಕಿದ್ದ ಮೊತ್ತ ಅವರ ಕೈ ಸೇರುವುದಿಲ್ಲ.

ಹೆಚ್ಚುವರಿ ಪರಿಹಾರ ಮೊತ್ತಕ್ಕಾಗಿ ಕಾದು ಬೇಸತ್ತು ಹೋಗುವ ರೈತ ಕಲ್ಲಪ್ಪ ಕಲಬುರಗಿ ಜಿಲ್ಲಾ ಮೊದಲ ಹೆಚ್ಚುವರಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ವಿಚಾಚರಣೆ ನಡೆಸುವ ಕೋರ್ಟ್ ಕಲ್ಲಪ್ಪನವರಿಗೆ ಅನ್ಯಾಯವಾಗಿದೆ ಅನ್ನುವುದನ್ನು ಕಂಡುಕೊಂಡು ಕಲಬುರಗಿ ಜಿಲ್ಲಾಧಿಕಾರಿಗಳ ಕಾರನ್ನು ಜಪ್ತಿ ಮಾಡಿಕೊಳ್ಳುವಂತೆ ಆದೇಶ ನೀಡುತ್ತದೆ.

ಕೋರ್ಟಿನ ಆದೇಶ ಪ್ರತಿಯನ್ನು ಹಿಡಿದುಕೊಂಡು ಕಲ್ಲಪ್ಪ ತಮ್ಮ ವಕೀಲರೊಂದಿಗೆ ಮಂಗಳವಾರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕಾರನ್ನು ಸೀಜ್ ಮಾಡುತ್ತಾರೆ. ಹೆಚ್ಚುವರಿ ಪರಿಹಾರದ ಮೊತ್ತ ಸಿಕ್ಕ ನಂತರವೇ ಅವರು ಕಾರನ್ನು ಬಿಟ್ಟುಕೊಡುತ್ತಾರೆ.
ಜೈ ಜವಾನ್ ಜೈ ಕಿಸಾನ್!

ಇದನ್ನೂ ಓದಿ:  ಡೆಲಿವರಿ ನೀಡಲು ಬಂದು ಆಭರಣ ಕದ್ದ ಮಹಿಳೆ; ಮರಳುವ ಮುನ್ನ ಹೇಳಿದ್ದೇನು ಗೊತ್ತಾ? ಇಲ್ಲಿದೆ ಸಿಸಿಟಿವಿ ವಿಡಿಯೋ

Follow us on

Click on your DTH Provider to Add TV9 Kannada