ಆಟೋದಲ್ಲಿ ಬ್ಯಾಗ್ ಮರೆತುಹೋದ ಚೆನ್ನೈ ಮಹಿಳೆ.. ಆಟೋ ಪತ್ತೆ ಹಚ್ಚಿ, ಚಿನ್ನಾಭರಣದ ಬ್ಯಾಗ್ ಮಾಲೀಕರಿಗೆ ಹಸ್ತಾಂತರಿಸಿದ ಬ್ರೂಸ್ಪೇಟೆ ಪೊಲೀಸರು
ಬ್ರೂಸ್ಪೇಟೆ ಇನ್‌ಸ್ಪೆಕ್ಟರ್ ಸಿಂಧೂರ ತಂಡ ಜಿಲ್ಲಾ ಕಂಟ್ರೋಲ್ ರೂಂನ ಸಿಸಿ ಕ್ಯಾಮೆರಾಗಳ ಸಹಾಯದಿಂದ ಬಳ್ಳಾರಿ ತಾಲ್ಲೂಕಿನ ಗೋಟೂರು ಗ್ರಾಮದ ಮಲ್ಲಿಕಾರ್ಜುನಗೆ ಆಟೋ ಸೇರಿದ್ದು ಎಂದು ಪತ್ತೆ ಹಚ್ಚಿದರು. ಚಾಲಕನಿಂದ ಚಿನ್ನಾಭರಣ ಬ್ಯಾಗ್ ವಶಪಡಿಸಿಕೊಂಡು ಅಖಿಲಾಗೆ ಮರಳಿಸಿದ್ದಾರೆ.
ಬಳ್ಳಾರಿ: ಆಟೋದಲ್ಲಿ ಮಹಿಳೆಯೊಬ್ಬರು ಮರೆತುಹೋಗಿದ್ದ ನಗದು, ಚಿನ್ನಾಭರಣವಿದ್ದ (Gold Jewellery) ಬ್ಯಾಗನ್ನು ಪತ್ತೆ ಹಚ್ಚಿ ಮರಳಿ ಮಾಲೀಕರಿಗೆ ಕೊಡಿಸುವಲ್ಲಿ ಬಳ್ಳಾರಿ ಪೊಲೀಸರು (Bellary Police) ಯಶಸ್ವಿಯಾಗಿದ್ದಾರೆ. ಸಂಬಂಧಿಕರ ಮದುವೆಗೆ ಬಳ್ಳಾರಿಗೆ ಬಂದಿದ್ದ ಚೆನ್ನೈ ಮೂಲದ ಅಖಿಲಾ (Chennai Woman) ಎಂಬುವವರು ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗನ್ನು ಜುಲೈ 8 ರಂದು ಆಟೋ ರಿಕ್ಷಾದಲ್ಲಿ (Auto Rickshaw) ಬಿಟ್ಟು ಹೋಗಿದ್ದರು.
ತಾವು ಉಳಿದುಕೊಂಡಿದ್ದ ವಸತಿ ಗೃಹದಿಂದ ಕೆ.ಅರ್.ಎಸ್ ಫಂಕ್ಷನ್ ಹಾಲ್‌ಗೆ ಜುಲೈ 8 ರಂದು ಸಂಜೆ 7ಕ್ಕೆ ಆಟೋದಲ್ಲಿ ತೆರಳಿದ್ದ ಮಹಿಳೆಯು 200 ಗ್ರಾಂ ತೂಕದ ಬಂಗಾರದ ಆಭರಣಗಳು, ಬೆಳ್ಳಿ ವಸ್ತುಗಳು ಮತ್ತು 15,000 ನಗದು ಇದ್ದ ಬ್ಯಾಗ್‌ನ್ನು ಮರೆತು ಹೋಗಿದ್ದರು.
ಈ ಬ್ಯಾಗ್ ಪತ್ತೆ ಹಚ್ಚಿ ಕೊಡುವಂತೆ ಬ್ರೂಸ್ಪೇಟೆ ಪೊಲೀಸ್ ಠಾಣೆ ಪೊಲೀಸರ ಮೊರೆ ಹೋಗಿದ್ದರು. ಇನ್‌ಸ್ಪೆಕ್ಟರ್ ಎಂ.ಎನ್. ಸಿಂಧೂರ ನೇತೃತ್ವದ ತಂಡ ಜಿಲ್ಲಾ ಕಂಟ್ರೋಲ್ ರೂಂನ ಸಿಸಿ ಕ್ಯಾಮೆರಾಗಳ ಸಹಾಯದಿಂದ ಆಟೋ ಪತ್ತೆ ಮಾಡಿದರು.
ಬಳ್ಳಾರಿ ತಾಲ್ಲೂಕಿನ ಗೋಟೂರು ಗ್ರಾಮದ ಮಲ್ಲಿಕಾರ್ಜುನ ಅವರಿಗೆ ಆಟೋ ಸೇರಿದ್ದು ಎಂದು ಪತ್ತೆ ಹಚ್ಚಿದರು. ಚಾಲಕನಿಂದ ಚಿನ್ನಾಭರಣ ಹಾಗೂ ನಗದು ಇದ್ದ ಬ್ಯಾಗ್ ವಶಪಡಿಸಿಕೊಂಡು ಅಖಿಲಾ ಅವರಿಗೆ ಮರಳಿ ನೀಡಿದ್ದಾರೆ.
ಸಿಂಧೂರ, ಅಪರಾಧ ವಿಭಾಗದ ಹೆಚ್.ಸಿ. ಉಮೇಶ್ ರೆಡ್ಡಿ, ಪಿ.ಸಿ. ಹೆಚ್. ರಾಮಲಿಂಗ, ಪಿ.ಸಿ. ಶಿವರಾಜ ಕುಮಾರ್, ಪಿ.ಸಿ. ರಾಮಾಂಜಿನಿ ಅವರ ತಂಡವನ್ನು ಎಸ್.ಪಿ. ರಂಜಿತ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Mon, 10 July 23