ಬೆಂಗಳೂರು, ಮಾರ್ಚ್ 07: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ (Bengaluru Rameshwaram Cafe Bomb Blast) ಪ್ರಕರಣದ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ. ಎನ್ಐಎ ಬಿಡುಗಡೆ ಮಾಡಿರುವ ಭಾವಚಿತ್ರದಲ್ಲಿ ವ್ಯಕ್ತಿಯ ಅರ್ಧ ಮುಖ ಮಾತ್ರ ಕಂಡಿದೆ. ಹೀಗಾಗಿ ಅಧಿಕಾರಿಗಳ ತನಿಖೆಗೆ ಸಹಾಯವಾಗಲೆಂದು ಚಿತ್ರಗಾರರೊಬ್ಬರು ಬಾಂಬರ್ನ ಪೂರ್ತಿ ಮುಖದ ಇಮ್ಯಾಜಿನರಿ ಸ್ಕೆಚ್ ಬಿಡಸಿದ್ದಾರೆ.
ಎನ್ಐಎ ಬಿಡುಗಡೆ ಮಾಡಿದ ಸಿಸಿಟಿವಿ ಭಾವಚಿತ್ರವನ್ನು ಆಧಾರವಾಗಿಟ್ಟುಕೊಂಡು ಚಿತ್ರಗಾರ ಹರ್ಷ ಅವರು ಆರೋಪಿ ಪೂರ್ಣ ಮುಖವನ್ನು ಊಹಿಸಿಕೊಂಡು ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಂಕಿತ ಉಗ್ರ ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ವಿತೌಟ್ ಮಾಸ್ಕ್ ಟೋಪಿ ಕನ್ನಡಕ ಧರಿಸಿದ ರೀತಿ ಚಿತ್ರ ಬಿಡಿಸಿದ್ದಾರೆ. ಈ ಇಮ್ಯಾಜಿನರಿ ಸ್ಕೆಚ್ ತನಿಖೆಗೆ ಸಹಾಯವಾಗಬಹುದೆಂದು ಬೆಂಗಳೂರು ಪೊಲೀಸ್ ಮತ್ತು ಎನ್ಐಎಗೆ ಟ್ಯಾಗ್ ಮಾಡಿದ್ದಾರೆ.
ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದ ಶಂಕಿತ ವ್ಯಕ್ತಿಯ ಮಾಸ್ಕ್ ಇಲ್ಲದ ಫೋಟೋವನ್ನು ಎನ್ಐಎ ರಿಲೀಸ್ ಮಾಡಿದ್ದು, ಶಂಕಿತ ಬಾಂಬರ್ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಎನ್ಐಎ ಘೋಷಿಸಿದೆ. ಅಲ್ಲದೆ ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಎನ್ಐಎ ಹೇಳಿದೆ. ಶಂಕಿತ ಉಗ್ರನ ಸುಳಿವು ಇದ್ರೆ 080-29510900, 8904241100 ಸಂಖ್ಯೆಗೆ ಕರೆ ಮಾಡುವಂತೆ ಎನ್ಐಎ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. Info.blr.nia@gov.in ಗೂ ಮೇಲ್ ಮಾಡಿ ಶಂಕಿತನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಬೆಂಗಳೂರು ‘ಸ್ಫೋಟ’ಕ ಸುದ್ದಿ: ಕೆಫೆಯಲ್ಲಿ ಬಾಂಬ್ ಇಟ್ಟವನಿಗೆ ಇದ್ಯಾ ಇ-ಮೇಲ್ ನಂಟು?
NIA ಅಧಿಕಾರಿಗಳು ಮಾರ್ಚ್ 05 ರಂದು ಕೆಫೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದರು. ಕ್ಯಾಶ್ ಕೌಂಟರ್, ಸಿಸಿಕ್ಯಾಮರಾ ಪರಿಶೀಲನೆ ನಡೆಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪೊಲೀಸರು ಸಹ ಸ್ಥಳದಲ್ಲಿ ಕಲೆ ಹಾಕಿರುವ 38 ಸ್ಯಾಂಪಲ್‌ಗಳ ಮಾಹಿತಿಯನ್ನು NIA ಅಧಿಕಾರಿಗಳಿಗೆ ನೀಡಿದ್ದರು.
ಇನ್ನು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಎಲ್ಲೆಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಕೃತ್ಯಕ್ಕೆ ಬಳಕೆಯ ಮಾಹಿತಿ ಮೇರೆಗೆ ಎನ್ಎಐ ಅಧಿಕಾರಿಗಳ ಮತ್ತೊಂದಿಷ್ಟು ತಂಡ ದೇಶಾದ್ಯಂತ ಹಲವೆಡೆ ಭರ್ಜರಿ ಕಾರ್ಯಾಚರಣೆ ನಡೆಸಿದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ