ಬಳ್ಳಾರಿ, (ಅಕ್ಟೋಬರ್ 14): ಶೀಘ್ರದಲ್ಲೇ ಉಪ ಚುನಾವಣೆಗೆ ಸಾಕ್ಷಿಯಾಗಲಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಬಂಪರ್ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದೆ. ಕುಡಿಯುವ ನೀರು, ಸೂಪರ್ ಮಲ್ಟಿ ಸ್ಪೆಷಾಲಿಟಿ , ವಿವಿಧ ಜಾತಿಗಳ ಸಮುದಾಯ ಭವನ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಇಂದು(ಅಕ್ಟೋಬರ್ 14) ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಘೋಷಿಸಿದ್ದಾರೆ.
ಈ ಎಲ್ಲಾ ಯೋಜೆನಗಳನ್ನು ಘೋಷಿಸಿ ಮಾತನಾಡಿದ ಸಿಎಂ, ಸಂಡೂರಿನಲ್ಲಿ 12 ಸಾವಿರ ಮನೆಗಳನ್ನು ಕಟ್ಟಿ ಕ್ಷೇತ್ರದ ಜನರಿಗೆ ಹಂಚಿಕೆ ಮಾಡಿರುವುದರ ಶ್ರೇಯಸ್ಸು ಸಂತೋಷ್ ಲಾಡ್- ಈ.ತುಕಾರಾಮ್ ಜೋಡಿಗೆ ಸಲ್ಲಬೇಕು. ನನ್ನ ವಿರುದ್ಧ ಷಡ್ಯಂತ್ರ, ಪಿತೂರಿ ನಡೆಸುತ್ತಿರುವ ಬಿಜೆಪಿಯನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ ಎಂದು ಸಿಎಂ ಕರೆ ನೀಡಿದರು.
ಈ.ತುಕಾರಾಮ್ ಅವರು ನನ್ನ ಬಲವಂತಕ್ಕೆ, ಪಕ್ಷದ ಮಾತಿಗೆ ಬೆಲೆ ಕೊಟ್ಟು ಲೋಕಸಭೆಗೆ ಸ್ಪರ್ಧಿಸಿದರು. ಈ.ತುಕರಾಮ್ ಅವರು ಸಂಡೂರು ಜನತೆಯ ಮೇಲೆ ಬಹಳ ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾರೆ. ಈ.ತುಕಾರಾಮ್ ಅವರಂತಹ ಕಾಯಕ ನಾಯಕ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. ಹೀಗಾಗಿ ಸಂಡೂರು ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಿಮ್ಮ ಆಶೀರ್ವಾದ ಹೀಗೇ ಮುಂದುವರೆಯಲಿ ಎಂದು ಮನವಿ ಮಾಡಿದರು.
ಸಂಡೂರಿನ ಜನತೆಯೂ ಸೇರಿ ರಾಜ್ಯದ ಜನತೆಗೆ ಐದೈದು ಗ್ಯಾರಂಟಿಗಳನ್ನು 5600000 ಕೋಟಿ ರೂ. ವೆಚ್ಚದಲ್ಲಿ ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ಬಿಜೆಪಿ ಯವರು ಸುಳ್ಳುಗಳನ್ನು ಎರಚುತ್ತಾ ಕುಳಿತಿದೆ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಬಿಜೆಪಿಯ ಪೆದ್ದ ಶಿಖಾಮಣಿಗಳು ಸುಳ್ಳುಗಳನ್ನು ಎರಚುತ್ತಾ ಕುಳಿತಿದ್ದಾರೆ. ಹಾಗಿದ್ರೆ ಬರೀ ಸಂಡೂರಿನ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ ಈ.ತುಕಾರಾಮ್ ಅವರು 1200 ಕೋಟಿ ರೂಪಾಯಿ ಅನುದಾನ ತರಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.