ಬಿಮ್ಸ್ನಲ್ಲಿ ಬಾಣಂತಿಯರ ಸಾವು: ತಡಿಹಿಡಿದಿದ್ದ ರಿಂಗರ್ ಲ್ಯಾಕ್ಟೇಟ್ ಮತ್ತೆ ಬಿಡುಗಡೆಯಾಗಿದ್ದು ಹೇಗೆ?
ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಕರ್ನಾಟಕ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ಮಾಡುತ್ತಿವೆ. ಬಾಣಂತಿಯರಿಗೆ ನೀಡಿದ್ದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಸಲು ಯೋಗ್ಯವಲ್ಲವೆಂದು ಲ್ಯಾಬ್ ವರದಿ ನೀಡಿದ ಬಳಿಕವೂ ವೈದ್ಯರು ಬಳಸಿದ್ದು ಏಕೆ? ಇಲ್ಲಿದೆ ಉತ್ತರ
ಬೆಂಗಳೂರು, ಡಿಸೆಂಬರ್ 01: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆ (BIMS)ಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಬಾಣಂತಿಯರಿಗೆ ನೀಡಿದ್ದ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಸಲು ಯೋಗ್ಯವಲ್ಲವೆಂದು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ವರದಿ ನೀಡಿದ ಬಳಿಕವೂ ವೈದ್ಯರು ಬಳಸಿದ್ದು ಯಾಕೆ ಎಂಬ ಪ್ರಶ್ನೆ ಹುಟ್ಟು ಹಾಕಿದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಐವಿ ದ್ರಾವಣ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪಶ್ಚಿಮ ಬಂಗಾಳದ M/s Paschim Banga Pharmaceutical, (Farista Vanijya) ಕಂಪನಿ ತಯಾರಿಸಿ ರಾಜ್ಯಕ್ಕೆ ಪೂರೈಸಿದೆ. ಕಂಪನಿ ಒಟ್ಟು 192 ಬ್ಯಾಚ್ಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪೂರೈಸಿತ್ತು. ಪೂರೈಕೆಯಾದ 192 ಬ್ಯಾಚ್ಗಳಲ್ಲಿ 22 ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ಹೌಸಿಂಗ್ ಐದು ತಿಂಗಳ ಹಿಂದೆಯೇ ಪರೀಕ್ಷೆಗೆ ಒಳಪಡಿಸಿದೆ. ಆಗ, ಈ ದ್ರಾವಣ ಉತ್ತಮ ಗುಣಮಟ್ಟ ಹೊಂದಿಲ್ಲ ಎಂದು ವರದಿ ನೀಡಿದೆ.
ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಮರಣ: ಸರ್ಕಾರಿ ಕೆಲಸ ಸಿಕ್ಕ ಖುಷಿಯಲ್ಲಿದ್ದ ನಂದಿನಿ ಸಾವು, ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಅಮಾಯಕ ಜೀವ
ಕೂಡಲೆ ಆರೋಗ್ಯ ಇಲಾಖೆ ಈ ದ್ರಾವಣವನ್ನು ಬಳಸದಂತೆ ಸುತ್ತೋಲೆ ಹೊರಡಿಸಿದೆ. ಮತ್ತು 192 ಬ್ಯಾಚ್ಗಳನ್ನು ತಡೆ ಹಿಡಿದು, ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು.
ಕೋರ್ಟ್ ಮೆಟ್ಟಿಲೇರಿದ ಕಂಪನಿ
ಕಪ್ಪು ಪಟ್ಟಿಗೆ ಸೇರಿಸುತ್ತಿದ್ದಂತೆ, M/s Paschim Banga Pharmaceutical, (Farista Vanijya) ಕಂಪನಿ ಚಿತ್ರದುರ್ಗದ ಜೆಎಂಎಫ್ಸಿ ನ್ಯಾಯಾಲಯದ ಮೆಟ್ಟಿಲು ಏರುತ್ತದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಸೆಂಟ್ರಲ್ ಡ್ರಗ್ ಲ್ಯಾಬ್ (CDL) ದ್ರಾವಣ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಬಳಕೆಗೆ ಯೋಗ್ಯವಾಗಿದೆ ಎಂದು ನೀಡಿರುವ ವರದಿಯಲ್ಲಿ ಕಂಪನಿ ಸಲ್ಲಿಸುತ್ತದೆ.
ನಂತರ ಆಗಿದ್ದೇನು?
ಅಲ್ಲದೆ, ಇದೇ ವರದಿಯನ್ನು ಕಂಪನಿ ಕರ್ನಾಟಕ ಔಷಧ ನಿಗಮದ ಮುಂದಿಟ್ಟಿತು. ಕೇಂದ್ರ ಸರ್ಕಾರದ ಸೆಂಟ್ರಲ್ ಡ್ರಗ್ ಲ್ಯಾಬ್ನ ಸಕಾರಾತ್ಮಕ (ಪಾಸಿಟಿವ್) ವರದಿ ನೀಡಿದ ಮೇಲೆ ರಾಜ್ಯ ಔಷಧಿ ಸರಬರಾಜು ನಿಗಮ ನಿರಾಕರಿಸುವಂತಿರಲಿಲ್ಲ. ಬಳಿಕ, ಟೆಂಡರ್ ನಿಯಮದ ಪ್ರಕಾರ ಕಂಪನಿಯ ಐವಿ ರಿಂಗರ್ ಲ್ಯಾಕ್ಟೇಟ್ ಬಳಸಲು ಅನಿವಾರ್ಯ ಪರಿಸ್ಥಿತಿ ಎದುರಾಯ್ತು. ಆದರೂ, ಮುಂಜಾಗ್ರತೆ ದೃಷ್ಟಿಯಿಂದ ನೆಗೆಟಿವ್ ರಿಪೋರ್ಟ್ ಇದ್ದ 22 ಬ್ಯಾಚ್ಗಳನ್ನ ಬಿಟ್ಟು ಉಳಿದ ಕೆಲವು ಬ್ಯಾಚ್ಗಳ ದ್ರಾವಣವನ್ನ ಔಷಧಿ ಸರಬರಾಜು ನಿಗಮ ಆಸ್ಪತ್ರೆಗಳಿಗೆ ಪೂರೈಸಿತ್ತು.
ಬಳಿಕ, ಐವಿ ರಿಂಗರ್ ಲ್ಯಾಕ್ಟೇಟ್ ಅನ್ನು ಬಿಮ್ಸ್ಗೆ ದಾಖಲಾಗಿದ್ದ ಏಳು ಮಂದಿ ಬಾಣಂತಿಯರಿಗೆ ನೀಡಲಾಗಿದೆ. ಇದರಿಂದ ರಿಯಾಕ್ಷನ್ ಆಗಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಗ್ಗ ಜಗ್ಗಾಟಕ್ಕೆ ನಾಲ್ವರು ಬಾಣಂತಿಯರು ಕೊನೆಯುಸಿರು ಎಳೆದರು.
ಕೇಂದ್ರ ಸರ್ಕಾರಕ್ಕೆ ಪತ್ರ
ಸೆಂಟ್ರಲ್ ಡ್ರಗ್ ಲ್ಯಾಬ್ ವರದಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಿಂತನೆ ನಡೆಸಿದ್ದಾರೆ. ಸೆಂಟ್ರಲ್ ಡ್ರಗ್ ಲ್ಯಾಬ್ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕು. ಮತ್ತು ಫಾರ್ಮಾಸಿಟಿಕಲ್ ಕಂಪನಿಗಳ ವಿಚಾರದಲ್ಲಿ ಕಾನೂನುಗಳನ್ನ ಬಿಗಿಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿರುವ ಐವಿ ದ್ರಾವಣ ರಿಂಗರ್ ಲ್ಯಾಕ್ಟೇಟ್ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 am, Sun, 1 December 24