
ಬಳ್ಳಾರಿ, ಸೆಪ್ಟೆಂಬರ್ 23: ಕರ್ನಾಟಕದಲ್ಲಿ ಮಳೆಯ ತೀವ್ರ ಅಭಾವದ ನಡುವೆ ಬಳ್ಳಾರಿಯಲ್ಲಿ ಬೇಸಿಗೆಗಿಂತಲೂ ತೀವ್ರವಾದ ಬಿಸಿಲು ಮುಂದುವರಿದಿದೆ. ಪರಿಣಾಮ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಅತ್ಯಂತ ಕಳಪೆಯಾಗಿದ್ದು, ಪರಿಣಾಮವಾಗಿ ಬಹುತೇಕ ಎಲ್ಲಾ ಜಲಮೂಲಗಳು ಬತ್ತಿಹೋಗಿವೆ. ಇದರಿಂದ ಕೃಷಿಗೆ ಹಾಗಿರಲಿ, ಕನಿಷ್ಠ ಕುಡಿಯುವ ನೀರಿಗೂ ಜಿಲ್ಲೆಯ ಜನರು ಪರದಾಡಬೇಕಿರುವ ಸ್ಥಿತಿ ಉದ್ಭವಿಸಿದೆ.
ಪ್ರಸ್ತುತ ಮುಂಗಾರು ಅವಧಿಯಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 2,178 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಬಳ್ಳಾರಿಯಲ್ಲಿ 512, ಕೂಡ್ಲಿಗಿಯಲ್ಲಿ 288, ಕಂಪ್ಲಿಯಲ್ಲಿ 273, ಸಿರುಗುಪ್ಪದಲ್ಲಿ 665 ಹಾಗೂ ಸಂಡೂರಿನಲ್ಲಿ 440 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಇವುಗಳಲ್ಲಿ ಕೆಲವು ಕೊಳವೆಬಾವಿಗಳನ್ನು ಕುಡಿಯುವ ನೀರು ಪೂರೈಕೆಗೆ ಬಳಸಲಾಗುತ್ತಿದ್ದು, ಹಲವು ಗ್ರಾಮಗಳು ಇವುಗಳನ್ನೇ ಅವಲಂಬಿಸಿವೆ. ಆದರೆ, ನೀರಿನ ಕೊರತೆಯಿಂದ ಈಗಾಗಲೇ 200ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿಹೋಗಿವೆ. ಅಂತರ್ಜಲ ಮಟ್ಟ ಮತ್ತಷ್ಟು ಕುಸಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಳವೆಬಾವಿಗಳು ಬತ್ತಿಹೋಗುವ ಸಾಧ್ಯತೆಯಿದ್ದು, ಕುಡಿಯುವ ನೀರಿನ ಲಭ್ಯತೆ ಬಗ್ಗೆ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಜಿಲ್ಲೆಯ ಐದು ತಾಲೂಕುಗಳನ್ನೂ ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ನೀರಿನ ಕೊರತೆ ಎದುರಿಸುತ್ತಿರುವ ಹಲವು ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ಗಳು ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದ್ದು, ಆರ್‌ಒ ಘಟಕಗಳೂ ಕೊಳವೆಬಾವಿ ನೀರನ್ನೇ ಅವಲಂಬಿಸಿವೆ. ಕೊಳವೆಬಾವಿಗಳು ಬತ್ತಲು ಆರಂಭಿಸಿರುವುದರಿಂದ ಆರ್‌ಒ ಘಟಕಗಳಿಗೂ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Wed, 23 September 26