
ಬಳ್ಳಾರಿ, ಜನವರಿ 09: ಜಿಲ್ಲೆಯಲ್ಲಿ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದ ಗಲಭೆ ಪ್ರಕರಣ ದಿನೇದಿನೇ ತಿರುವು ಪಡೆದುಕೊಳ್ಳುತ್ತಿದ್ದು, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಭೆಗೆ ಪೊಲೀಸ್ ಅಧಿಕಾರಿಗಳೇ ನೇರ ಕಾರಣ ಎಂದು ಆರೋಪಿಸಿ, ಬಳ್ಳಾರಿ ASP ರವಿಕುಮಾರ್, DSP ಚಂದ್ರಕಾಂತ ನಂದರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ರೆಡ್ಡಿ ದೂರು ಸಲ್ಲಿಸಿದ್ದರು.
ಜನವರಿ 1ರಂದು ತಮ್ಮ ನಿವಾಸದ ಬಳಿ ಬ್ಯಾನರ್ ಹಾಕುವ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತ ಹಾಗೂ ಗುಂಡಿನ ದಾಳಿ ನಡೆದಿರುವುದಾಗಿ ರೆಡ್ಡಿ ಆರೋಪಿಸಿದ್ದಾರೆ. ಈ ಘಟನೆಯಲ್ಲಿ ತಮ್ಮನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಜನವರಿ 6ರಂದು ಮೂವರ ವಿರುದ್ಧ ನೀಡಿದ ದೂರಿಗೆ ಪೊಲೀಸರು FIR ದಾಖಲಿಸದೇ ಹಿಂಬರಹ ನೀಡಿರುವುದಕ್ಕೆ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ನೀಡಿದ ದೂರು ಬೇರೆ, ಪೊಲೀಸರು ಕೊಟ್ಟ ಹಿಂಬರಹ ಬೇರೆ. ಸ್ಪಷ್ಟವಾಗಿ ಆರೋಪಿಗಳ ವಿರುದ್ಧ ಕೇಸ್ ಮಾಡಬೇಕಾದರೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರೆಡ್ಡಿ ಕಿಡಿಕಾರಿದ್ದಾರೆ. ಈ ಕುರಿತು ಹಿಂಬರಹ ನೀಡಿರುವ ಪೊಲೀಸರು, ಇದೇ ಘಟನೆಗೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೊಸ ದೂರನ್ನು ಮುಂದುವರೆದ ಮಾಹಿತಿ ಎಂದು ಪರಿಗಣಿಸಿ ತನಿಖೆಗೆ ಸೇರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ
ಆದರೆ ಅಧಿಕಾರಿಗಳು ಮತ್ತು ರಾಜಕೀಯ ಒತ್ತಡದಿಂದ ಹಾದಿ ತಪ್ಪಿಸಲಾಗುತ್ತಿದೆ ಎಂದು ಗಾಲಿ ಜನಾರ್ದನ ರೆಡ್ಡಿ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣ ಬಳ್ಳಾರಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.