ಬಿಮ್ಸ್​ನಲ್ಲಿ 5 ಬಾಣಂತಿಯರ ಸಾವು ಪ್ರಕರಣ: ಸ್ಫೋಟಕ ಅಂಶ ಬಯಲು, ಪರಿಹಾರ ಘೋಷಿಸಿದ ಸರ್ಕಾರ

| Updated By: ವಿವೇಕ ಬಿರಾದಾರ

Updated on: Dec 06, 2024 | 10:20 AM

ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ IV ದ್ರಾವಣ ನೀಡಿದ ನಂತರ ಐದು ಬಾಣಂತಿಯರು ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಒಂಬತ್ತು ಬಾಣಂತಿಯರಿಗೆ ನವೆಂಬರ್ 9 ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಎರಡು ಗಂಟೆಯೊಳಗೆ ಅವರೆಲ್ಲರೂ ಅಸ್ವಸ್ಥರಾದರು. ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಬಿಮ್ಸ್​ನಲ್ಲಿ 5 ಬಾಣಂತಿಯರ ಸಾವು ಪ್ರಕರಣ: ಸ್ಫೋಟಕ ಅಂಶ ಬಯಲು, ಪರಿಹಾರ ಘೋಷಿಸಿದ ಸರ್ಕಾರ
ಬಿಮ್ಸ್​​
Follow us on

ಬಳ್ಳಾರಿ, ಡಿಸೆಂಬರ್​ 06: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ (BIMS) ಮೃತಪಟ್ಟ ಬಾಣಂತಿಯರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಒಂಬತ್ತೂ ಬಾಣಂತಿಯರಿಗೆ IV ದ್ರಾವಣ ನೀಡಲಾಗಿತ್ತು. IV ದ್ರಾವಣ ಪಡೆದ ಎರಡೇ ಗಂಟೆಯಲ್ಲಿ ಒಂಬತ್ತೂ ಬಾಣಂತಿಯರು ಅಸ್ವಸ್ಥರಾಗಿದ್ದರು ಎಂಬ ಸ್ಫೋಟಕ ಅಂಶ ಬಯಲಾಗಿದೆ. ಒಂಬತ್ತೂ ಗರ್ಭಿಣಿಯರಿಗೆ ನವೆಂಬರ್​ 09 ರಂದೇ ಸಿಸೇರಿಯನ್​ ಮೂಲಕ ಹೆರಿಗೆ ಮಾಡಲಾಗಿತ್ತು.

ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ಹೆರಿಗೆ ಮಾಡಲಾಗಿತ್ತು. ಇವರಲ್ಲಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.

ಹೆರಿಗೆ ಬಳಿಕ ಬಾಣಂತಿಯರಿಗೆ IV ದ್ರಾವಣ ನೀಡಲಾಗಿತ್ತು. ಈ ದ್ರಾವಣ ಹಾಕಿ ಎರಡೇ ಗಂಟೆಯಲ್ಲಿ ಬಾಣಂತಿಯರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಬಾಣಂತಿಯರು ಕಿಡ್ನಿ ಮತ್ತು ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದರು. ಕೂಡಲೇ ಇವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮ್ಸ್​ನಲ್ಲಿ ಪರೀಕ್ಷಿಸಿದಾಗ ಏಳು ಮಂದಿ ಬಾಣಂತಿಯರ ಪೈಕಿ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿತ್ತು.

ಇದನ್ನೂ ಓದಿ: ಬಿಮ್ಸ್​ನಲ್ಲಿ ಬಾಣಂತಿಯರ ಸಾವು: ತಡಿಹಿಡಿದಿದ್ದ ರಿಂಗರ್ ಲ್ಯಾಕ್ಟೇಟ್ ಮತ್ತೆ ಬಿಡುಗಡೆಯಾಗಿದ್ದು ಹೇಗೆ?

ಕಿಡ್ನಿ ವೈಫಲ್ಯ ಮತ್ತು ಇಲಿ ಜ್ವರದಿಂದ ಬಳಲುತ್ತಿದ್ದ ಮೃತ ಸುಮಯಾ ನವೆಂಬರ್​ 12ರಿಂದ ಇಲ್ಲಿಯವರೆಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ (ಡಿ.05) ಚಿಕಿತ್ಸೆ ಫಲಿಸದೆ ಸುಮಯಾ ಮೃತಪಟ್ಟಿದ್ದಾರೆ. ಮೃತ ಬಾಣಂತಿಯರೆಲ್ಲರೂ 25 ವರ್ಷದೊಳಗಿನವರು ಎಂಬ ಅಂಶ ತಿಳಿದುಬಂದಿದೆ.

ಮೃತ ಬಾಣಂತಿಯರ ಕುಟುಂಬಕ್ಕೆ ಪರಿಹಾರ

ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅಲ್ಲಿ ಏನೆಲ್ಲಾ ನ್ಯೂನತೆಗಳಾಗಿವೆ ಅಂತ ನಾವು ತನಿಖೆ ಮಾಡುತ್ತಿದ್ದೇವೆ. ನಮಗೆ ಗೊತ್ತಾಗದೇ ಇನ್ನೆಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ ಗೊತ್ತಿಲ್ಲ. ಔಷಧಿ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:10 am, Fri, 6 December 24