ಬಳ್ಳಾರಿ: ಪಡಿತರದಾರರಿಗೆ ನೀಡುವ ಜೋಳಕ್ಕೆ ಹುಳ, ದುರ್ವಾಸನೆ! ಈಗ ವಿತರಿಸಲು ಮುಂದಾದ ಸರ್ಕಾರ
ಬಳ್ಳಾರಿಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಖರೀದಿಸಿದ ಕ್ವಿಂಟಾಲ್ ಗಟ್ಟಲೆ ಜೋಳ ಗೋದಾಮಿನಲ್ಲಿ ಕೊಳೆಯುತ್ತಿದೆ. ಒಂದು ವರ್ಷದಿಂದ ಬಡವರಿಗೆ ವಿತರಿಸದ ಕಾರಣ ಜೋಳ ಹುಳುಬಿದ್ದು ಹಾಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾಗಿರುವ ಈ ನಷ್ಟಕ್ಕೆ ಸರ್ಕಾರ ಹಾಗೂ ಅಧಿಕಾರಿಗಳು ಹೊಣೆ ಎಂದು ಲೋಕಾಯುಕ್ತ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ತೆರಿಗೆ ಹಣ ವ್ಯರ್ಥವಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿ, ಜನವರಿ 20: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಸಾವಿರಾರು ಕ್ವಿಂಟಲ್ ಜೋಳವನ್ನು (Corn) ಖರೀದಿಸಿ, ಗೊದಾಮಿನಲ್ಲಿ ಸರ್ಕಾರ (Karnataka Government) ದಾಸ್ತಾನು ಮಾಡುತ್ತಿದೆ. ಆದರೆ, ದಾಸ್ತಾನು ಮಾಡಿದ ಜೋಳವನ್ನು ಒಂದು ವರ್ಷವಾದರೂ ವಿತರಿಸಿಲ್ಲ. ಇದರಿಂದ ಜೋಳ ಗೋದಾಮಿನಲ್ಲೇ ಕೊಳೆಯುತ್ತಿದ್ದು, ಹುಳಗಳು ತಿನ್ನುತ್ತಿವೆ. ಹುಳಗಳು ತಿನ್ನುತ್ತಿರುವ ಜೋಳವನ್ನು ವಿತರಣೆ ಮಾಡಲು ಸರ್ಕಾರ ಮುಂದಾಗಿದೆ.
ಬಳ್ಳಾರಿಯಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ರಾಜ್ಯ ಸರ್ಕಾರ ಬಡವರಿಗೆ ನೀಡಲೆಂದು ಸಂಗ್ರಹಿಸಿದ ಸುಮಾರು 40 ಕ್ವಿಂಟಲ್ ಜೋಳ ಸಂಗ್ರಹಿಸಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜೋಳವನ್ನು ಸಂಗ್ರಹಿಸಿ ಒಂದು ವರ್ಷ ಕಳೆದಿದೆ. ಆದರೆ ಇನ್ನೂವರೆಗೂ ಬಡ ಜನರಿಗೆ ವಿತರಣೆಯಾಗಿಲ್ಲ. ಖರೀದಿ ಮಾಡಿದ 3-4 ತಿಂಗಳಲ್ಲಿ ಜೋಳ ವಿತರಣೆ ಮಾಡಿದ್ದರೇ, ಹುಳು ಬೀಳುತ್ತಿರಲಿಲ್ಲ. ಸಂಗ್ರಹ ಮಾಡಿ ಒಂದು ವರ್ಷ ಕಳೆದಿರುವುದರಿಂದ ಜೋಳದ ದಾಸ್ತಾನಿನಲ್ಲಿ ಹುಳು ಬಿದ್ದಿವೆ.
ಈ ಬಗ್ಗೆ ಗೋದಾಮಿನ ವ್ಯವಸ್ಥಾಪಕರು ಮಾತನಾಡಿ, ನಮಗೆ ಸರ್ಕಾರದಿಂದ ರಿಲೀಸಿಂಗ್ ಆರ್ಡರ್ ಬಂದಿಲ್ಲ. ಇನ್ನು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಗೋದಾಮಿ ಮೇಲೆ ಏಕಾಏಕಿ ದಾಳಿ ಮಾಡಿದ ಉಪಲೋಕಾಯುಕ್ತ ಬಿ. ವೀರಪ್ಪ, “ಬಡವರು ತಿನ್ನುವ ಜೋಳಕ್ಕೆ ಹುಳು ಬಿದ್ದು ಗಬ್ಬೆದ್ದು ನಾರುತ್ತಿದೆ. ಇದನ್ನು ನಾಯಿಯೂ ತಿನ್ನುವುದಿಲ್ಲ. ಇದಕ್ಕೆ ಒರ್ವ ಅಧಿಕಾರಿ ಮಾತ್ರವಲ್ಲ, ಸಚಿವರು ಹಾಗೂ ಸರ್ಕಾರ ಎಲ್ಲರೂ ಹೊಣೆಗಾರರು. ನಾಗರಿಕ ಸಮಾಜ ತಲೆಗಿಸುವಂತಾಗಿದೆ. ನಿರ್ಲಕ್ಷ್ಯ ಮಾಡಿದವ ಮೇಲೆ ಕ್ರಮ ಆಗಲೇಬೇಕು” ಎಂದು ಗರಂ ಆದರು.
ಇದನ್ನೂ ಓದಿ: ಈ ವರ್ಷವೂ 5 ಕೆಜಿ ಉಚಿತ ಪಡಿತರ ಮುಂದುವರಿಸಿದ ಸಚಿವೆ ನಿರ್ಮಲಾ: 3 ತಿಂಗಳಿಗೆ ಚುನಾವಣೆ, ಕೇಂದ್ರ ಸರ್ಕಾರದ ಲೆಕ್ಕಾಚಾರವೇನು?
“ಬಡವರಿಗೆ ನೀಡಬೇಕಿದ್ದ ಜೋಳ ಹೀಗೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾನಿಯಾದರೆ ಹೇಗೆ? ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ಕೊಟ್ಟು ಜೋಳ ಖರೀದಿ ಮಾಡಿದೆ. ಆ ಹಣವೂ ಕೂಡ ಜನರ ತೆರಿಗೆಯಿಂದಲೇ ಸಂಗ್ರಹವಾಗಿದೆ. ಹೀಗಿರುವಾಗ ಅದನ್ನು ಜನರಿಗೆ ವಿತರಣೆ ಮಾಡಬೇಕಲ್ಲ. ವಿತರಣೆ ಮಾಡದೆ ಸರ್ಕಾರ, ಅಧಿಕಾರಿಗಳ ವರ್ಗ ನಿರ್ಲಕ್ಷ್ಯ ಮಾಡಿದೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದಿದ್ದಾರೆ.
ಒಂದು ತುತ್ತು ಅನ್ನಕ್ಕೂ ಗತಿ ಇಲ್ಲದೆ ಅದೆಷ್ಟೋ ಮಂದಿ ನೀರು ಕುಡಿದು ಬಿದಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಂತವರ ನಡುವೆ ಇಷ್ಟು ದೊಡ್ಡ ಪ್ರಮಾಣದ ಜೋಳಕ್ಕೆ ಹುಳು ಬಿಳುವವರೆಗೂ ಸುಮ್ಮನಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಇನ್ನಾದರು ಸರ್ಕಾರ ಎಚ್ಚೆತ್ತು ಮತ್ತೊಮ್ಮೆ ಹೀಗಾಗದಂತೆ ತಡಗಟ್ಟಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Mon, 20 January 25