ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಸರ್ಕಾರದ ವಿರುದ್ಧ ಗುಡುಗಿದ ಕೇಸರಿ ಪಡೆ

ಬಳ್ಳಾರಿ ಗಲಭೆಯನ್ನು ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು, ಭರತ್ ರೆಡ್ಡಿ ಬಂಧನಕ್ಕೆ ಆಗ್ರಹಿಸಿದ್ದಾರೆ. ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ಕುಟುಂಬಕ್ಕೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ 10 ಲಕ್ಷ ರೂ ಪರಿಹಾರ ನೀಡಿದರು.

ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ: ಸರ್ಕಾರದ ವಿರುದ್ಧ ಗುಡುಗಿದ ಕೇಸರಿ ಪಡೆ
ಬಿಜೆಪಿ ಪ್ರತಿಭಟನಾ ಸಮಾವೇಶ

Updated on: Jan 17, 2026 | 8:46 PM

ಬಳ್ಳಾರಿ, ಜನವರಿ 17: ಬಳ್ಳಾರಿ ಗಲಭೆಯನ್ನ (Ballari riots) ಖಂಡಿಸಿ ಇಂದು ಬಿಜೆಪಿ (bjp) ಬೃಹತ್ ಪ್ರತಿಭಟನೆ ಮಾಡಿತು. ಸಮಾವೇಶದ ಮೂಲಕ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ಬಾಣ ಬಿಟ್ಟಿದ್ದಾರೆ. ನಿಮ್ಮ ಗುಂಡೇಟಿಗೆ ನಾವು ಹೆದರಲ್ಲ ಅಂತಾ ಸಂದೇಶ ಕೊಟ್ಟಿದ್ದಾರೆ. ಇನ್ನು ಕಾಂಗ್ರೆಸ್ ಯಥಾಪ್ರಕಾರ, ಗಲಭೆಗೆ ಬಿಜೆಪಿಯೇ ಕಾರಣ ಅಂತಿದೆ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬಳ್ಳಾರಿ ಸಮರ ಸಾರಿದೆ. ಜನವರಿ 1ರ ಗಲಭೆ ಖಂಡಿಸಿ ಕದನಕ್ಕಿಳಿದಿದೆ. ಇದರ ಭಾಗವಾಗಿ ಇವತ್ತು ಗಣಿನಾಡಿನಲ್ಲಿ ಕೇಸರಿ ಕಲಿಗಳು ಬೃಹತ್ ಸಮಾವೇಶ ನಡೆಸಿದ್ದಾರೆ. APMC ಯಾರ್ಡ್ ಮೈದಾನದಲ್ಲಿ ನಡೆದ ಈ ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾದ್ದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್​.ಅಶೋಕ್, ಛಲವಾದಿ ನಾರಾಯಸ್ವಾಮಿ, ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾದ್ರು. ಸರ್ಕಾರದ ನಡೆಯನ್ನೇ ಖಂಡಿಸಿದ್ದಾರೆ.

ಭರತ್ ರೆಡ್ಡಿಯನ್ನ ಅರೆಸ್ಟ್ ಮಾಡಲು ಪೊಲೀಸರಿಗೆ ಆಗುವುದಿಲ್ಲವೆ? ಶ್ರೀರಾಮುಲು ಪ್ರಶ್ನೆ

ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಭರತ್ ರೆಡ್ಡಿ ಸಣ್ಣ ವಯಸ್ಸಿನಲ್ಲಿ ಶಾಸಕನಾಗಿ ದರ್ಪ‌‌ ತೋರಿಸುತ್ತಿದ್ದಾರೆ. ನಮ್ಮ ರಕ್ಷಣೆಗಾಗಿ ನಾವು ಈ ಸಮಾವೇಶ ಮಾಡುತ್ತಿಲ್ಲ, ಕಲ್ಯಾಣ ಕರ್ನಾಟಕ ಭಾಗರ ಜನರ ರಕ್ಷಣೆಗಾಗಿ ಸಮಾವೇಶ ಮಾಡಿದ್ದೇವೆ. ‌ನಾನಾಗಲೀ, ಜನಾರ್ದನ ರೆಡ್ಡಿ ಶಾಸಕರಾಗಿದ್ದಾಗ ಈ ರೀತಿ ನಡೆದುಕೊಂಡಿದ್ದೇವಾ? ನಿಮ್ಮಲ್ಲರ ಆಶೀರ್ವಾದದಿಂದ ಇಂದು ಜನಾರ್ದನ ರೆಡ್ಡಿಗೆ ಅನಾಹುತ ತಪ್ಪಿದೆ ಎಂದರು.

ಇದನ್ನೂ ಓದಿ: ಬ್ಯಾನರ್​​ ಗಲಭೆ: ನಾಳೆ ಬಳ್ಳಾರಿಗೆ ಬಿಜೆಪಿ ನಾಯಕರ ದಂಡು; ಮದ್ಯ ಮಾರಾಟ ಬ್ಯಾನ್

ಭರತ್ ರೆಡ್ಡಿ ನೀನು ಪಾತಾಳದಲ್ಲಿ ಅಡಗಿಕೊಂಡಿದ್ದರು ಬಿಡುವುದಿಲ್ಲ. ಅಂದು ಎಲ್ಲಿ ತಪ್ಪಿಸಿಕೊಳ್ಳುತ್ತೀಯಾ, ನಿನ್ನ ಯಾರು ರಕ್ಷಣೆ ಮಾಡುತ್ತಾರೆ ಅಂತಾ ನಾನೂ ನೋಡುತ್ತೇನೆ. ಭರತ್ ರೆಡ್ಡಿಯನ್ನು ಅರೆಸ್ಟ್ ಮಾಡಲು ಪೊಲೀಸರಿಗೆ ಆಗುವುದಿಲ್ಲವೆ? ಪೊಲೀಸರೇ ನೀವೇನು ಮಾಡುತ್ತಿದ್ದೀರಿ? ನಿಮಗೂ ಪಾಲು ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಶ್ರೀರಾಮುಲು, ಶಾಸಕ ಭರತ್ ರೆಡ್ಡಿ ಅವರನ್ನ ಬಂಧಿಸದ ಪೊಲೀಸರ ಸಾಮರ್ಥ್ಯ ಪ್ರಶ್ನಿಸಿದರೆ, ಮತ್ತೊಂದ್ಕಡೆ ಗಣಿದಣಿ ಜನಾರ್ದನ ರೆಡ್ಡಿ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್​ನ ಕಿತ್ತೊಗೆಯುವ ಶಪಥ ಮಾಡಿದ್ದಾರೆ. ಇಷ್ಟು ಮಾತ್ರವಲ್ಲ. ಉಳಿದ ಬಿಜೆಪಿ ನಾಯಕರು ಕೂಡ, ಕಾಂಗ್ರೆಸ್​ನ ಗುಂಡೇಟಿಗಿಂತ ನಮ್ಮ ಎದೆ ಗಟ್ಟಿ ಅಂತಾ ಭಾಷಣ ಮಾಡಿದ್ದಾರೆ.

ಮೃತ ರಾಜಶೇಖರ್ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ

ಬೃಹತ್ ಸಮಾವೇಶಕ್ಕೆ ಮುನ್ನ ಬಿಜೆಪಿ ನಾಯಕರು ಮೃತ ರಾಜಶೇಖರ್​ನ ಮನೆಗೆ ಭೇಟಿ ಕೊಟ್ರು. ಮೃತನ ತಾಯಿಗೆ ಸಾಂತ್ವಾನ ಹೇಳಿದ್ರು. ಬಳಿಕ ಜನಾರ್ಧನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, 10 ಲಕ್ಷ ರೂ ಪರಿಹಾರ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಗಲಭೆಯ ಹೊಣೆಗಾರಿಕೆಯನ್ನ ಬಿಜೆಪಿ ಕಡೆಗೆ ತಿರುಗಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: ರೆಡ್ಡಿ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್, ದೆಹಲಿಯಿಂದ ಬಂತು ಮಹತ್ವದ ಸೂಚನೆ

ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿ ಬೃಹತ್ ಹೋರಾಟ ರೂಪಿಸಿದೆ. ಗಣಿನಾಡಿನಲ್ಲಿ ನಿಂತು ಸರ್ಕಾರ ಹಾಗೂ ಸ್ಥಳೀಯ ಶಾಸಕರಿಗೆ ಎಚ್ಚರಿಕೆ ರವಾನಿಸಿರೋದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.