ಬದುಕಿನ ಬಂಡಿಯ ಚಕ್ರಕ್ಕೆ ಲಾಕ್​ಡೌನ್ ಕಲ್ಲು, ಮುಂದೆ ಸಾಗದ ಲಾರಿ ಡೈವರ್​ಗಳ ಜೀವನ

ಬದುಕಿನ ಬಂಡಿಯ ಚಕ್ರಕ್ಕೆ ಲಾಕ್​ಡೌನ್ ಕಲ್ಲು, ಮುಂದೆ ಸಾಗದ ಲಾರಿ ಡೈವರ್​ಗಳ ಜೀವನ

ಬಳ್ಳಾರಿ: ಸ್ಟೇರಿಂಗ್ ತಿರುಗಿಸಿದ್ರೆ ಮಾತ್ರ ಹೊಟ್ಟೆ ತುಂಬೋದು. ಲಾರಿಯ ಚಕ್ರಗಳು ತಿರುಗಿದ್ರೆ ಮಾತ್ರ ಜೀವನ ಚಕ್ರ ಓಡೋದು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿದ್ರೆ ಮಾತ್ರ ಮನೆಯವರ ಜೀವನ ಸಾಗೋದು. ತನಗೆ ಬದುಕು ಕೊಟ್ಟ ಬಂಡಿ ಸರಿ ಇದೆ ಅಂತ ನೋಡಿ ಅದನ್ನ ಸ್ಪಚ್ಫವಾಗಿ ಇಟ್ಟರೆ ಮಾತ್ರ ತಮ್ಮ, ತಮ್ಮವರ ಬದುಕು ಹಸನಾಗೋದು. ಎಷ್ಟೇ ಭಾರವಿದ್ರೂ ಅದನ್ನ ಹೊತ್ತು ಬಂಡಿಗೆ ತುಂಬಿಸಿದ್ರೆ ಮಾತ್ರ ಹಸಿದ ಹೊಟ್ಟೆಗೆ ಅನ್ನ ಬೀಳೋದು. ಆದ್ರೆ ಕೊರೊನಾ ಅನ್ನೋ ಹೆಮ್ಮಾರಿ ಈಗ ಇವರ ಬದುಕನ್ನ ಛಿದ್ರ ಛಿದ್ರ ಮಾಡಿದೆ.

ಬದುಕಿನ ಬಂಡಿಗೆ ಬ್ರೇಕ್ ಹಾಕಿದ ರಕ್ಕಸ ಕೊರೊನಾ! ನಿಜ, ಕೊರೊನಾ ಅನ್ನೋ ಬೂತವನ್ನ ಓದ್ದೋಡಿಸೋಕೆ ಬಿಟ್ಟಿರೋ ಅಸ್ತ್ರಕ್ಕೆ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಅದೆಷ್ಟೋ ಜನ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅದರಂತೆ ಬಳ್ಳಾರಿ ಜಿಲ್ಲೆಯ ಲಾರಿ ಡ್ರೈವರ್​ಗಳು, ಕ್ಲೀನರ್, ಹಮಾಲರ ಪರಿಸ್ಥಿತಿ ಕೂಡ ಇದರಿಂದ ಹೊರತಾಗಿಲ್ಲ.

ನಿತ್ಯ ಲಾರಿಯಲ್ಲಿ ಸರಕು, ಇನ್ನಿತರ ವಸ್ತುಗಳನ್ನ ಸಾಗಾಣಿಕೆ ಮಾಡಿದ್ರೆ ಮಾತ್ರ ಇವರಿಗೆ ಹಣ ಬರೋದು. ಇಲ್ಲದಿದ್ರೆ ಅವತ್ತು ಹೊಟ್ಟೆಗೆ ತಣ್ಣಿರ ಬಟ್ಟೆನೇ ಗತಿ. ಲಾರಿಗಳ ಚಕ್ರಗಳು ತಿರುಗಿದ್ರೆ ಮಾತ್ರ ಕ್ಲೀನರ್​ಗಳಿಗೆ, ಹಮಾಲರಿಗೆ ಕೆಲ್ಸ. ಆದ್ರೆ ಲಾಕ್‌ಡೌನ್ ಘೋಷಣೆಯಾದ ದಿನದಿಂದ ಇದುವರೆಗೆ ಇವರಿಗೆ ಯಾವುದೇ ಕೆಲ್ಸ ಇಲ್ಲ. ಇದರಿಂದ ನಿತ್ಯದ ಊಟಕ್ಕೂ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.

ಬಳ್ಳಾರಿ ಹೇಳಿ ಕೇಳಿ ಮೈನಿಂಗ್ ಇರೋ ಜಿಲ್ಲೆ. ಹೆಚ್ಚು ಸ್ಟೀಲ್ ಹಾಗೂ ಮೆದು ಕಬ್ಬಿಣ ಘಟಕಗಳು ಜಿಲ್ಲೆಯಲ್ಲಿವೆ. ಹೀಗಾಗಿ ನಿತ್ಯ ಸಾವಿರಾರು ಲಾರಿಗಳ ಸಂಚಾರ ಇದ್ದೇ ಇರುತ್ತದೆ. ಈ ಲಾರಿಗಳನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳಿವೆ. ಆದ್ರೆ ಕಳೆದ ಒಂದುವರೆ ತಿಂಗಳಿಂದ ಅಗತ್ಯ ವಸ್ತುಗಳ ಸಾಗಾಟ ಬಿಟ್ರೆ ಉಳಿದಂತೆ ಎಲ್ಲಾ ಲಾರಿಗಳ ಸಂಚಾರ ಬಂದ್ ಆಗಿದೆ.

ಇದರಿಂದ ಲಾರಿ ಡ್ರೈವರ್, ಕ್ಲೀನರ್​ಗಳು ಹಮಾಲರಿಗೆ ಕೆಲ್ಸ ಇಲ್ಲ. ನಿತ್ಯ ಕೆಲ್ಸ ಇದ್ರೆ ಮಾತ್ರ ಇವರಿಗೆ ಜೀವನ ಸಾಗಿಸಲು ಸಾಧ್ಯವಾಗೋದು. ಆದ್ರೆ ಈಗ ಕೆಲ್ಸವೂ ಇಲ್ಲ ಆತ್ತ ಸರ್ಕಾರದಿಂದ ಯಾವುದೇ ಸಹಾಯವೂ ಇಲ್ಲ. ನ್ಯಾಯ ಬೆಲೆ ಅಂಗಡಿಗಳಿಂದ ಅಕ್ಕಿ, ಗೋಧಿ ಕೊಟ್ಟಿದ್ದು ಬಿಟ್ರೆ ಮತ್ಯಾವುದು ಇವರಿಗೆ ಸಿಕ್ಕಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವ ನಮಗೆ ಸರ್ಕಾರ ಸಹಾಯ ಮಾಡ್ಬೇಕು ಅನ್ನೋದು ಲಾರಿ ಡ್ರೈವರ್ ಮನವಿಯಾಗಿದೆ.

ಒಟ್ನಲ್ಲಿ ಕೊರೊನಾದಿಂದ ಲಾರಿ ಮಾಲೀಕರು, ಡ್ರೈವರ್, ಕ್ಲೀನರ್, ಹಮಾಲಿಗಳ ಜೀವನ ಬೀದಿಗೆ ಬಿದ್ದಿದೆ. ನಿತ್ಯದ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಆದಷ್ಟು ಬೇಗ ಇಂತಹ ಕುಟುಂಬಗಳ ನೇರವಿಗೆ ಸರ್ಕಾರ ಬರಬೇಕಿದೆ.

Click on your DTH Provider to Add TV9 Kannada