
ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಭಾರಿ ಮಳೆಯಿಂದ ತತ್ತರಿಸಿದ ಜನತೆ ಒಂದೆಡೆಯಾದರೆ, ಜುಲೈ ತಿಂಗಳಿನಲ್ಲೂ ಬೇಸಿಗೆಯನ್ನು ಮೀರಿಸುವ ರಣಬಿಸಿಲು ನೋಡಿ ತಲೆ ಮೇಲೆ ಕೈಹೊತ್ತು ಕುಳಿತವರು ಇನ್ನೊಂದೆಡೆ. ಬಳ್ಳಾರಿಯಲ್ಲಂತೂ ಮಳೆಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ಗುರುತಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರ್ನಾಟಕದ ಹಲವೆಡೆ ಭೀಕರ ಬರಗಾಲ ಆವರಿಸುವ ಸೂಚನೆ ಎದ್ದು ಕಾಣುತ್ತಿದೆ. ಬಳ್ಳಾರಿಯಲ್ಲಿ ನದಿ-ಕೆರೆಗಳು ಸಂಪೂರ್ಣ ಬತ್ತಿಹೋಗುತ್ತಿದ್ದರೆ, ಬೀದರ್ ಮುಂತಾದೆಡೆ ಜೀವನಾಡಿಯಾಗಬೇಕಿದ್ದ ಬೆಳೆಗಳು ಕಣ್ಣಮುಂದೆಯೇ ಒಣಗುತ್ತಿರುವುದು ಅನ್ನದಾತನನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದಲ್ಲಿ ಬರಗಾಲದ ತೀವ್ರತೆ ಮಿತಿಮೀರಿದೆ. ಸರಿಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪಟ್ಟಣಕ್ಕೆ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದ್ದ 20 ಎಕರೆ ವಿಸ್ತೀರ್ಣದ ಕುಡುತಿನಿ ಕೆರೆ ಕಳೆದ ಎರಡು ತಿಂಗಳಿನಿಂದ ಸಂಪೂರ್ಣ ಬತ್ತಿ ಬರಡಾಗಿದೆ. ಈ ಕೆರೆಗೆ ಹತ್ತಿರದ ಮೂರು ಹಳ್ಳಗಳಿಂದ ನೀರು ಹರಿದು ಬರುತ್ತಿತ್ತು. ಆದರೆ ಅದಕ್ಕೆ ಅಡ್ಡಲಾಗಿ ಜೆಎಸ್‌ಡಬ್ಲ್ಯು (JSW) ಕಂಪನಿಯು ಕಾಂಪೌಂಡ್ ನಿರ್ಮಿಸಿರುವುದರಿಂದ ಕೆರೆಗೆ ನೀರು ಬರುವುದು ಸ್ಥಗಿತಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
2004 ರಲ್ಲಿ ಅಂದಿನ ಜನಸಂಖ್ಯೆಗೆ ತಕ್ಕಂತೆ ನಿರ್ಮಾಣವಾಗಿದ್ದ ಈ ಕೆರೆ, ಇಂದಿನ ಜನಸಂಖ್ಯೆಗೆ ಸಾಲುತ್ತಿಲ್ಲ. ಹೀಗಾಗಿ ಕೆರೆಯನ್ನು ವಿಸ್ತರಿಸಬೇಕು ಹಾಗೂ ಟಿಬಿ (ತುಂಗಭದ್ರಾ) ಡ್ಯಾಂನಿಂದ ತಕ್ಷಣ ನೀರು ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸದ್ಯ ಪಟ್ಟಣಕ್ಕೆ ಟ್ಯಾಂಕರ್ ಹಾಗೂ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ವರುಣದೇವ ಸಂಪೂರ್ಣ ಕೈಕೊಟ್ಟಿದ್ದು, ಹಿಂದೆಂದೂ ಕಾಣದ ಬರ ಆವರಿಸಿದೆ. ರೈತರು ಸಾಲ ಮಾಡಿ ಬಿತ್ತಿದ್ದ ತೊಗರಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ಮೊಳಕೆಯೊಡೆಯುವ ಹಂತದಲ್ಲೇ ಒಣಗಿ ಕಪ್ಪಾಗುತ್ತಿವೆ.
ಗಡಿ ಜಿಲ್ಲೆ ಬೀದರ್‌ನಲ್ಲಿ ಹೆಸರು, ಉದ್ದು ಮತ್ತು ಸೋಯಾಬೀನ್ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೋರ್‌ವೆಲ್ ಹಾಗೂ ಬಾವಿಗಳಿಂದ ಕೊಡಗಳಲ್ಲಿ ನೀರು ತಂದು ಹರಿಸುತ್ತಿದ್ದಾರೆ. ಕೃಷಿ ಮಾತ್ರವಲ್ಲದೆ ಪಶುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ ರಾಜ್ಯದ ಒಂದೆಡೆ ವರುಣನ ಆರ್ಭಟ: ರಾಯಚೂರು, ಕೊಪ್ಪಳದಲ್ಲಿ ಮಳೆ ಇಲ್ಲದೆ ಕಂಗಾಲಾದ ರೈತರು
ಮಲೆನಾಡು ಕೊಡಗಿನಲ್ಲೂ ಇದೇ ರೀತಿಯ ಪರಿಸ್ಥಿತಿ ಇರುವುದು ಆತಂಕ ಸೃಷ್ಟಿಸಿದೆ. ಜೂನ್‌ನಲ್ಲಿ ಆರಂಭದಲ್ಲಿ ಭರವಸೆ ಮೂಡಿಸಿದ್ದ ಮಳೆ ಈಗ ಕಣ್ಮರೆಯಾಗಿ ರಣಬಿಸಿಲು ಬಡಿಯುತ್ತಿದೆ. ಪ್ರತಿ ವರ್ಷ ಈ ಅವಧಿಗೆ 35 ಸಾವಿರ ಹೆಕ್ಟೇರ್‌ನಲ್ಲಿ ನಡೆಯುತ್ತಿದ್ದ ಭತ್ತದ ನಾಟಿ, ಈ ಬಾರಿ ಕೇವಲ 12 ಸಾವಿರ ಹೆಕ್ಟೇರ್‌ಗೆ ಸೀಮಿತಗೊಂಡಿದೆ. ಗದ್ದೆಗಳು ನೀರಿಲ್ಲದೆ ಬಿರುಕು ಬಿಟ್ಟಿವೆ.
ಮಳೆಯಿಲ್ಲದೆ ಕಂಗೆಟ್ಟಿರುವ ರಾಯಚೂರಿನ ಮಕ್ತಲ್ ಪೇಟೆಯ ಜನತೆ ಮತ್ತು ರೈತರು ಈಗ ದೈವದ ಮೊರೆ ಹೋಗಿದ್ದಾರೆ. ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ ಎಂದು ಪ್ರಾರ್ಥಿಸಿ, ಶಾಸ್ತ್ರೋಕ್ತವಾಗಿ ಕಪ್ಪೆಗಳ ಮದುವೆ ಮಾಡಿ ಇಡೀ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ್ದಾರೆ. ಇದರೊಂದಿಗೆ ಸಾಂಪ್ರದಾಯಿಕ ಢೋಣಿ ಪೂಜೆ ನೆರವೇರಿಸಿ ಮಳೆರಾಯನ ಕೃಪೆಗಾಗಿ ಮಂಡಿಯೂರಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕುಡಿಯುವ ನೀರು ಹಾಗೂ ರೈತರ ಬೆಳೆ ನಷ್ಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ